ಬಿಬಿಎಂಪಿ ಚುನಾವಣೆ ನಡೆಸಲು ಎಸ್.ಉದಯ್ ಕುಮಾರ್ ಆಗ್ರಹ

ಕಾರ್ಪೋರೇಟರ್ ಗಳಿದ್ದರೆ ಕೊಳ್ಳೆ ಹೊಡೆಯಲು ಬಿಡುವುದಿಲ್ಲ ಎಂಬ ಕಾರಣಕ್ಕೆ ಚುನಾವಣೆ ವಿಳಂಬ ಹುನ್ನಾರ / ಪೂಜೆ ಮಾಡಿ, ಕಮಿಷನ್ ಹೊಡೆಯುವುದಷ್ಟೇ ಶಾಸಕರ ಕೆಲಸ / ಮಾಜಿ ಕಾರ್ಪೋರೇಟರ್ ಕೆಂಡಾಮಂಡಲ

ಬೆಂಗಳೂರು: ಕಾರ್ಪೋರೇಟರ್ ಗಳಿದ್ದರೆ ದುಡ್ಡು ಹೊಡೆಯಲು ತಮಗೆ ಆಗುವುದಿಲ್ಲ ಎಂದು ಬೆಂಗಳೂರು ನಗರದ ಬಿಜೆಪಿ ಶಾಸಕರು ಹಾಗೂ ಸರ್ಕಾರ ಬಿಬಿಎಂಪಿ ಚುನಾವಣೆಯನ್ನು ಬೇಕಂತಲೇ ಮುಂದೂಡುತ್ತಿದೆ. ಪ್ರಜಾಪ್ರಭುತ್ವ ಮತ್ತು ಆಡಳಿತ ವಿಕೇಂದ್ರೀಕರಣದಲ್ಲಿ ನಂಬಿಕೆ ಇದ್ದರೆ, ಜನರ ಕಷ್ಟಗಳಿಗೆ ಸ್ಪಂದಿಸ ಬೇಕೆಂಬ ಇಚ್ಛಾಶಕ್ತಿ ಇದ್ದರೆ ಕೂಡಲೇ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಕಾರ್ಪೋರೇಟರ್ ಎಸ್.ಉದಯ್ ಕುಮಾರ್ ಹೇಳಿದರು.

ಮಹಾದೇವಪುರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 2 ವರ್ಷದಿಂದ ಚುನಾಯಿತ ಪ್ರತಿನಿಧಿಗಳಿಲ್ಲದೆ ಬಿಬಿಎಂಪಿ ಅನಾಥವಾಗಿದೆ. ನಾಗರಿಕರ ಸಮಸ್ಯೆಗಳನ್ನು ಆಲಿಸಲು ಸದಸ್ಯರಿಲ್ಲ. ಸುಪ್ರೀಂಕೋರ್ಟ್ 8 ವಾರಗಳ ಗಡುವು ನೀಡಿದ್ದರೂ ಸರ್ಕಾರ ಚುನಾವಣೆಗೆ ಮೀನಾಮೇಷ ಎಣಿಸುತ್ತಿದೆ ಎಂದು ಗುಡುಗಿದರು.

ಶಾಸಕರು ಇದ್ದಾರೆ ಅಲ್ಲಿ – ಇಲ್ಲಿ ಪೂಜೆ ಮಾಡುವುದಷ್ಟೇ ಕೆಲಸ. ಜನರ ಕೈಗೆ ಸಿಗುವುದಿಲ್ಲ. ಕಮಿಷನ್ ಹೊಡೆಯಲು ಕಷ್ಟವಾಗುತ್ತದೆ ಎಂದು ಬಿಜೆಪಿ ಶಾಸಕರು, ಸರ್ಕಾರ ಚುನಾವಣೆ ಬೇಡ ಎಂಬ ತೀರ್ಮಾನ ಮಾಡಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

ಬೆಂಗಳೂರು ಜನ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ಕುಂದುಕೊರತೆಗಳನ್ನು ಆಲಿಸಿ ಸೂಕ್ತ ಪರಿಹಾರ ನೀಡಬೇಕಿದೆ. ಸ್ಥಳೀಯ ಕಾರ್ಪೋರೇಟರ್ ಗಳಿಲ್ಲದಿದ್ದರೆ ಖಂಡಿತಾ ಆ ಕೆಲಸ ಸಾಧ್ಯವಿಲ್ಲ. ಬೆಂಗಳೂರು ನಗರ ಬಹಳ ವಿಸ್ತಾರವಾಗಿದೆ. ಕಾರ್ಪೋರೇಟರ್ ಗಳ ಅವಶ್ಯಕತೆ ಇದ್ದೇ ಇದೆ. ಬೆಂಗಳೂರು ನಾಗರಿಕರು ಮತ್ತು ಸಂಬಂಧಿಸಿದ ಅಧಿಕಾರಿಗಳ ನಡುವೆ ಸಂಪರ್ಕ ಕಡಿತವಾಗಬಾರದೆಂದರೆ ಕಾರ್ಪೋರೇಟರ್ ಗಳ ಆಯ್ಕೆ ನಡೆಯಲೇ ಬೇಕು. ಕೂಡಲೇ ಸರ್ಕಾರ ಚುನಾವಣೆ ನಡೆಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಆಗ್ರಹಿಸಿದರು.

