ಎಸ್.ಎಸ್.ಎಲ್.ಸಿ. ಪರೀಕ್ಷೆ -2021 ತಂದೊಡ್ಡಿರುವ ಆತಂಕಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ  ಪ್ರೋತ್ಸಾಹಾಂಕ ( ಸ್ಪೆಷಲ್ ವೆಯ್ಟೇಜ್ )ನೀಡಲು ಒತ್ತಾಯ

ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಜಂಟಿ ಪತ್ರಿಕಾ ಗೋಷ್ಠಿ ಎಸ್.ಎಸ್.ಎಲ್.ಸಿ. ಪರೀಕ್ಷೆ -2021 ತಂದೊಡ್ಡಿರುವ ಆತಂಕಗಳು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹಾಂಕ ( ಸ್ಪೆಷಲ್ ವೆಯ್ಟೇಜ್ ) ನೀಡುವ ಕುರಿತು ಕರ್ನಾಟಕ ರಾಜ್ಯದ ಉದ್ದಗಲಕ್ಕೂ ವ್ಯಕ್ತವಾದ ವ್ಯಾಪಕವಾದ ಸಾರ್ವಜನಿಕ ಒತ್ತಾಯಗಳ ನಡುವೆಯೂ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಅನಗತ್ಯ ತರಾತುರಿಯಿಂದ 2021 ರ ಸಾಲಿನ ಎಸ್ . ಎಸ್ . ಎಲ್ . ಸಿ , ಪರೀಕ್ಷೆಯನ್ನು ನಡೆಸಿದೆ . ಇಡೀ ದೇಶದಲ್ಲೇ ಹತ್ತನೆಯ ತರಗತಿಯ ಪರೀಕ್ಷೆಗಳು ರದ್ದಾಗಿದ್ದರೂ , ಕರ್ನಾಟಕ ಸರ್ಕಾರ ಮಾತ್ರ ಲಕ್ಷಾಂತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ , ಅದರಲ್ಲೂ ದಲಿತ , ಹಿಂದುಳಿದ ವಿದ್ಯಾರ್ಥಿಗಳಿಗೆ , ವಿಶೇಷವಾಗಿ ಬಡ ವಿದ್ಯಾರ್ಥಿನಿಯರಿಗೆ ಹಾಗೂ ರಾಜ್ಯದ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳಿಗೆ ಮಾರಕವಾಗುವ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯನ್ನು ಹಠಕ್ಕೆ ಬಿದ್ದಂತೆ ನಡೆಸಿದೆ . ಈ ಪರೀಕ್ಷೆಯ ಸಾಧಕ , ಬಾಧಕಗಳ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳ ಗಮನ ಸೆಳೆಯಲು ನಾವು ಬಯಸುತ್ತೇವೆ . ತಮ್ಮೊಡನೆ ಮುಕ್ತ ಚರ್ಚೆಗಾಗಿ ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರುತ್ತಿದ್ದೇವೆ ಹಾಗೂ ನಮ್ಮ ಕಳಕಳಿಯ ಮನವಿಯನ್ನು ಸಲ್ಲಿಸುತ್ತಿದ್ದೇವೆ :

