ಮೇಯರ್ ಹುದ್ದೆಗೆ ಒಬ್ಬ ಮಾರ್ವಾಡಿಯನ್ನು ಆರಿಸಿದರ ವಿರುದ್ದ ವಿರೋಧ ವ್ಯಕ್ತಪಡಿಸುತ್ತಿರುವುದು ಕುರುಡಾದುದಲ್ಲ, ಕನ್ನಡಪರವಾದುದು, ನೈತಿಕವಾದುದು..

ಮಾರ್ವಾಡಿಯೊಬ್ಬರನ್ನು ಮೇಯರ್ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಈ ದೇಶದ ಪ್ರಜೆಯಾಗಿ ಯಾವುದೇ ಬಾಷೆ, ರಾಜ್ಯ, ಗಡಿ, ಮತ, ಜಾತಿಯವರಿಗೆ ಇಲ್ಲಿ ಯಾವುದೇ ಹುದ್ದೆ ಅಲಂಕರಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಈ ವಿಷಯದಲ್ಲಿ ಏನೂ ತಕರಾರಿಲ್ಲ. ಆದರೆ ವಾಸ್ತವವಾಗಿ ಬೇರೆ ಕಾರಣಕ್ಕೆ ಇಲ್ಲಿ ತಕರಾರಿದೆ!!
ಬೆಂಗಳೂರಿನ ಮಹಾನಗರಪಾಲಿಕೆಗೆ ಸ್ಥಳೀಯವಾಗಿ ನಡೆಸಿಕೊಂಡು ಬಂದ ಕನ್ನಡದ ಒಂದು ಸಂಪ್ರದಾಯವಿದೆ. ಇದನ್ನು ಮೊದಲಿನಿಂದಲೂ ಹಿಂದಿನವರು ಕಾಪಾಡಿಕೊಂಡು ಬರುತಿದ್ದರು. ಕೆಂಪೇಗೌಡರ ಈ ಬೆಂಗಳೂರು ಮೂಲತಃ ತಿಗಳ, ಗಾಣಿಗ, ಪದ್ಮಸಾಲಿ, ದೇವಾಂಗ, ತೊಗಟವೀರ, ವಿಶ್ವಕರ್ಮ, ಪಟ್ಟೇಗಾರ, ಬಲಿಜ, ಸವಿತ, ಕುಂಬಾರ, ಮಡಿವಾಳ, ಕಾಟಿಕ, ಮೊದಲಿಯಾರ್, ಮಾದಿಗರು, ಹೊಲೆಯರು, ಕ್ರೈಸ್ತ, ಮುಸ್ಲಿಂ ಮುಂತಾದ ಹಿಂದುಳಿದವರ ನೆಲೆಯಾಗಿತ್ತು. ಇವರೊಂದಿಗೆ ವೈಣಿಕರಾದ ವೀರಶೈವರೂ ಬೆರೆತಿದ್ದರು. ತಮ್ಮ ಮನೆಮಾತು ಏನೇ ಇರಲಿ ಸಾರ್ವಜನಿಕ ವ್ಯವಹಾರದಲ್ಲಿ ಇವರೆಲ್ಲಾ ಅಪ್ಪಟ ಕನ್ನಡ ಬಾಷಿಕರಾಗಿ ಕನ್ನಡವನ್ನೇ ಉಸಿರಾಡುತ್ತ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಕನ್ನಡವನ್ನೇ ಬಳಸುವವರಾಗಿದ್ದರು. ಹಳೇ ಬೆಂಗಳೂರಾದ ಬಳೇಪೇಟೆ, ಅಕ್ಕಿಪೇಟೆ, ಚಿಕ್ಕಪೇಟೆ, ತಿಗಳರಪೇಟೆ, ಬಿನ್ನಿಪೇಟೆಯೇ ಇವರ ಮೂಲನೆಲೆ, ಇವರೊಂದಿಗೆ ಬಸವನಗುಡಿ, ಗಾಂದೀ ಬಜಾರ್, ಮಲ್ಲೇಶ್ವರಂ ಮುಂತಾದೆಡೆ ಬ್ರಾಹ್ಮಣ,ಮತ್ತು ವೈಶ್ಯ ಸಮುದಾಯದವರೂ ನೆಲೆಯೂರಿದ್ದು ಇವರೆಲ್ಲಾ ಒಟ್ಟಾಗಿ ಸೇರಿ ಬೆಂಗಳೂರು ನಗರಪಾಲಿಕೆಯನ್ನು ನಿರಂತರವಾಗಿ ಕನ್ನಡದಲ್ಲೇ ನಡೆಸುತ್ತಾ, ಎಲ್ಲಾ ಜಾತಿಗಳ ನಡುವೆ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಸಾಮರಸ್ಯ, ಸಮಾನತೆಗಳನ್ನು ಕಾಯ್ದುಕೊಳ್ಳುತ್ತಾ ಬೆಂಗಳೂರನ್ನು ಅಭಿವೃದ್ದಿಯ ಕಡೆ ನಡೆಸುವುದರೊಂದಿಗೆ ಕನ್ನಡ ಕಟ್ಟುವ ಕೆಲಸವನ್ನೂ ಒಟ್ಟೊಟ್ಟಿಗೆ ನಡೆಸಿಕೊಂಡು ಹೋಗುತಿದ್ದರು. ಈ ಕಾರಣಕ್ಕೇ ಸುಮಾರು ದಶಕಗಳ ಕಾಲ ಬೆಂಗಳೂರು ಮಹಾನಗರಪಾಲಿಕೆಯ ಮುಂದಾಳತ್ವವನ್ನು ಈ ಕನ್ನಡ ಸಮುದಾಯಗಳೇ ನಡೆಸಿಕೊಂಡು ಹೋಗುತಿದ್ದವು.