‘ಜನಹಿತ’ ಆ್ಯಪ್ ಷಡ್ಯಂತ್ರ

ಜನಹಿತ ಎಂಬ ಆ್ಯಪ್ ಮಾಡಿ, ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಭರವಸೆ ನೀಡಿ ಮತದಾರರ ಗುರುತಿನ ಚೀಟಿ ಸಂಖ್ಯೆ ಪಡೆದು ನೋಂದಾಯಿಸಿಕೊಳ್ಳುವ ಕೆಲಸ ಬಿಜೆಪಿ ಮಾಡುತ್ತಿದೆ. ಇದು ಯಾವ ಜನಹಿತ ಕಾಯುವ ಆ್ಯಪ್ ಅಲ್ಲ. ಚುನಾವಣೆ ನಿಟ್ಟಿನಲ್ಲಿ ನಡೆಸಿರುವ ಕುತಂತ್ರ. ಐಡಿ ಕಾರ್ಡ್ ಪಡೆದು ತಮ್ಮ ಮತದಾರರನ್ನು ಮಾತ್ರ ಉಳಿಸಿಕೊಂಡು ಉಳಿದವರನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಷಡ್ಯಂತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ನಾವು ಕಾರ್ಯಕರ್ತರಿಗೆ,ಮತದಾರರಿಗೆ ಜಾಗೃತಿ ಮೂಡಿಸುತ್ತಿದ್ದೇವೆ. ಬಿಜೆಪಿ ಸರ್ಕಾರಕ್ಕೆ ಬಿಸಿಮುಟ್ಟಿಸುವ ಕೆಲಸವನ್ನೂ ಮಾಡುತ್ತೇವೆ ಎಂದು ಎಚ್ಚರಿಸಿದರು.

ಬಡವರಿಗೆ ಬರೆ

ಆಹಾರ ಪದಾರ್ಥಗಳ ಮೇಲೆ ಜಿಎಸ್ ಟಿ ಹಾಕಿ ಸರ್ಕಾರ ಬಡವರ ಹೊಟ್ಟೆ ಮೇಲೆ ಬರೆ ಹಾಕುತ್ತಿದೆ. ನೋಟ್ ಅಮಾನ್ಯ (ನೋಟ್ ಬ್ಯಾನ್) ಕಾರಣದಿಂದಲೇ ಜನ ತತ್ತರಿಸಿದ್ದರು. ಕೋವಿಡ್ 19 ನಿಂದ ಬದುಕು ದುಸ್ಥರವಾಗಿತ್ತು. ಇನ್ನೂ ಜನ- ಜೀವನ ಮೊದಲಿನ ಹಳಿಗೆ ಬಂದಿಲ್ಲ. ಈಗ ಬೆಲೆ ಏರಿಕೆ, ಜಿಎಸ್ ಟಿ ಬಿಸಿಯಿಂದ ಜನ ಜೀವನ ನಡೆಸುವುದು ಕಷ್ಟವಾಗಿದೆ. ಬಡ ಜನರ ವಿರೋಧಿ ಧೋರಣೆ ವಿರುದ್ಧ ಹೋರಾಟ ನಡೆಸುತ್ತೇವೆ ಎಂದರು.

ಇಡಿ, ಐಟಿ, ಸಿಐಡಿ ಅಂತಹ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ವಿರುದ್ಧ ವಾತಾವರಣ ಸೃಷ್ಟಿಸುವ ಕೆಲಸ ಕೇಂದ್ರ ಸರ್ಕಾರ ಮಾಡುತ್ತಿದೆ. ಸೋನಿಯಾಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ನಡೆಸುತ್ತಿರುವ ಕುತಂತ್ರ ಖಂಡಿಸಿ ದೇಶಾದ್ಯಂತ ನಡೆಸುತ್ತಿರುವ ಹೋರಾಟ ಸಹ ಇನ್ನೂ ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದರು.

ಮೋದಿ ಬಾಯಿಬಿಟ್ಟರೆ ಸುಳ್ಳು

ಕೆಪಿಸಿಸಿ ಪ.ಜಾತಿ, ಪ.ಪಂಗಡ ವಿಭಾಗದ ಉಪಾಧ್ಯಕ್ಷ ಟಿ.ನಾಗೇಶ್ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಬಾಯಿಬಿಟ್ಟರೆ ಸುಳ್ಳು. ಎರಡು ಬಾರಿ ಜನ ಅಧಿಕಾರ ಕೊಟ್ಟು ನೋಡಿದ್ದಾರೆ.ಯಾವುದೇ ಆಶ್ವಾಸನೆಗಳು ಈಡೇರಿಲ್ಲ ಎಂದು ಟೀಕಿಸಿದರು.

