
ಲಿಂಗಾಯತ ಧರ್ಮದ ಸಾಂವಿಧಾನಿಕ ಮಾನ್ಯತೆಗಾಗಿ ಕರ್ನಾಟಕ ಸರ್ಕಾರ ನ್ಯಾಯ ಮೂರ್ತಿ ನಾಗಮೋಹನದಾಸ ಅವರ ನೇತೃತ್ವದ ತಜ್ಞರ ಸಮಿತಿಯ ವರದಿಯನ್ನು ಮತ್ತೊಮ್ಮೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲು ಒತ್ತಾಯಿಸಿ, ಇದೇ ತಿಂಗಳು 20 ರಂದು ಸೋಮವಾರ ಬೆಳಿಗ್ಗೆ 11.00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಒಂದು ದಿನದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ಲಿಂಗಾಯತ ಸಮನ್ವಯ ಸಮಿತಿಯ ಗೌರವಾಧ್ಯಕ್ಷರಾದ ಜಗದ್ಗುರು ಡಾ| ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಅವರು ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಮಾನ್ಯ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ನಾಗಮೋಹನದಾಸ ನೇತೃತ್ವದ ತಜ್ಞರ ಸಮಿತಿ ರಚಿಸಿ ಆ ಸಮಿತಿಯ ವರದಿ ಪ್ರಕಾರ ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಎಂದು ಸಂಪುಟ ಸಭೆಯಲ್ಲಿ ಅಂಗೀಕರಿಸಲಾಯಿತು ಮತ್ತು ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಹಾಗೂ ಲಿಂಗಾಯತರಿಗೆ ಧಾರ್ಮಿಕ ಅಲ್ಪಸಂಖ್ಯಾತರ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಧುರ್ದೈವವಶಾತ್ ಕೇಂದ್ರ ಸರ್ಕಾರ ಅದನ್ನು ಅನುಮೋದಿಸಲಿಲ್ಲ. ಈಗ ಬಿಜೆಪಿ ಸರ್ಕಾರವೇ ಎರಡೂ ಕಡೆ ಇರುವುದರಿಂದ ತಾವು ಅದನ್ನು ಮತ್ತೆ ಶಿಫಾರಸ್ಸು ಮಾಡಬೇಕೆಂದು ಬೊಮ್ಮಾಯಿ ಸರ್ಕಾರವನ್ನು ಒತ್ತಾಯಿಸಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದೇವೆ ಎಂದು ಪೂಜ್ಯರು ಹೇಳಿದರು.
ಕಲಬುರಗಿ ವಿಶ್ವವಿದ್ಯಾಲಯಕ್ಕೆ ಬಸವೇಶ್ವರ ವಿಶ್ವವಿದ್ಯಾಲಯವೆಂದು ನಾಮಕರಣ ಮಾಡುವುದು, ಕೂಡಲ ಸಂಗಮದ ಬಸವೈಕ್ಯ ಮಂಟಪದಲ್ಲಿ ಉಚಿತವಾಗಿ ಪ್ರವೇಶ ನೀಡಬೇಕು. ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಎಂದು ಸರ್ಕಾರ ಘೋಷಣೆ ಮಾಡಬೇಕು. ಬೆಂಗಳೂರಿನ ಯಶವಂತಪುರ ರೈಲ್ವೆ ನಿಲ್ದಾಣಕ್ಕೆ ವಿಶ್ವಗುರು ಬಸವೇಶ್ವರ ರೈಲ್ವೆ ನಿಲ್ದಾಣವೆಂದು ನಾಮಕರಣ ಮಾಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಇಟ್ಟುಕೊಂಡು ಸತ್ಯಾಗ್ರಹ ಮಾಡಲಾಗುತ್ತಿದೆ’ ಎಂದು ಪೂಜ್ಯ ಸ್ವಾಮೀಜಿ ತಿಳಿಸಿದರಲ್ಲದೆ, ಕರ್ನಾಟಕದ ಎಲ್ಲ ಜಿಲ್ಲೆಗಳಿಂದ ಮತ್ತು ಮಹಾರಾಷ್ಟ್ರ, ತೆಲಂಗಾಣ ಮುಂತಾದ ರಾಜ್ಯಗಳಿಂದ ಸುಮಾರು ಎರಡು ಸಾವಿರ ಜನ ಪ್ರಮುಖ ಹೋರಾಟಗಾರರು ಸೇರಿ ಸಾಂಕೇತಿಕ ಧರಣಿ ನಡೆಸಲಾಗುತ್ತಿದೆ.
