2023 ವಿಧಾನಸಭಾ ಚುನಾವಣೆ: KRS ಪಕ್ಷದಿಂದ ಮಹಿಳಾ ಅಭ್ಯರ್ಥಿಗಳಿಗೆ ಆದ್ಯತೆ

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಮಹಿಳೆಯರ ಪರಿಸ್ಥಿತಿ ಉತ್ತಮವಾಗಿಲ್ಲ, ಪ್ರತಿನಿತ್ಯ ನಾವು ಮಹಿಳೆಯರ ಮೇಲೆ ಅವರು ಕೆಲಸ ಮಾಡುವ ಸ್ಥಳದಲ್ಲಿ, ಮನೆಗಳಲ್ಲಿ ಮತ್ತು ಇತರ ಕಡೆಗಳಲ್ಲಿ ಅತ್ಯಾಚಾರ, ದೌರ್ಜನ್ಯ, ಕಿರುಕುಳ ಮತ್ತು ಶೋಷಣೆ ಹೆಚ್ಚುತ್ತಿದೆ. ಇದಕ್ಕೆ ಪ್ರಮುಖ ಕಾರಣ ಮಹಿಳೆಯರ ರಾಜಕೀಯ ಪ್ರಾತಿನಿಧ್ಯ ಬಹಳ ಕಡಿಮೆ ಪ್ರಮಾಣದಲ್ಲಿರುವುದು. ಪ್ರಸ್ತುತ ಶಾಸನಸಭೆಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ನಗಣ್ಯವಾಗಿದ್ದು, ಈ ಪರಿಸ್ಥಿತಿಯನ್ನು ಉತ್ತಮಪಡಿಸುವ ಅಗತ್ಯವಿದೆ. ಅದರಲ್ಲೂ ಪುರುಷ ಪ್ರಧಾನ ಸಮಾಜದ ನಮ್ಮಲ್ಲಿ ಬದಲಾವಣೆ ತರುವುದು ಬಹಳ ಕಷ್ಟದ ವಿಷಯ, ಆದರೆ ರಾಜಕೀಯ ಪಕ್ಷಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದರೆ, ತ್ವರಿತವಾಗಿ ಬದಲಾವಣೆ ತರಬಹುದು. 

ರಾಜ್ಯದಲ್ಲಿ ಮತ್ತು ರಾಷ್ಟ್ರದಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಮಾತನಾಡುತ್ತ ಕಾಲಹರಣ ಮಾಡುತ್ತಿವೆಯೆ ಹೊರತು, ಅವರಿಗೆ ನೀಡಬೇಕಾದ ಅವಕಾಶಗಳನ್ನು ಕಿತ್ತುಕೊಳ್ಳಲು ಎಲ್ಲಾ ವ್ಯವಸ್ಥೆಗಳನ್ನು ನಿರ್ಮಿಸಿಕೊಂಡಿವೆ ಮತ್ತು ಕಾರಣಗಳನ್ನು ನೀಡುತ್ತವೆ. ತೃತೀಯ ಹಂತದ ಸರ್ಕಾರಗಳಾದ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ದಶಕಗಳೆ ಕಳೆದಿದ್ದರೂ ಕೂಡ, ಅಲ್ಲಿಯೂ ಕೂಡ ಪುರುಷರದೇ ಪಾರಮ್ಯ ನಡೆಯುತ್ತಿದೆ. ಕೇವಲ ಹೆಸರಿಗೆ ಮಾತ್ರ ಮಹಿಳಾ ಚುನಾಯಿತ ಪ್ರತಿನಿಧಿಗಳಿದ್ದು, ನಿಜವಾದ ಅಧಿಕಾರ ಅವರ ಪತಿ/ತಂದೆ/ಮಕ್ಕಳು ಚಲಾಯಿಸುತ್ತಿರುತ್ತಾರೆ. ವಿಧಾನ ಸಭೆ, ವಿಧಾನ ಪರಿಷತ್, ಲೋಕಸಭೆ ಮತ್ತು ರಾಜ್ಯಸಭೆಗಳಿಗೆ ನಡೆಯುವ ಚುನಾವಣೆಗಳಿಗೆ ಮಹಿಳೆಯರನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡಲಾಗುತ್ತದೆ. ಕನಿಷ್ಠ ಪಕ್ಷ ಮೇಲ್ಮನೆ ಚುನಾವಣೆಗಳಲ್ಲಿ, ನಿಸ್ಸಂದೇಹವಾಗಿ ಗೆಲ್ಲುವ ಕ್ಷೇತ್ರಗಳಲ್ಲೂ, ಅದರಲ್ಲೂ ನಾಮ ನಿರ್ದೇಶನ ಮಾಡುವಂತಹ ಸಂದರ್ಭಗಳಲ್ಲೂ ಮಹಿಳೆಯರನ್ನು ನಿರ್ಲಕ್ಷಿಸಲಾಗುತ್ತಿದೆ. ರಾಜ್ಯದಲ್ಲಿನ ಮೂರು ಭ್ರಷ್ಟ ಪಕ್ಷಗಳು ಎಂದಿಗೂ ಮಹಿಳೆಯರಿಗೆ, ಅವರಿಗೆ ಸಿಗಬೇಕಾದ ರಾಜಕೀಯ ಸ್ಥಾನಮಾನವನ್ನು ನೀಡುವುದಿಲ್ಲ. ಆ ಪಕ್ಷಗಳಿಗೆ ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಆದ್ಯತೆಯೆ ಹೊರತು, ಮಹಿಳೆಯರ ಸಬಲೀಕರಣ ಮತ್ತು ಅವರ ಮೇಲಿನ ದೌರ್ಜನ್ಯ ನಿವಾರಣೆ ಬೇಕಿಲ್ಲ.