ಜಾತಿ, ಧರ್ಮಗಳನ್ನು ಒಡೆದು ಆಳುವ ಕೆಲಸ ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಕಟ್ಟಿದ ನಾನಾ ಸಾರ್ವಜನಿಕ ಸಂಸ್ಥೆಗಳನ್ನು ಮಾರಾಟ ಮಾಡಿ ಕೆಲವರ ಕೈಯಲ್ಲಿ ಮಾತ್ರ ಸಂಪತ್ತಿರಬೇಕು ಎಂಬ ವ್ಯವಸ್ಥೆ ರೂಪಿಸುತ್ತಿದೆ ಎಂದು ಹರಿಹಾಯ್ದರು. ಸಂವಿಧಾನವನ್ನು ನಾಶ ಮಾಡಿ ಮನುಸ್ಮೃತಿ ಜಾರಿ ಮಾಡುವ ಪ್ರಯತ್ನ ನಡೆಯುತ್ತಿದೆ. ಇದಕ್ಕೆ ಅವಕಾಶ ನೀಡಬಾರದು. ಜನ ಸಹ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಮನೆಯೊಂದು ಮೂರು ಬಾಗಿಲು ಧಾರವಾಹಿಯಂತೆ ಮಹಾದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಗ್ರಾಮವೊಂದು ಮೂರು ಭಾಗ ಮಾಡಿದ್ದಾರೆ. 3 ಭಾಗ ವಾರ್ಡ್ ಗಳಿಗೆ ಹಂಚಿಹೋಗಿದೆ. ಟ್ರಾಫಿಕ್, ನೀರಿನ ಸಮಸ್ಯೆ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿವೆ. ಹಣ ಕೊಡದೆ ಯಾವುದೇ ಕೆಲಸಗಳು ಕ್ಷೇತ್ರದಲ್ಲಿ ನಡೆಯುತ್ತಿಲ್ಲ ಎಂದು ಕಿಡಿಕಾರಿದರು.

6 ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಣೆ

ಕಾಂಗ್ರೆಸ್ ಚುನಾವಣೆಗೆ 6 ತಿಂಗಳ ಮೊದಲೇ ಅಭ್ಯರ್ಥಿಯನ್ನು ಘೋಷಿಸಲಿದೆ ಎಂದು ಕೆಪಿಸಿಸಿ ಮಹಾದೇವಪುರ ವಕ್ತಾರ ಲಕ್ಷ್ಮೀಪ್ರಸಾದ್ ಹೇಳಿದರು.

ಚುನಾವಣೆ ಹತ್ತಿರಬಂದಾಗ ಅಭ್ಯರ್ಥಿಗಳನ್ನು ಘೋಷಿಸುವುದು ಸೋಲಿಗೆ ಪ್ರಮುಖ ಕಾರಣ ಎಂಬುದನ್ನು ಸ್ಪಷ್ಟವಾಗಿ ಅರಿತಿದ್ದೇವೆ. ಹೀಗಾಗಿ ಈ ಬಾರಿ 6 ತಿಂಗಳ ಮೊದಲೇ ಅಭ್ಯರ್ಥಿಗಳ ಘೋಷಣೆ ಆಗಲಿದೆ ಎಂದರು.

ಮಹಾದೇವಪುರ ಸೇರಿದಂತೆ ರಾಜ್ಯದ 36 ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸೋತಿದೆಯೋ ಆ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಥಳೀಯ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಚಿಂತನೆ ಎಐಸಿಸಿ, ಕೆಪಿಸಿಸಿ ಮಟ್ಟದಲ್ಲಿ ನಡೆಯುತ್ತಿದೆ ಎಂದು ತಿಳಿಸಿದರು.

ಚುನಾವಣೆ ನಡೆಸಿದರೆ ಜನಾಭಿಪ್ರಾಯ ತಮ್ಮ ವಿರುದ್ಧ ಬರುತ್ತದೆ ಎಂಬ ಭಯದಲ್ಲಿ ಬಿಜೆಪಿ ಚುನಾವಣೆ ಮುಂದೂಡುತ್ತಿದೆ ಎಂದ ಅವರು ಭಯ ಇಲ್ಲದಿದ್ದರೆ ಕೂಡಲೇ ಚುನಾವಣೆ ನಡೆಸಿ ಎಂದು ಸವಾಲೆಸೆದರು.

“ಬಿ.ಎಸ್.ಯಡಿಯೂರಪ್ಪ ಅವರ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿರುವ ಬಸವರಾಜ ಬೊಮ್ಮಾಯಿ ಈಗ ಒಂಟಿಯಾಗಿದ್ದಾರೆ. ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಜನ ಮುಂದಿನ ದಿನಗಳಲ್ಲಿ ತಕ್ಕ ತೀರ್ಮಾನ ತೆಗೆದುಕೊಳ್ಳುತ್ತಾರೆ” ಎಸ್.ಉದಯ್ ಕುಮಾರ್, ಕಾಂಗ್ರೆಸ್ ಮಾಜಿ ಕಾರ್ಪೋರೇಟರ್.

City Today News

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.