ಮಹಾರಾಷ್ಟ್ರದ ಮುಂಬೈ ಮಹಾನಗರದಲ್ಲಿ ಕಳೆದ ಜನವರಿ 29 ರಂದು ನಡೆದ ಬೃಹತ್ ಲಿಂಗಾಯತ ಮಹಾರಾಲಿ ಅತ್ಯಂತ ಯಶಸ್ವಿಯಾಗಿ ಜರುಗಿದೆ. ಸುಮಾರು ನಾಲ್ಕು ರಾಜ್ಯಗಳ 1 ಲಕ್ಷ ಜನ ಲಿಂಗಾಯತ ಬಾಂಧವರು ಭಾಗವಹಿಸಿದ್ದರು. ಈಗ ಫೆಬ್ರುವರಿ 20 ರಂದು ಪ್ರಮುಖ ಕಾರ್ಯಕರ್ತರು ಬೆಳಿಗ್ಗೆ 11:00 ಗಂಟೆಗೆ ಫ್ರೀಡಂ ಪಾರ್ಕಿಗೆ ಒಂದು ಸತ್ಯಾಗ್ರಹದಲ್ಲಿ ಭಾಗವಹಿಸಬೇಕೆಂದು ಲಿಂಗಾಯತ ಸಮನ್ವಯ ಸಮಿತಿಯ ರಾಷ್ಟ್ರೀಯ ಅಧ್ಯಕ್ಷರಾದ ಅವಿನಾಶ್ ಭೋಸಿಕ ಕರೆಕೊಟ್ಟರಲ್ಲದೆ ಮಹಾರಾಷ್ಟ್ರ ರಾಜ್ಯದಿಂದ ಒಂದು ಸಾವಿರ ಲಿಂಗಾಯತ ಬಾಂಧವರು ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಜನ
ಲಿಂಗಾಯತ’ ಸಮನ್ವಯ ಸಮಿತಿಯಲ್ಲಿ ರಾಷ್ಟ್ರೀಯ ಬಸವ ದಳ, ಬಸವ ಬಳಗ, ಲಿಂಗಾಯತ ಧರ್ಮ ಮಹಾಸಭಾ, ಬಸವಕೇಂದ್ರ, ಅಕ್ಕನಾಗಲಾಂಭಿಕಾ ಮಹಿಳಾ ಗಣ ಹೀಗೆ 48 ಸಂಘಟನೆಗಳ ಒಕ್ಕೂಟ ಇದಾಗಿದೆ. ಆದ್ದರಿಂದ ಎಲ್ಲಾ ಬಸವ ಪರ ಮಠಾಧೀಶರು ಮತ್ತು ಸಂಘಟನೆಯವರಿಗೆ ಈ ಪತ್ರಿಕಾ ಗೋಷ್ಠಿಯ ಮೂಲಕ ಆದರದ ಆಮಂತ್ರಣ ನೀಡುತ್ತಿದ್ದೇವೆ. ಸರ್ವರೂ ಸ್ವಯಂ ಪ್ರೇರಣೆಯಿಂದ ಇದರಲ್ಲಿ ಭಾಗವಹಿಸಬೇಕೆಂದು ಕೋರುತ್ತೇವೆ. ಜಾಗತಿಕ ಲಿಂಗಾಯತ ಮಹಾಸಭಾ ಕೂಡಾ ಈ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂದು ಆಹ್ವಾನ ನೀಡಲಾಗಿದೆ ಎಂದು ಪೂಜ್ಯ ಡಾ|| ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
City Today News – 9341997936