1. ಕಳೆದೆರಡು ವರ್ಷಗಳ ಸಾಂಕ್ರಾಮಿಕದ ಸಂಕಷ್ಟದ ಕಾಲದಲ್ಲೂ ಗ್ರಾಮೀಣ ಪ್ರದೇಶಗಳ ಬೋಧಕ , ಬೋಧಕಿಯರು ಹಾಗೂ ಶಿಕ್ಷಣ ಇಲಾಖೆ ಬೋಧನೆಯ ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಿ ವಿದ್ಯಾರ್ಥಿಗಳನ್ನು ತಲುಪಲು ಪ್ರಯತ್ನಿಸಿರುವುದನ್ನು ನಾವು ಮೆಚ್ಚುಗೆಯಿಂದ ಸ್ವಾಗತಿಸುತ್ತೇವೆ . ಆದರೂ ವಾಸ್ತವವಾಗಿ ನೋಡಿದರೆ , ಗ್ರಾಮೀಣ ವಿದ್ಯಾರ್ಥಿ , ವಿದ್ಯಾರ್ಥಿನಿಯರ ದೃಷ್ಟಿಯಿಂದ ಕಳೆದ ಎರಡು ವರ್ಷಗಳು ಬಹುತೇಕವಾಗಿ ಶೂನ್ಯ ಕಲಿಕಾ ವರ್ಷಗಳೇ ಆಗಿವೆ . ಇಡೀ ಡಿಜಿಟಲ್ ಶಿಕ್ಷಣ ಹಾಗೂ ದೂರದರ್ಶನದ ಮೂಲಕ ನೀಡಲಾದ ಶಿಕ್ಷಣ ಗ್ರಾಮೀಣ ಭಾಗದ ಹಾಗೂ ನಗರಗಳ ಬಡ ಕುಟುಂಬಗಳ ಶೇಕಡ ಮೂವತ್ತು ಭಾಗ ವಿದ್ಯಾರ್ಥಿಗಳನ್ನೂ ತಲುಪಿಲ್ಲ . ಅದರಲ್ಲೂ ಡಿಜಿಟಲ್ ವ್ಯವಸ್ಥೆ ದೊರೆಯದಿರುವ ಬಡ ವಿದ್ಯಾರ್ಥಿನಿಯರನ್ನಂತೂ ಇದು ಶೇಕಡ 20 ರಷ್ಟೂ ತಲುಪಿಲ್ಲ . ಇದು ಇಡೀ ಕರ್ನಾಟಕದ ಜನತೆ ಬಲ್ಲ ವಾಸ್ತವ ಸತ್ಯ . ಈ ಅಸಹಾಯಕ ಮಕ್ಕಳಿಗೆ ಅಕಸ್ಮಾತ್ ಬೋಧನೆ ತಲುಪಿದ್ದರೂ ಅದು ನಿಜವಾದ ಕಲಿಕೆಯಂತೂ ಆಗಿಲ್ಲ ಎಂಬುದು ಕೂಡ ಸತ್ಯ ಈ ದೃಷ್ಟಿಯಿಂದ ನೋಡಿದಾಗಲಂತೂ ಶ್ರೀಮಂತ ಹಾಗೂ ಬಡ ವರ್ಗಗಳ ಮಕ್ಕಳ ನಡುವಣ ಅಂತರವನ್ನು , ಗ್ರಾಮ ಹಾಗೂ ನಗರಗಳ ವಿದ್ಯಾರ್ಥಿಗಳ ನಡುವಣ ಕಂದರವನ್ನು ಈ ಸಲದ ಎಸ್ . ಎಸ್ . ಎಲ್ . ಸಿ . ಪರೀಕ್ಷ ಭಯಾನಕವಾಗಿ ಹೆಚ್ಚಿಸಲಿದೆ ಎಂದು ನಮಗೆ ಆತಂಕವಾಗಿದೆ .

2. ಇಂಥ ಪರಿಸ್ಥಿತಿಯಲ್ಲಿ ಎಸ್ . ಎಸ್ . ಎಲ್ . ಸಿ . ವಿದ್ಯಾರ್ಥಿಗಳಿಂದ ಎಲ್ಲ ವಿಷಯಗಳ ಬಗ್ಗೆ ಅಸೈನ್‌ಮೆಂಟುಗಳನ್ನು ಬರೆಸಿ ಅವರಿಗೆ ‘ ಗ್ರೇಡ್’ಗಳನ್ನು ಕೊಟ್ಟು ಮುಂದಿನ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುವ ಕೆಲಸ ಮಾಡಿದ್ದರೆ ಸಾಕಾಗಿತ್ತು . ಆದರೆ ಯಾವುದೋ ಹಟಕ್ಕೆ ಬಿದ್ದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಪರೀಕ್ಷೆಯನ್ನು ಮಾಡಿಯೇ ತೀರಲು ಹೊರಟಿದೆ .

3. ಈ ಹಿನ್ನೆಲೆಯಲ್ಲಿ ಈ ಸಲದ ಎಸ್ . ಎಸ್ . ಎಲ್ . ಸಿ . ಪರೀಕ್ಷೆಯಲ್ಲಿ ಗ್ರಾಮೀಣ ಬಡ ದಲಿತ , ಹಿಂದುಳಿದ ವಿದ್ಯಾರ್ಥಿಗಳ , ಹಿಂದುಳಿದ ಹಾಗೂ ಅತಿ ಹಿಂದುಳಿದ ಪ್ರದೇಶಗಳ ವಿದ್ಯಾರ್ಥಿಗಳ , ಹಾಗೂ ವಿಶೇಷವಾಗಿ ಬಡ ವಿದ್ಯಾರ್ಥಿನಿಯರ ಹಿತಾಸಕ್ತಿಗಳನ್ನು ರಕ್ಷಿಸಲು ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ಸರ್ಕಾರ ಕೈಗೊಂಡಿರುವ ಕ್ರಮಗಳೇನೆಂಬುದನ್ನು ತಿಳಿಯಲು ನಾವು ಎದುರು ನೋಡುತ್ತಿದ್ದೇವೆ .