ಬೆಂಗಳೂರಿಗೆ ಕ್ರಮೇಣ ಶಿಕ್ಷಣ, ಉದ್ಯೋಗ, ವ್ಯವಹಾರಕ್ಕಾಗಿ ಬರತೊಡಗಿದ ವಕ್ಕಲಿಗರು, ಕುರುಬರು, ಈಡಿಗರೂ ಕೂಡ ಈ ಪ್ರಕ್ರಿಯೆಯಲ್ಲಿ ಬರುಬರುತ್ತಾ ಒಂದಾಗಿ ಮೂಲತಃ ಕನ್ನಡಿಗರಾದ್ದರಿಂದ ತಾವೂ ಸಹಜವಾಗಿಯೇ ಕನ್ನಡ ಕಟ್ಟುವ ಸಂಸ್ಕೃತಿಯಲ್ಲಿ ಬಾಗಿಗಳಾದರು. ಆದರೆ ಬೆಂಗಳೂರಿಗೆ ಕೇವಲ ವ್ಯಾಪಾರಕ್ಕೆಂದು ಉತ್ತರದ ಗುಜರಾತ್, ರಾಜಸ್ತಾನಗಳಿಂದ ಬಂದ ಮಾರ್ವಾಡಿಗಳು ಮಾತ್ರ ಅವರ ಆತ್ಮವನ್ನು ಅವರ ರಾಜ್ಯಗಳಲ್ಲೇ ಇಟ್ಟು ವ್ಯಾಪಾರ, ವಾಣಿಜ್ಯ, ವ್ಯವಹಾರಗಳಿಗಾಗಿ ಮಾತ್ರ ತಮ್ಮ ದೇಹಗಳನ್ನು ಇಲ್ಲಿ ಉಳಿಸಿಕೊಂಡರು! ಇವರು ಇಲ್ಲಿ ಗಳಸಿದ ಹಣವನ್ನು ಗುಜರಾತ್, ರಾಜಸ್ತಾನಗಳಲ್ಲಿ ಬಂಡವಾಳ ಹೂಡಿಕೊಂಡರು, ಈ ಕಾರಣಕ್ಕೆ ಅವರು ಎಂದೂ ಕನ್ನಡ ಬಾಷೆಯನ್ನೂ ಕಲಿಯಲಿಲ್ಲ, ಇಲ್ಲಿನ ಕನ್ನಡ ಸಂಸ್ಕೃತಿಯೊಂದಿಗೆ ಬೆರೆಯಲೇ ಇಲ್ಲ! ಇಲ್ಲಿನ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲೇಯಿಲ್ಲ! ಬರುಬರುತ್ತಾ ಹಳೆಯ ಬೆಂಗಳೂರು ಎನಿಸಿಕೊಂಡ ಅಕ್ಕಿಪೇಟೆ, ಬಳೇಪೇಟೆ, ಮಾಮೂಲ್ ಪೇಟೆ, ತಿಗಳರ ಪೇಟೆ, ಚಿಕ್ಕಪೇಟೆ, ಅವೆನ್ಯೂ ರಸ್ತೆ, ಬಿ.ವಿ.ಕೆ. ಐಯ್ಯಂಗಾರ್ ರಸ್ತೆಗಳುಳ್ಳ ಏರಿಯಾಗಳನ್ನು ತಾವು ಕಬ್ಜ ಮಾಡುತ್ತಾ ಅಲ್ಲಿದ್ದ ಕನ್ನಡಿಗರಾದ ಹಿಂದುಳಿದ ವರ್ಗಗಳನ್ನು ನಿದಾನಕ್ಕೆ ಅಲ್ಲಿಂದ ಜಾಗ ಕಾಲಿ ಮಾಡಿಸಿದರು. ತಾವು ನೆಲೆನಿಂತ ಮನೆ, ಮಳಿಗೆ ಮತ್ತು ತಮ್ಮ ಜಾಗದಲ್ಲಿ ಬೇರೊಬ್ಬರು ಬಾರದಂತೆ ಕಟ್ಟೆಚ್ಚರವಹಿಸಿದರು! ತಮ್ಮ ಮನೆ, ಮಳಿಗೆ ಮತ್ತು ಅಂಗಡಿಗಳನ್ನು ಭದ್ರಕೋಟೆಗಳಂತೆ ಕಟ್ಟಿಕೊಂಡರು. ಇಂದು ಈ ಪ್ರದೇಶದಲ್ಲಿ ಸ್ಥಳೀಯ ಕನ್ನಡಿಗರನ್ನು ಭೂತಗನ್ನಡಿ ಹಾಕಿ ಹುಡುಕಬೇಕು!? ಇಂದು ಅತ್ಯುತ್ತಮವಾದ ತರಕಾರಿ, ಹಣ್ಣು, ಹಾಲು, ಗಿಣ್ಣು ಸಿಗುವುದು ಕೂಡ ಇಲ್ಲೇ!? ಇದರರ್ಥ ಬೆಂಗಳೂರಿನ ಎಲ್ಲಾ ಉತ್ತಮವಾದುದು, ಅಮೂಲ್ಯವಾದುದು ಈ ಕನ್ನಡೇತರರಿಗೆ ಮಾತ್ರ ಸಿಗುತ್ತಿದೆ ಎಂಬುದು.
