
ಮೈಸೂರು ಸಂಸ್ಥಾನದ ಕೊನೆಯ ಅರಸ ಮತ್ತು ಸ್ವತಂತ್ರ್ಯಾನಂತರ ಮೈಸೂರು ರಾಜ್ಯದ ಮೊದಲ ರಾಜ್ಯಪಾಲರಾಗಿದ್ದ ರಾಜರ್ಷಿ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜನ್ಮ ಜಯಂತಿ ಇಂದು. ದಕ್ಷತೆ, ಅಂತಃಕರಣ, ದೂರದೃಷ್ಟಿಯುಳ್ಳ ನೇತಾರರಾಗಿದ್ದ ಜಯಚಾಮರಾಜೇಂದ್ರ ಒಡೆಯರ್ ಅವರು, ಲೋಕ ಕಂಡ ಮಹಾನ್ ವಿದ್ವಾಂಸರು, ಸಂಗೀತ ಶಾಸ್ತ್ರಜ್ಞರೂ, ವಾಗ್ಗೇಯಕಾರರೂ ಆಗಿದ್ದರು. ದಕ್ಷ ಆಡಳಿತಗಾರರಾಗಿ, ಕನ್ನಡ ನಾಡಿನ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರು ನಮ್ಮ ಸನಾತನ ಧರ್ಮದ ಆಶಯದಂತೆ ರಾಜ್ಯಾಡಳಿತ ನಿರ್ವಹಿಸಿದ್ದರು. ಅರಸೊತ್ತಿಗೆಯನ್ನು ಭಾರತದ ಆಡಳಿತದಲ್ಲಿ ವಿಲೀನಗೊಳಿಸುವ ಸರ್ದಾರ್ ಪಟೇಲ್ ಅವರ ನಿರ್ಧಾರವನ್ನು ಒಪ್ಪಿ ಮೈಸೂರು ಸಂಸ್ಥಾನವನ್ನು ಗಣರಾಜ್ಯದಲ್ಲಿ ವಿಲೀನಗೊಳಿಸಿದ ಪ್ರಪ್ರಥಮ ದೊರೆ ಇವರು. ಪ್ರಜಾಪ್ರಭುತ್ವವಾದಿಯಾಗಿದ್ದ ಇವರು ಪ್ರಜಾ ಪ್ರಾತಿನಿಧಿಕ ಸಭೆ (ಇಂದಿನ ವಿಧಾನ ಪರಿಷತ್) ಸ್ಥಾಪಿಸಿ, ಹಲವಾರು ನಾಯಕರುಗಳ ರಾಜಕೀಯ ಬೆಳವಣಿಗೆಗೆ ಕಾರಣಕರ್ತರಾಗಿದ್ದರು. ವಿಶ್ವ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಜೋಗದಲ್ಲಿ ಸ್ಥಾಪಿಸಲಾಗಿರುವ ಶರಾವತಿ ನದಿಗೆ ಅಣೆಕಟ್ಟು ಮತ್ತು ಜಲವಿದ್ಯುದಾಗಾರ ಒಡೆಯರ್ ಅವರ ಕೊಡುಗೆ.
ಭಾರತದ ಆಡಳಿತರಂಗದ ಇತಿಹಾಸದಲ್ಲಿಯೇ ಪ್ರಥಮವಾಗಿ ಪಂಚವಾರ್ಷಿಕ ಯೋಜನೆ ಜಾರಿಗೆ ತಂದ ಧೀಮಂತರು ಒಡೆಯರ್ ಅವರು.

ಕನ್ನಡ ನಾಡು ಕಂಡ ಅಗ್ರಮಾನ್ಯ ಸಾಧಕರಾದ ಇವರ ಸೇವೆ ಮತ್ತು ಸಾಧನೆಗಳು ನಮಗೆ ಆದರ್ಶಪ್ರಾಯವಾಗಿವೆ.
ಇಂತಹಾ ರಾಜನೀತಿಜ್ಞ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ 101ನೇ ಜಯಂತಿ ಯಂದು ಅವರಿಗೆ ನನ್ನ ಗೌರವಪೂರ್ಣ ನಮನಗಳು.
– ಶ್ರೀ .ರಮೇಶ್ ಜಾರಕಿಹೊಳಿ ಜಲಸಂಪನ್ಮೂಲ ಸಚಿವರು
ಕರ್ನಾಟಕ ಸರ್ಕಾರ
City Today News
(citytoday.media)
9341997936