4. ಕಳೆದ ಎರಡು ವರ್ಷಗಳ ಕಲಿಕೆಯ ಹಿನ್ನಡೆಗಳು ಹಾಗೂ ಬರಲಿರುವ ಪರೀಕ್ಷೆಯ ಫಲಿತಗಳು ಹಾಗೂ ಅಂಕಗಳು ಅನುಕೂಲಸ್ಥ ವರ್ಗಗಳ ವಿದ್ಯಾರ್ಥಿಗಳು ಹಾಗೂ ಬಡ ವರ್ಗಗಳ ವಿದ್ಯಾರ್ಥಿಗಳ ನಡುವೆ , ಡಿಜಿಟಲ್ ಹಾಗೂ ನಾನ್ ಡಿಜಿಟಲ್ ವರ್ಗಗಳ ನಡುವೆ ಬಹುದೊಡ್ಡ ಕಂದರವನ್ನು ಸೃಷ್ಟಿಸಲಿದೆ ಹಾಗೂ ಭೀಕರವಾದ ಅಸಮಾನತೆ ಹೆಚ್ಚುವ ಸಾಧ್ಯತೆಯಿದೆ ಎಂಬುದನ್ನು ಒತ್ತಿ ಹೇಳಲು ಬಯಸುತ್ತೇವೆ .

5 , ಈ ವಾಸ್ತವ ಸ್ಥಿತಿಗಳ ಹಿನ್ನೆಲೆಯಲ್ಲಿ ಮುಂಬರುವ ಎಸ್ ಎಸ್ ಎಲ್ ಸಿ . ಪರೀಕ್ಷೆಯಲ್ಲಿ ಎಲ್ಲೆಲ್ಲಿ ವಿದ್ಯಾರ್ಥಿಗಳಿಗೆ ಅಂಕಗಳು ಕಡಿಮೆಯಾಗುವುವೋ ಅಲ್ಲೆಲ್ಲ ಅವರ ಎಂಟನೆಯ ಅಥವಾ ಒಂಬತ್ತನೆಯ ತರಗತಿಯ ಸಾಧನೆಯನ್ನು ಆಧರಿಸಿ ವಿಶೇಷ ಅಂಕಗಳನ್ನು ಕೊಡುವ ವ್ಯವಸ್ಥೆ ತುರ್ತಾಗಿ ಆಗಬೇಕಾಗಿದೆ ,

6. ಈ ಸಲದ ಪರೀಕ್ಷೆಯಲ್ಲಿ ಶಿಕ್ಷಣ ಇಲಾಖೆ ಉದಾರವಾದ ಮೌಲ್ಯಮಾಪನ ಮಾರ್ಗವನ್ನು ಬಳಸಿದರೂ ಕಲಿಕೆ ಪೂರ್ಣವಾಗಿ ಸಾಧ್ಯವಾಗದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ಆಗುವ ಅನ್ಯಾಯಗಳನ್ನು ಸರಿಪಡಿಸಲು ‘ ವಿಶೇಷ ಪ್ರೋತ್ಸಾಹಾಂಕ’ಗಳನ್ನು ( ಸ್ಪೆಷಲ್ ವೆಯೇಜ್ ) ಕೊಡುವ ನಿಟ್ಟಿನಲ್ಲಿ ಸರ್ಕಾರ ಯಾವ ಕ್ರಮ ಕೈಗೊಂಡಿದೆಯೆಂಬುದನ್ನೂ ನಾವು ತಿಳಿಯಬಯಸುತ್ತೇವೆ ,

7. ಜೊತೆಗೆ , ‘ ಸಾಂಕ್ರಾಮಿಕ ರೋಗ ಕಾಲದ ವಿಶೇಷ ಪ್ರೋತ್ಸಾಹಾಂಕ’ಗಳನ್ನು ( ಪ್ಯಾಂಡೆಮಿಕ್ ಪಿರಿಯಡ್ ಸ್ಪೆಷಲ್ ವೆಯೇಜ್ ) ನೀಡುವ ವ್ಯವಸ್ಥೆ ಈ ಸಾಲಿನ ಪರೀಕ್ಷೆಯ ಸಂದರ್ಭದಲ್ಲಿ ಅತ್ಯಂತ ಜರೂರಾಗಿ ಆಗಬೇಕಾಗಿದೆ . ವಿಶೇಷವಾಗಿ ಗ್ರಾಮೀಣ ಪ್ರದೇಶದ ಹಾಗೂ ನಗರಗಳಲ್ಲಿರುವ ಎಲ್ಲ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ , ಹಿಂದುಳಿದ , ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ , ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ ಮುಂದಿನ ಹಂತದ ವಿದ್ಯಾಭ್ಯಾಸದ ಸಂದರ್ಭದಲ್ಲಿ ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳೆರಡರಲ್ಲೂ ‘ ಆದ್ಯತಾ ಪ್ರವೇಶ ವ್ಯವಸ್ಥೆಯನ್ನು ಜಾರಿಗೆ ತರುವ ವ್ಯವಸ್ಥೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ , ಜಾರಿಗೆ ತರಬೇಕಾಗಿದೆ .

