
ಅಂಗನವಾಡಿ ವ್ಯವಸ್ಥೆಯೊಳಗೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದನ್ನು ವಿರೋಧಿಸಿ, ಕನಿಷ್ಟ ವೇತನ ಜಾರಿಗೊಳಿಸುವುದು. ಗ್ರಾಚ್ಯುಟಿ ಸೌಲಭ್ಯ, ನಿವೃತ್ತಿ ವೇತನ ಜಾರಿ, ಕಳಪೆ ಮೊಬೈಲ್‌ಗಳ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡುವುದು ಸೇರಿದಂತೆ ಅಂಗನವಾಡಿ ನೌಕರರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳನ್ನು ಪರಿಹರಿಸುವಂತೆ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಒತ್ತಾಯಿಸಲು ಎಐಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ದಿನಾಂಕ 22-12-2022 ರಂದು ಬೆಳಗಾವಿ ಚಲೋ ಚಳುವಳಿ”ಯನ್ನು ಹಮ್ಮಿಕೊಳ್ಳಲಾಗಿದೆ .
ಕಳೆದ 46 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅನುಷ್ಠಾನದ ರೂವಾರಿಗಳಾಗಿ ಕೇವಲ ಗೌರವಧನದ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರುಗಳಿಗೆ ಔಧ್ಯಮಿಕ ಮತ್ತು ಆರ್ಥಿಕ ಭದ್ರತೆ ನೀಡುವ ಕುರಿತು ನಿರ್ಲಕ್ಷ ವಹಿಸುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೇವಲ ಬಳಕೆಯ ವಸ್ತುಗಳಂತೆ ದುಡಿಸಿಕೊಳ್ಳುವ ಮೂಲಕ ಶೋಷಣೆ ಮಾಡಲಾಗುತ್ತಿದೆ.
ಸೇವಾ ಹಿರಿತನದ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ನೀಡಲಾಗುತ್ತಿರುವ ಗೌರವಧನದ ಮಾಸಿಕ ಹತ್ತರಿಂದ ಹನ್ನೊಂದುವರೆ ಸಾವಿರ ಹಾಗೂ ಸಹಾಯಕಿಯರಿಗೆ ಐದರಿಂದ ಐದುವರೆ ಸಾವಿರ
ರೂಪಾಯಿ ಸಂಭಾವನೆಯಲ್ಲಿ ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಬದುಕು ನಡೆಸುವುದು ಅತ್ಯಂತ ದುಸ್ಥರವಾಗಿದೆ.
ಆದುದರಿಂದ ಅಂಗನವಾಡಿ ವ್ಯವಸ್ಥೆಯನ್ನು ಉಳಿಸಿ-ಬೆಳೆಸಲು ಪೂರಕವಾಗಿ ಈ ಕೆಳಕಂಡ ಬೇಡಿಕೆಗಳನ್ನು ಈಡೇರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಅಗ್ರಹಿಸುತ್ತಿದ್ದೇವೆ.
ಬೇಡಿಕೆಗಳು :-
