*ಅಸ್ತಿತ್ವಕ್ಕೆ ಬಂದ ಕರ್ನಾಟಕ ರಂಗ ಮಹಾ ಪ್ರತಿಷ್ಠಾನ* ಸಮಗ್ರ ರಂಗಭೂಮಿ ರಂಗ ಕಲಾವಿದರ ಹಿತರಕ್ಷಣೆಗೆ ಮಹಾ ಪ್ರತಿಷ್ಠಾನವು ಅಡಿಗಲ್ಲಾಗಲಿದೆ

ಅಸ್ತಿತ್ವಕ್ಕೆ ಬಂದ ಕರ್ನಾಟಕ ರಂಗ ಮಹಾ ಪ್ರತಿಷ್ಠಾನ

ಸಾವಿರಾರು ವರ್ಷಗಳ ಇತಿಹಾಸ ಮತ್ತು ಪ್ರಾಚೀನತೆಯಿರುವ ಕರ್ನಾಟಕ ರಂಗಭೂಮಿಯಲ್ಲಿ ಲಕ್ಷಾಂತರ ಮಂದಿ ಕಲಾವಿದರು ರಂಗಭೂಮಿಯನ್ನೇ ಆಶ್ರಯಿಸಿ ಬದುಕಿದ್ದಾರೆ. ಬಣ್ಣವೇ ಇವರ ಬದುಕು ಮತ್ತು ಭರವಸೆ. ವೃತ್ತಿರಂಗಭೂಮಿ, ಹವ್ಯಾಸಿ ರಂಗಭೂಮಿ, ಗ್ರಾಮೀಣ ರಂಗಭೂಮಿ, ಜಾನಪದ ರಂಗಭೂಮಿ ಎನ್ನುವ ವಿಭಾಗಗಳು ಏರ್ಪಟ್ಟು ಕರ್ನಾಟಕ ರಂಗಭೂಮಿಯಲ್ಲಿ ಸಮಗ್ರ ಸಮನ್ವಯದ ಕೊರತೆ ಎದ್ದುಕಾಣುತ್ತಿದೆ. ರಂಗಭೂಮಿ ಕಲಾವಿದರು ಅಸಂಘಟಿತ ರಾಗಿದ್ದಾರೆ ಮತ್ತುಅತಂತ್ರರಾಗಿದ್ದಾರೆ.
ಕೊರೋನಾ ನಂತರದ ಕಲಾವಿದರ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಪ್ರತಿ ವಿಭಾಗದಲ್ಲೂ ಅನೇಕ ಸಂಘಟನೆಗಳು ಇದ್ದಾಗಿಯೂ ಸಮಗ್ರ ಕಲಾವಿದರನ್ನು ಏಕ ಚತ್ರದಡಿಯಲ್ಲಿ ಒಗ್ಗೂಡಿಸುವ ಪ್ರಯತ್ನ ಸಾಧ್ಯವಾಗಿಲ್ಲ. ಸರ್ಕಾರದ ಪ್ರಯೋಜನವನ್ನು ಪಡೆಯುವಲ್ಲಿ ತಮ್ಮನ್ನು ತಾವು ಕಲಾವಿದರು ಎಂದು ಹೇಳಿಕೊಳ್ಳುವ ಪುರಾವೆಗಳಿಲ್ಲದೆ ಯಾರು ಕಲಾವಿದರು? ಯಾರು ಕಲಾವಿದರಲ್ಲ, ಎನ್ನುವ ಗೊಂದಲ ಉಂಟಾಗಿದೆ.
ಚಲನಚಿತ್ರರಂಗದಲ್ಲಿ ಇರುವಂತೆ ಕಲಾವಿದರ, ತಂತ್ರಜ್ಞರ ಒಕ್ಕೂಟ ವ್ಯವಸ್ಥೆ ಇದುವರೆಗೆ ಜಾರಿಗೆ ಬಂದಿಲ್ಲ. ಕಲಾವಿದರಿಗೆ ಗುರುತಿನ ಚೀಟಿ, ಕಲಾವಿದರ ಸಂಘಟನೆ, ಕಲಾವಿದರ ನೊಂದಾವಣೆ ಮತ್ತು ಕಲಾವಿದರಿಗೆ ಪೂರಕವಾದ ಕಲ್ಯಾಣ ಯೋಜನೆಗಳ ಅನುಷ್ಠಾನದಲ್ಲಿ ಹಿನ್ನಡೆ ಉಂಟಾಗಿದೆ. ಕಲಾವಿದರ ಸಂರಕ್ಷಣೆ ,ಪೋಷಣೆ, ಕಲಾವಿದರ ಪ್ರಗತಿಗೆ ಪೂರಕವಾದ ಯೋಜನೆಗಳ ಅನುಷ್ಠಾನ ಮುಂತಾದ ವಿಚಾರಗಳಲ್ಲಿ ಕರ್ನಾಟಕ ರಂಗಭೂಮಿ ಕಲಾವಿದರು ಸಂಪೂರ್ಣವಾಗಿ ಸೋತಿದ್ದಾರೆ ಬಳಲಿದ್ದಾರೆ. ಇವುಗಳ ಹಿನ್ನೆಲೆಯಲ್ಲಿ ಕೊರೋನಾ ಸಂಕಷ್ಟ ಕಾಲದಲ್ಲಿ ರಂಗಭೂಮಿ ಕಲಾವಿದರು ಅನುಭವಿಸಿದ ವಿಷಮ ಪರಿಸ್ಥಿತಿಯನ್ನು ಅವಲೋಕಿಸಿ, ರಂಗಬ್ರಹ್ಮ ಡಾ.ಎಸ್.ಎಲ್.ಎನ್ ಸ್ವಾಮಿರವರ ಮುಂದಾಳತ್ವದಲ್ಲಿ ಸಮಗ್ರ ರಂಗ ಕಲಾವಿದರ ಸಂಘಟನೆಗೆ ವೇದಿಕೆ ಸಿದ್ಧವಾಗಿದೆ. N.S.D ಪದವೀಧರ ಮತ್ತು ಕೇಂದ್ರ ಸರ್ಕಾರದ ಸಾಂಸ್ಕೃತಿಕ ಧನಸಹಾಯ ಆಯೋಗದ ಸದಸ್ಯರು ಆಗಿದ್ದ ಗೋಪಾಲಕೃಷ್ಣ ನಾಯರಿ ಅವರ ಗೌರವ ಅಧ್ಯಕ್ಷತೆಯಲ್ಲಿ, ಮೈಸೂರು ರಂಗಾಯಣದ ಮಾಜಿ ನಿರ್ದೇಶಕರಾಗಿದ್ದ ಜನಾರ್ಧನ್ ಜೆನ್ನಿ ರವರ ಕಾರ್ಯದಕ್ಷತೆ ಯಲ್ಲಿ, ವೃತ್ತಿ ರಂಗಭೂಮಿ ನಟಿ,ಮಹಿಳಾ ವೃತ್ತಿ ಸಂಘದ ಮಾಲೀಕರಾದ,ನಾಟಕ ಅಕಾಡೆಮಿಯ ಮಾಜಿ ಅಧ್ಯಕ್ಷರು ಮಾಲತಿ ಸುಧೀರ್ ರವರ ಅಧ್ಯಕ್ಷತೆಯಲ್ಲಿ ಸಮಗ್ರ ರಂಗಭೂಮಿಯ ಮಹಾ ಪ್ರತಿಷ್ಠಾನವು ಅಸ್ತಿತ್ವಕ್ಕೆ ಬಂದಿದೆ.

