
ಹಾವೇರಿ,ಮೇ.12: ಮುಂಗಾರು ಹಂಗಾಮಿಗೆ ರೈತರ ಕೃಷಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕೃಷಿ ಇಲಾಖೆ ಸಿದ್ಧವಾಗಿದೆ.ಅಲ್ಲದೇ ಮುಂಗಾರು ಹಂಗಾಮಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ಪೂರೈಸಲು ಇಲಾಖೆ ಬದ್ಧವಾಗಿದೆ.
2020-21 ನೇ ಸಾಲಿನ ಮುಂಗಾರು ಹಂಗಾಮಿಗೆ ರೈತರಿಗೆ ಅಗತ್ಯವಾದ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ನೀಡಲಾಗುತ್ತಿದ್ದು, ಮೆಕ್ಕೆಜೋಳವನ್ನು ಸಾಮಾನ್ಯ ವರ್ಗದವರಿಗೆ ರೂ. ೨೦, ಪರಿಶಿಷ್ಟ ಜಾತಿ/ವರ್ಗದ ರೈತರಿಗೆ ರೂ. ೩೦ ರಿಯಾಯಿತಿ ದರದಲ್ಲಿ ಇಲಾಖೆ ನೀಡುತ್ತಿದೆ.
ಇಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮತಕ್ಷೇತ್ರ ಹಿರೇಕೆರೂರಿನಲ್ಲಿ ರಿಯಾಯಿತಿ
ದರದಲ್ಲಿ ನೀಡಲಾಗುವ ಬಿತ್ತನೆ ಬೀಜಕ್ಕೆ ಸಾಂಕೇತಿಕವಾಗಿ ಚಾಲನೆ ನೀಡಿದರು.ಇಂದು ಸಾಂಕೇತಿಕವಾಗಿ ಒಂದಿಷ್ಟು ರೈತರಿಗೆ ಮುಸುಕಿನ ಜೋಳ ಬಿತ್ತನೆ ಬೀಜವನ್ನು ರಿಯಾಯಿತಿ ದರದಲ್ಲಿ ವಿತರಿಸಲಾಯಿತು.
ಬಳಿಕ ಮಾತನಾಡಿದ ಸಚಿವರು, ಕಳಪೆ ಬಿತ್ತನೆ ಬೀಜ ಮಾರಾಟ ಜಾಲವನ್ನು ಬೇಧಿಸಲಾಗಿದ್ದು, ಅಧಿಕಾರಿಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರೈತರ ಬಿತ್ತನೆಗೆ ಅಗತ್ಯವಾದ ರಸಗೊಬ್ಬರ ಹಾಗೂ ಬಿತ್ತನೆಬೀಜಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮಕೈಗೊಳ್ಳಲಾಗಿದೆ. ರೈತ ಉಳಿದರೆ ದೇಶ ಉಳಿಯಲಿದೆ ಎಂದು ಸಚಿವರು ಕರೆ ನೀಡಿದರು.
ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಹಿರೇಕೆರೂರು ತಾಲೂಕಿನಲ್ಲಿ ಮುಸುಕಿನಜೋಳ ಪ್ರಮುಖ ಬೆಳೆಯಾಗಿದೆ. ಸಚಿವರ ನಿರ್ದೇಶನದಂತೆ ಕಳಪೆ ನಕಲಿ ಬಿತ್ತನೆಬೀಜ ಮಾರಾಟಗಾರರನ್ನು ನಾಶ ಮಾಡುವಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದ್ದು, ಹಿಂದಿನಂತೆಯೇ ನಕಲಿತನವನ್ನು ಬೇಧಿಸುವ ಕೆಲಸ ಮುಂದುವರೆದಿದೆ ಎಂದರು.
ಮುಂಗಾರಿಗೆ ಒಟ್ಟು ಶೇ.೮೨ ರಷ್ಟು ಸಾಗುವಳಿ ಕ್ಷೇತ್ರದಲ್ಲಿ ಬಿತ್ತನೆಯಾಗಲಿದೆ. ಒಟ್ಟು ಮುಂಗಾರಿಗೆ ೫೫,೬೪೮ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿಯಿದೆ. ಇದರಲ್ಲಿ ೪೫,೬೬೦ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಗುರಿಯಿದೆ. ಭತ್ತ ೧,೭೬೮ ಹೆಕ್ಟೇರ್ ಹತ್ತಿ ೭, ೦೯೫ ಹೆಕ್ಟೇರ್ ಬಿತ್ತನೆ ಗುರಿಯಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ್ ಹಾಜರಿದ್ದರು.
City Today News
(citytoday.media)
9341997936