1. ಎಲ್.ಕೆ.ಜಿ-ಯು.ಕೆ.ಜಿ ತರಗತಿಗಳನ್ನು ಅಂಗನವಾಡಿ ಕೇಂದ್ರಗಳಲ್ಲಿಯ ಪ್ರಾರಂಭಿಸಲು ಒತ್ತಾಯಿಸಿ: ಕೇಂದ್ರ ಸರ್ಕಾರ ರೂಪಿಸಿರುವ ರಾಷ್ಟ್ರೀಯ ಶಿಕ್ಷಣ ನೀತಿ(NEP)ಯನ್ನು ಅಂಗನವಾಡಿ ವ್ಯವಸ್ಥೆಯೊಳಗೆ ಜಾರಿಗೊಳಿಸಲು ಏಕಪಕ್ಷೀಯವಾಗಿ ಆತುರ ಪಡುತ್ತಿರುವ ರಾಜ್ಯ ಸರ್ಕಾರದ ನಿಲುವು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ICDS) ಯ ಮೂಲ ಆಶಯಗಳಿಗೆ ಚ್ಯುತಿಯನ್ನುಂಟು ಮಾಡಲಿದೆ . ಆರು ವರ್ಷದ ವಯೋಮಾನದೊಳಗಿನ ಮಕ್ಕಳು ಮತ್ತು ಗರ್ಭಿಣಿ-ಬಾಣಂತಿಯರ ಪೌಷ್ಠಿಕ ಆಹಾರ-ಆರೋಗ್ಯದ ಬಗ್ಗೆ ಕಾಳಜಿವಹಿಸಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳನ್ನು ಎನ್.ಇ.ಪಿ ಅಡಿಯಲ್ಲಿ ಶಾಲಾ ಪ್ರಾಂಗಣಕ್ಕೆ ಒಳಪಡಿಸಿದರೆ ಐ.ಸಿ.ಡಿ.ಎಸ್ ಯೋಜನೆ ಅವಸಾನವಾಗಲಿದೆ. ಮಕ್ಕಳು ಮತ್ತು ಮಹಿಳೆಯರಿಗೆ ದೊರೆಯುತ್ತಿರುವ ಪೂರಕ ಪೌಷ್ಠಿಕ ಆಹಾರಕ್ಕೆ ಕಡಿವಾಣ ಬೀಳಲಿದ್ದು, ಭದ್ರತಾ ಕಾಯ್ದೆಯ ಸವಲತ್ತುಗಳಿಂದ ಮಕ್ಕಳು-ಮಹಿಳೆಯರು ವಂಚಿತರಾಗಲಿದ್ದಾರೆ. ಆದುದರಿಂದ ಈಗಿರುವ ಅಂಗನವಾಡಿ ವ್ಯವಸ್ಥೆಯನ್ನೆ ಮತ್ತಷ್ಟು ಬಲಗೊಳಿಸಲು ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ-ಯು.ಕೆ.ಜಿ ಪ್ರಾರಂಭಿಸಲು ಅವಕಾಶ ಮಾಡಬೇಕು ಹಾಗೂ ಮಕ್ಕಳ ಕಲಿಕೆಗೆ ಪೂರಕವಾಗಿ ಅಂಗನವಾಡಿ ಶಿಕ್ಷಕಿಯರಿಗೆ ಸೂಕ್ತ ತರಬೇತಿ ಮತ್ತು ಪಠ್ಯ ಪುಸ್ತಕಗಳನ್ನು ಒದಗಿಸಬೇಕು. ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ವರ್ಗಾವಣೆ ಪತ್ರ ನೀಡುವ ಜವಾಬ್ದಾರಿಯನ್ನು ಅಂಗನವಾಡಿ ಕೇಂದ್ರಗಳಿಗೆ ವಹಿಸಬೇಕೆಂದು ಒತ್ತಾಯಿಸುತ್ತೇವೆ.
2. ಕನಿಷ್ಠ ವೇತನ: ಇಂದಿನ ಬೆಲೆ ಏರಿಕೆ ಸೂಚ್ಯಂಕಕ್ಕನುಗುಣವಾಗಿ ಅಂಗನವಾಡಿ ಸಿಬ್ಬಂದಿಗಳಿಗೆ ನೀಡಲಾಗುತ್ತಿರುವ ಗೌರವ ಧನದಲ್ಲಿ ಜೀವನ ನಿರ್ವಹಣೆ ಕಷ್ಟ ಸಾಧ್ಯವಾಗಿದ್ದು, ಮಾಸಿಕ ಕನಿಷ್ಠ ವೇತನ 31500 ರೂಪಾಯಿ ನೀಡಲು ಕನಿಷ್ಠ ವೇತನ ಜಾರಿಗೊಳಿಸಬೇಕೆಂದು ಒತ್ತಾಯಿಸುತ್ತೇವೆ.
3. ಗ್ರಾಚ್ಯುಟಿ : ಗ್ರಾಚ್ಯುಟಿ ಸೌಲಭ್ಯ ಪಡೆಯಲು ಅಂಗನವಾಡಿ ಉದ್ಯೋಗಿಗಳು ಅರ್ಹರು ಎಂಬುದಾಗಿ ಗುಜರಾತ್ ಪ್ರಕರಣದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು,
ಸದರಿ ತೀರ್ಪಿನ ಆಧಾರದಲ್ಲಿ ರಾಜ್ಯದಲ್ಲಿ ಅಂಗವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ಸೌಲಭ್ಯ ನೀಡಲು ಆಡಳಿತಾತ್ಮಕ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತೇವೆ.
