
ಬೆಂಗಳೂರು ಜುಲೈ 10: ರಾಜ್ಯಮಟ್ಟದಲ್ಲಿ ಅನುಷ್ಠಾನಗೊಂಡಿರುವ ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಜಗದೀಶ ಶೆಟ್ಟರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರಿನಲ್ಲಿಂದು ಕರ್ನಾಟಕ ಉದ್ಯೋಗ ಮಿತ್ರದ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು, ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ಉಪಕ್ರಮಗಳು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಕೂಡಾ ಅನುಷ್ಠಾನಗೊಳ್ಳಬೇಕಾಗಿದೆ. ಬೇರೆ ಬೇರೆ ಜಿಲ್ಲೆಗಳಲ್ಲಿ ಬೇರೆ ಬೇರೆಯದೇ ಆದಂತಹ ಹಲವಾರು ಅನುಮತಿ ಪತ್ರಗಳು ಹಾಗೂ ವಿಧಾನಗಳನ್ನು ಅನುಸರಿಸಲಾಗುತ್ತಿದೆ. ಇದು ಕೈಗಾರಿಕೋದ್ಯಮಿಗಳಲ್ಲಿ ಕೆಲವು ಗೊಂದಲಗಳನ್ನು ಉಂಟುಮಾಡುತ್ತಿವೆ. ಈಸ್ ಆಫ್ ಡೂಯಿಂಗ್ ಬ್ಯೂಸಿನೆಸ್ ನ ಉಪಕ್ರಮಗಳ ಪ್ರಾಮಾಣಿಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಿ ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೈಗಾರಿಕಾ ಹೆಲ್ಪ್ ಲೈನ್:
ಇದೇ ವೇಳೆ ರಾಜ್ಯಾದ್ಯಂತ ಕೈಗಾರಿಕೋದ್ಯಮಿಗಳು ಎದುರಿಸುವ ಸಮಸ್ಯೆಗಳಿಗೆ ಈಗಾಗಲೇ ಇರುವ ಸುಲಭ ಪರಿಹಾರಗಳ ಮಾಹಿತಿಗಳು ಸಾರ್ವಜನಿಕರಿಗೆ ತಲುಪುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಒಂದು ಹೆಲ್ಪ್ ಲೈನ್ ನ್ನು ಪ್ರಾರಂಭಿಸುವಂತೆ ಸೂಚನೆ ನೀಡಿದರು. ಈ ಹೆಲ್ಪ್ಲೈನ್ ಮುಖಾಂತರ ಬರುವ ದೂರುಗಳನ್ನ ತಕ್ಷಣ ಪರಿಹರಿಸಲು ಕ್ರಮ ಹಾಗೂ ಸಲಹೆಗಳನ್ನು ಅಳವಡಿಕೊಳ್ಳಲು ಕ್ರಮ ಕೈಗೊಳ್ಳುವ ವ್ಯವಸ್ಥೆಯನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಾದೇಶಿಕ ಕಚೇರಿಗಳ ಬಗ್ಗೆ ಚಿಂತನೆ:
ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವ ಕರ್ನಾಟಕ ಉದ್ಯೋಗ ಮಿತ್ರ ಹಾಗೂ ಇನ್ನಿತರೆ ಪ್ರಮುಖ ಮುಖ್ಯ ಕಚೇರಿಗಳ ಪ್ರಾದೇಶಿಕ ಕಚೇರಿಗಳನ್ನು ಉತ್ತರ ಕರ್ನಾಟಕ ಸೇರಿದಂತೆ ಪ್ರಮುಖ ಜಿಲ್ಲೆಗಳಲ್ಲಿ ಪ್ರಾರಂಭಿಸುವ ನಿಟ್ಟಿನಲ್ಲಿ ಚಿಂತನೆ ಪ್ರಾರಂಭಿಸುವಂತೆ ತಿಳಿಸಿದರು.