ಹವ್ಯಾಸಿ ಮತ್ತು ವೃತ್ತಿ ರಂಗಭೂಮಿಯ ಸಂಪರ್ಕ ಸೇತುವೆಯಾಗಿರುವ ಪ್ರತಿಷ್ಠಾನ ದಲ್ಲಿ ರಂಗಶ್ರೀ ರಂಗಸ್ವಾಮಿ, ರೂಪಾಂತರ ಗಂಗಾಧರ್, ಮಾಲತೇಶ್ ಬಡಿಗೇರ್, ಮಧುಕೇಶಿ ಚಿಂದೋಡಿ, ಮಲ್ಲಿಕಾರ್ಜುನ ಸಾವಳಗಿ ,ಅ. ಬ.ಶಿವಕುಮಾರ, ವಿ.ಸಂತೋಷಿ ಪ್ರಶಾಂತ್, ಡಾ.ದೇವರಾಜ್, ದೇವರಾಜ್, ಗಂಗಾ ನಕ್ಷತ್ರ, ರವಿ ಸಿರಿವರ ಮುಂತಾದವರು ಪದಾಧಿಕಾರಿಗಳಾಗಿ ಪ್ರತಿಷ್ಠಾನದಲ್ಲಿ ಸಹ ಭಾಗಿಗಳಾಗಿದ್ದಾರೆ.

ಪ್ರತಿ ಜಿಲ್ಲೆಯು ಅಧ್ಯಕ್ಷರನ್ನು ಮತ್ತು ತಾಲೂಕುಗಳ ಉಪಾಧ್ಯಕ್ಷರನ್ನು ಒಳಗೊಂಡಂತೆ ಮಹಾ ಮಂಡಲವು ರಚನೆಯಾಗುತ್ತದೆ. ಕಲಾವಿದರ ಸಂಘಟನೆ, ನೋಂದಾವಣೆ, ಗುರುತಿನ ಚೀಟಿ ವಿತರಣೆ ಮತ್ತು ಬಹುಪಯೋಗಿ ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಉದ್ದೇಶಗಳನ್ನು ಪ್ರತಿಷ್ಠಾನವು ಹೊಂದಿದೆ. ಇದೊಂದು ಮಹಾ ಸಂಘಟನೆಯಾಗಿದ್ದು ರಂಗಭೂಮಿಗೆ ಪೂರಕವಾದ ರಂಗ ಸಾಹಿತ್ಯ, ರಂಗಸಂಗೀತ, ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸಣ್ಣಾಟ, ದೊಡ್ಡಾಟ, ಹಗಲುವೇಷ,ಕೃಷ್ಣಪಾರಿಜಾತ, ದೊಂಬಿದಾಸರ ಕುಣಿತ, ಹರಿಕಥೆ ಮುಂತಾದ ಎಲ್ಲಾ ಕ್ಷೇತ್ರಗಳ ಕಲಾವಿದರ ಮಹಾ ಸಂಘಟನೆ ಇದಾಗಲಿದ್ದು, ಸಮಗ್ರ ರಂಗಭೂಮಿ ರಂಗ ಕಲಾವಿದರ ಹಿತರಕ್ಷಣೆಗೆ ಮಹಾ ಪ್ರತಿಷ್ಠಾನವು ಅಡಿಗಲ್ಲಾಗಲಿದೆ. ಪ್ರಥಮ ಆಷಾಢ ಶುಕ್ರವಾರದಂದು ಮಹಾ ಪ್ರತಿಷ್ಠಾನವು ಅಧಿಕೃತವಾಗಿ ನೋಂದಾವಣೆ ಗೊಂಡಿದೆ.

ಡಾ.ಎಸ್.ಎಲ್.ಎನ್. ಸ್ವಾಮಿ
9986435832

City Today News
9341997936