4. ಕಳಪೆ ಗುಣಮಟ್ಟದ ಮೊಬೈಲ್‌ಗಳನ್ನು ವಾಪಸ್ ಪಡೆದು ಮಿನಿಟ್ಯಾಬ್‌ಗಳನ್ನು ನೀಡಬೇಕು: ಅಂಗನವಾಡಿ ಕಾರ್ಯಕರ್ತೆಯರಿಗೆ ಕೇಂದ್ರಗಳಲ್ಲಿ ಫಲಾನುಭವಿಗಳ ದಾಖಲೆಗಳ ಸಂಗ್ರಹಕ್ಕಾಗಿ ನೀಡಲಾಗಿರುವ ಎಲ್.ಜಿ ಮೊಬೈಲ್‌ಗಳು ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದಾಗಿದ್ದು, ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಹಾಗೂ ಸಂಗ್ರಹಣ ಸಾಮರ್ಥ್ಯವು ಸಹ ಕಡಿಮೆ ಜಿಬಿಯದಾಗಿದ್ದು ಗ್ರಾಮಾಂತರ ಪ್ರದೇಶಗಳಲ್ಲಿ ನೆಟ್‌ವರ್ಕ್ ಸಮಸ್ಯೆಯು ಎದುರಾಗುತ್ತಿದ್ದು ಸುಲಲಿತವಾಗಿ ಕಾರ್ಯನಿರ್ವಹಿಸಲಾಗುತ್ತಿಲ್ಲ. ಹಾಗೂ ಮೊಬೈಲ್‌ಗಳು ಅತ್ಯಂತ ಚಿಕ್ಕದಾಗಿರುವುದರಿಂದ ಕಣ್ಣಿನ ಸಮಸ್ಯೆಯಿಂದ ಬಳಲುತ್ತಿರುವ ಕಾರ್ಯಕರ್ತೆಯರಿಗೆ ಸಣ್ಣ ಅಕ್ಷರಗಳು ಗೋಚರಿಸದೆ ದಾಖಲೆ ಸಂಗ್ರಹಣೆ ಮಾಡಲು ತೊಡಕುಂಟಾಗುತ್ತಿದೆ. ಅದುದರಿಂದ ವಿತರಿಸಲಾಗಿರುವ ಮೊಬೈಲ್‌ಗಳನ್ನು ಹಿಂಪಡೆದು ಅದರ ಬದಲಿಗೆ ಮಿನಿಟ್ಯಾಬ್‌ಗಳನ್ನು ನೀಡಬೇಕೆಂದು ಒತ್ತಾಯಿಸುತ್ತೇವೆ.
5. ಮಾರಣಾಂತಿಕ ಕಾಯಿಲೆ ಹೊಂದಿರುವವರಿಗೆ ಸ್ವಯಂ ನಿವೃತ್ತಿಗೆ ಅವಕಾಶ ಮಾಡಿಕೊಡುವ ಮೂಲಕ ಅವರಿಗೆ ಪರಿಹಾರ ಒದಗಿಸಬೇಕು ಹಾಗೂ ಅಂಗನವಾಡಿ ನೌಕರರನ್ನು ಸಾಮಾಜಿಕ ಸುರಕ್ಷ ಯೋಜನೆಯಾದ ಇ.ಎಸ್.ಐ ಸೌಲಭ್ಯ ಹಾಗೂ ಸರ್ಕಾರಿ ನೌಕರರಿಗಾಗಿ ರೂಪಿಸಿರುವ ನೌಕರ ಸ್ನೇಹಿ ಉಚಿತ ವೈದ್ಯಕೀಯ ಯೋಜನೆಯ ಸೌಲಭ್ಯ ಒದಗಿಸಲು ಕ್ರಮ ವಹಿಸಬೇಕೆಂದು ಒತ್ತಾಯಿಸಿ, ದಿನಾಂಕ 22.12.2022 ರಂದು ಗುರುವಾರ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸರ್ಕಾರದ ಗಮನ ಸೆಳೆದು ಸಮಸ್ಯೆಗಳ ಪರಿಹಾರಕ್ಕಾಗಿ “ಬೆಳಗಾವಿ ಚಲೋ” ಚಳುವಳಿ ನಡೆಸುವ ಮೂಲಕ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು. ಬಿ.ಅಮ್ಜದ್ – ರಾಜ್ಯಾಧ್ಯಕ್ಷರು & ಜಯಮ್ಮ – ರಾಜ್ಯ ಪ್ರಧಾನ ಕಾರ್ಯದರ್ಶಿ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು
City Today News – 9341997936