ಪರಿಸರ ಮಾಲಿನ್ಯ ಮಂಡಳಿಯ ಜೊತೆ ಸಭೆ:
ರಾಜ್ಯದ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕೆಲವು ಕ್ರಮಗಳ ಸುಧಾರಣೆಯ ಬಗ್ಗೆ ಕೈಗಾರಿಕೋದ್ಯಮಿಗಳು ಹಲವಾರು ಸಲಹೆಗಳನ್ನು ನೀಡಿದ್ದಾರೆ. ಕೈಗಾರಿಕಾ ಇಲಾಖೆ ಪರಿಸರ ಮಾಲಿನ್ಯ ಮಂಡಳಿಯ ಜೊತೆಯಲ್ಲಿ ಸಮನ್ವಯ ಸಾಧಿಸುವುದು ಬಹಳ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಮಂಡಳಿಯ ಅಧ್ಯಕ್ಷರೊಂದಿಗೆ ಸಭೆಯನ್ನು ಆಯೋಜಿಸುವಂತೆ ಸೂಚನೆ ನೀಡಿದರು. ಅಲ್ಲದೆ, ಇತ್ತೀಚೆಗೆ ಕೇಂದ್ರ ಸರಕಾರ ಪರಿಸರ ಕಾಯ್ದೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲು ಕರಡನ್ನು ಬಿಡುಗಡೆಗೊಳಿಸಿದೆ. ಕೈಗಾರಿಕಾ ಇಲಾಖೆಯಿಂದ ಕೆಲವು ಸಲಹೆಗಳನ್ನು ನೀಡುವಂತೆ ಅಧಿಕಾರಿಗಳಿಗೆ ಇದೇ ಸಂಧರ್ಭದಲ್ಲಿ ಸೂಚನೆ ನೀಡಿದರು.
ಇನ್ವೆಸ್ಟ್ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿ ಒಡಂಬಡಿಕೆಯಾಗಿದ್ದವುಗಳನ್ನು ಈಗಾಗಲೇ 14 ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪನೆಗೆ ಮುಂದಾಗಿವೆ. ಈಗಾಗಲೇ 1000 ಕೋಟಿ ರೂಪಾಯಿಗಳ ಹೂಡಿಕೆಯಾಗಿದ್ದು, 3349 ಉದ್ಯೋಗಾವಕಾಶಗಳು ದೊರೆಯಲಿವೆ. ಕೋವಿಡ್ – 19 ರ ಪರಿಣಾಮ ಕೈಗಾರಿಕೆಗಳ ಸ್ಥಾಪನೆಯ ಕ್ರಮಕ್ಕೆ ಸ್ವಲ್ಪ ಹಿಂಜರಿಕೆಯಾಗಿದ್ದು, ಇದಕ್ಕೆ ವೇಗ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಲ್ಲದೆ, ರಾಜ್ಯದಲ್ಲಿ ಬಹಳಷ್ಟು ಪ್ರಮುಖ ಕೈಗಾರಿಕೆಗಳು ಇವೆ. ಆದರೆ, ರಾಜ್ಯ ಕೇವಲ ಐಟಿ ಮತ್ತು ಬಿಟಿಯಲ್ಲಿ ಮಾತ್ರ ಮುಂಚೂಣಿಯಲ್ಲಿದೆ ಎನ್ನುವ ಭಾವನೆ ಜನರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿರುವ ಕೈಗಾರಿಕೆಗಳು ಹಾಗೂ ರಾಜ್ಯ ಕೈಗಾರಿಕಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಬಗ್ಗೆ ರಾಜ್ಯ, ದೇಶ ಹಾಗೂ ವಿದೇಶಗಳಲ್ಲಿ ಪ್ರಚುರ ಪಡಿಸುವ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ದಿ ಆಯುಕ್ತೆ ಶ್ರೀಮತಿ ಗುಂಜನ್ ಕೃಷ್ಣಾ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರೇವಣ್ಣ ಗೌಡ, ಕೆಐಎಡಿಬಿ ಸಿಇಒ ಡಾ ಶಿವಶಂಕರ್ ಪಾಲ್ಗೊಂಡಿದ್ದರು.
City Today News
(citytoday.media)
9341997936