ಈ ನಿಟ್ಟಿನಲ್ಲಿ ನಾಯಕತ್ವ ಗುಣವುಳ್ಳ ಮಹಿಳೆಯರು ಇಂದು ಸಮಾಜಕ್ಕೆ ಮತ್ತು ರಾಜಕೀಯ ಕ್ಷೇತ್ರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೆ.ಆರ್.ಎಸ್. ಪಕ್ಷವು ಮಹಿಳೆಯರಿಗೆ ವಿಶೇಷ ಆದ್ಯತೆಯನ್ನು ನೀಡುತ್ತಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಮೂರನೇ ಒಂದರಷ್ಟು ಕ್ಷೇತ್ರಗಳನ್ನು ಮಹಿಳೆಯರಿಗೆ ಮೀಸಲಿಡಲಿದ್ದು, ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಪಕ್ಷವೇ ಚುನಾವಣಾ ವೆಚ್ಚವನ್ನು ಕೂಡ ಭರಿಸಲಿದೆ.

ಕೆ.ಆರ್.ಎಸ್. ಪಕ್ಷವು ಪಾರದರ್ಶಕವಾಗಿ ಮತ್ತು ಪ್ರಜಾಪ್ರಭುತ್ವದ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಹಾಗು ಪಕ್ಷದ ಆಂತರಿಕ ಪ್ರಜಾಪ್ರಭುತ್ವ ಗಟ್ಟಿಗೊಳ್ಳುತ್ತಿದೆ. ಈಗಾಗಲೇ ವಿಧಾನಸಭಾ ಚುನಾವಣೆಗೆ 170 ಕ್ಕೂ ಹೆಚ್ಚು ಆಕಾಂಕ್ಷಿಗಳ ಸಂದರ್ಶನ ನಡೆಸಿ, ಅವರಲ್ಲಿ 60 ಕ್ಷೇತ್ರಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಘೋಷಿಸಿದ್ದು, ಈಗಾಗಲೇ ಅವರೆಲ್ಲ, ಆಯಾ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಕಳೆದ ಒಂದು ವರ್ಷದಿಂದ ಕೆಆರ್‍ಎಸ್ ಪಕ್ಷವು ನಿರಂತರವಾಗಿ ಪ್ರತಿ ತಿಂಗಳು ಸಂಭಾವ್ಯ ಅಭ್ಯರ್ಥಿಗಳ ಆಯ್ಕೆಗಾಗಿ ಸಂದರ್ಶನ ನಡೆಸಿಕೊಂಡು ಬರುತ್ತಿದ್ದು, ಇದೇ ಡಿಸೆಂಬರ್ 10 ಮತ್ತು 11 ರಂದು ಸಂಭಾವ್ಯ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತಿದೆ, ರಾಜ್ಯದ ನೆಲ, ಜಲ, ಭಾಷೆ, ಅರಣ್ಯ ಉಳಿಸಲು, ಸ್ವಚ್ಚ, ಪ್ರಾಮಾಣಿಕ ಮತ್ತು ನೈತಿಕ ರಾಜಕಾರಣದಲ್ಲಿ ಆಸಕ್ತಿಯುಳ್ಳವರು, ರಾಜ್ಯದಲ್ಲಿನ ಭ್ರಷ್ಟ ವ್ಯವಸ್ಥೆಯನ್ನು ಬದಲಾಯಿಸಬೇಕೆಂಬ ಆಕಾಂಕ್ಷೆಯುಳ್ಳವರು, ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಸಂದರ್ಶನ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಸ್ವಚ್ಚ-ಸುಂದರ-ಸದೃಢ-ಸಮೃದ್ಧ ಕರ್ನಾಟಕ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಲು ಈ ಮೂಲಕ ಕೋರಲಾಗುತ್ತಿದೆ. 

ದಿನಾಂಕ 10 ಮತ್ತು 11 ರಂದು ನಡೆಯುವ ಸಂಭಾವ್ಯ ಅಭ್ಯರ್ಥಿಗಳ ಸಂದರ್ಶನಕ್ಕೆ ಮಹಿಳೆಯರಿಗೆ 2,500/-   ಪುರುಷರಿಗೆ ರೂ. 5,000/- ಶುಲ್ಕವಿರುತ್ತದೆ, ಹೆಚ್ಚಿನ ಮಾಹಿತಿಗಾಗಿ 7975625575 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮಹಾಲಕ್ಷ್ಮೀ ಚನ್ನಕೇಶವ, ಪ್ರಧಾನ ಕಾರ್ಯದರ್ಶಿ – ಬೆಂಗಳೂರು ಮಹಾನಗರ ಮಹಿಳಾ ಸಮಿತಿ, ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.