8. ಎಸ್.ಎಸ್.ಎಲ್.ಸಿ. ನಂತರದ ಮುಂದಿನ ಹಂತದ ಶೈಕ್ಷಣಿಕ ಆಯ್ಕೆಗಳು , ಶಿಷ್ಯ ವೇತನ , ಪ್ರೋತ್ಸಾಹಧನ ಎಲ್ಲದರಲ್ಲೂ ‘ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ’ವನ್ನು ( ‘ ಪ್ಯಾಂಡೆಮಿಕ್ ಪಿರಿಯಡ್ ವೆಯೇಜ್ ‘ ) ಖಾಸಗಿ ಹಾಗೂ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳು ಈ ಎರಡರಲ್ಲೂ ಜಾರಿಗೆ ತರುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಿ ಕ್ರಮ ಕೈಗೊಳ್ಳಬೇಕಾಗಿದೆ .

9. ಕಳೆದೆರಡು ವರ್ಷಗಳಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹಾಗೂ ನಗರಗಳಲ್ಲಿರುವ ಬಡ ವಿದ್ಯಾರ್ಥಿಗಳಿಗೆ ಹಾಗೂ ದಲಿತ , ಹಿಂದುಳಿದ , ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಾಗೂ ಮುಖ್ಯವಾಗಿ ವಿದ್ಯಾರ್ಥಿನಿಯರಿಗೆ “ ಸಾಂಕ್ರಾಮಿಕ ರೋಗಾವಧಿಯ ವಿಶೇಷ ಪ್ರೋತ್ಸಾಹಾಂಕ ‘ ( ‘ ಪ್ಯಾಂಡೆಮಿಕ್ ಪಿರಿಯಡ್  ವೆಯ್ಟೇಜ್  ‘ ) ಪದ್ಧತಿಯನ್ನು ಖಾಸಗಿ ಹಾಗೂ ಸರ್ಕಾರಿ ಉದ್ಯೋಗ ಎರಡರಲ್ಲೂ ಜಾರಿಗೊಳಿಸುವ ವ್ಯವಸ್ಥೆಯ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಬೇಕಾಗಿದೆ .

ಈ ಎಲ್ಲ ಕ್ರಮಗಳ ಜೊತೆಗೇ ಕರ್ನಾಟಕ ಸರ್ಕಾರವು ಒಟ್ಟು ಗ್ರಾಮೀಣ ಬಡ ವಿದ್ಯಾರ್ಥಿಗಳ ಹಿತ ರಕ್ಷಿಸಲು ಖಚಿತ ಭರವಸೆಗಳನ್ನು ನೀಡಬೇಕೆಂದು ಹಾಗೂ ಪ್ರಾಮಾಣಿಕ ಬದ್ಧತೆಯನ್ನು ಪ್ರಕಟಿಸಬೇಕೆಂದು ನಾವು ನಾಡಿನ ಎಲ್ಲ ಬಡ ವಿದ್ಯಾರ್ಥಿಗಳ ಪರವಾಗಿ ಕಾಳಜಿಯಿಂದ ಒತ್ತಾಯಿಸುತ್ತಿದ್ದೇವೆ . ವಿಶೇಷ ಸೂಚನೆ : ಆಗಸ್ಟ್ , 3-2021ರಂದು ಇಡೀ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ದಸಂಸ ಒಕ್ಕೂಟ , ರೈತ ಸಂಘ ಮತ್ತು ಸಮಾನ ಮನಸ್ಕ ಸಂಘಟನೆಗಳ ಜೊತೆಗೂಡಿ ಪ್ರತಿಭಟನೆ ನಡೆಸಿ , ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಗುವುದು .

ದಸಂಸ ಒಕ್ಕೂಟ ಮತ್ತು ರಾಜ್ಯ ರೈತ ಸಂಘ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಬಡಗಲಪುರ ನಾಗೇಂದ್ರ, ಗುರುಪ್ರಸಾದ್, ಮಾವಳ್ಳಿ ಶಂಕರ್ ಗುರುಪ್ರಸಾದ್,  ವಿ . ನಾಗರಾಜ,  ಲಕ್ಷ್ಮೀನಾರಾಯಣ,  ಎನ್ . ಮುನಿಸ್ವಾಮಿ, ಎನ್ . ವೆಂಕಟೇಶ್ ಹಾಜರಿದ್ದರು

City Today News
9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.