ನಾವು ಕನ್ನಡಪರ ಹೋರಾಟ ಅಂದಾಗಲೆಲ್ಲ ತಮಿಳರ ವಿರುದ್ದ, ಉರ್ದು ಬಾಷಿಕರ ವಿರುದ್ದ ಕೆಂಗಣ್ಣು ಬಿಟ್ಟು ನೋಡತೊಡಗಿದೆವು‌ ಆದರೆ ನಾವೆಂದೂ ಈ ಮಾರ್ವಾಡಿಗಳ ಕಡೆ ನೋಡಲೇ ಇಲ್ಲ. ಇವರ ನಯ ನಾಜೂಕುಗಳು ನಮ್ಮನ್ನು ಕೆರಳಿಸಲೇಯಿಲ್ಲ. ಇವರು ನಮ್ಮ ಕೆಲ ಕನ್ನಡ ಹೋರಾಟಗಾರರಿಗೂ ಅನೇಕ ಕಾರಣಗಳಿಗಾಗಿ ಆಪ್ತರಾದರು! ನಮ್ಮ ಕನ್ನಡ ಕಾವಲು ಸಮಿತಿಗಳು, ಕನ್ನಡ ಅಭಿವೃದ್ದಿ ಪ್ರಾಧಿಕಾರಗಳೂ ಕೂಡ ಇವರ ತಂಟೆಗೆ ಹೋಗಲಿಲ್ಲ!?
ಈಗ ಪ್ರಶ್ನೆ ಇರುವುದೆಂದರೆ ಇವರಿಗೆ ಬೆಂಗಳೂರಿನ ವಾಣಿಜ್ಯ,‌ ವ್ಯಾಪಾರ, ವಹಿವಾಟು ಹೊರತುಪಡಿಸಿದರೆ ಮತ್ತೇನೂ ಬೇಕಿಲ್ಲ. ಇಲ್ಲಿನ ಬಾಷೆ, ಸಂಸ್ಕೃತಿ, ಗಡಿ, ಮನುಷ್ಯ ಸಂಭಂದಗಳಲ್ಲಿ ಯಾವುದೇ ರೀತಿಯಲ್ಲಿ ಪಾಲ್ಗೊಳ್ಳುವಿಕೆ ಇಲ್ಲದವರಿಗೆ ಮೇಯರ್ ಹುದ್ದೆ ದೊರಕಿದರೆ ಯಾರಿಗೆ ಪ್ರಯೋಜನ? ಯಾರಿಗೆ ಲಾಭ? ಮಾರ್ವಾಡಿ ಬಾಷೆಯನ್ನು ಹೊರತುಪಡಿಸಿ ಅವರು ಸ್ಥಳೀಯ ಬಾಷೆಯಾದ ಕನ್ನಡದ ಬಗ್ಗೆ ಕನಿಷ್ಟ ಪ್ರೀತಿ ತೋರಿ ಮುಖ್ಯವಾಹಿನಿಯಲ್ಲಿ ಬೆರೆತ ಉದಾಹರಣೆಗಳು ತೀರಾ ಕಡಿಮೆ. ಆದ್ದರಿಂದ ಮೇಯರ್ ಹುದ್ದೆಗೆ ಒಬ್ಬ ಮಾರ್ವಾಡಿಯನ್ನು ಆರಿಸಿದರ ವಿರುದ್ದ ವಿರೋಧ ವ್ಯಕ್ತಪಡಿಸುತ್ತಿರುವುದು ಕುರುಡಾದುದಲ್ಲ, ಕನ್ನಡಪರವಾದುದು, ನೈತಿಕವಾದುದು..

– ಸಿ.ಎಸ್.ದ್ವಾರಕಾನಾಥ್

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.