ಸದಾಶಿವ ಆಯೋಗ ವರದಿ ಜಾರಿಗೆ ಬೆಂಬಲಿಸುವ ರಾಜಕೀಯ ಪಕ್ಷಗಳಿಗೆ ಹಾಗೂ ಮುಖಂಡರಿಗೆ ಬಂಜಾರ ಸಮಾಜದ ಸಂಪೂರ್ಣ ವಿರೋಧ

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಕೆಲವು ರಾಜಕೀಯ ಪಕ್ಷಗಳು ಹಾಗೂ ಮುಖಂಡರುಗಳು ಚುನಾವಣಾ ದೃಷ್ಟಿಯಿಂದ ಸದಾಶಿವ ಆಯೋಗ ವರದಿ ಜಾರಿಯಾಗಬೇಕೆಂದು ಹೇಳಿಕೆ ನೀಡುತ್ತಿರುವುದನ್ನು ರಾಜ್ಯದ 30 ಲಕ್ಷಕ್ಕೂ ಅಧಿಕ ಜನಸಂಖ್ಯೆಯುಳ್ಳ ಬಂಜಾರ ಸಮುದಾಯ ತೀವ್ರವಾಗಿ ವಿರೋಧಿಸುತ್ತದೆ ಹಾಗೂ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಂತಹವರಿಗೆ ಬೆಂಬಲ ನಿರಾಕರಿಸುವುದಾಗಿ ಈ ಮೂಲಕ ತಿಳಿಯಪಡಿಸುತ್ತಿದ್ದೇವೆ.

ಒಳಮೀಸಲಾತಿಗೆ ಸಂಬಂಧಿಸಿದಂತೆ ದಿನನಿತ್ಯ ಆಗುತ್ತಿರುವ ಬೆಳವಣಿಗೆಗಳು ರಾಜಕೀಯ ಪ್ರೇರಿತವಾಗಿದ್ದು ಪರಿಶಿಷ್ಟ ಜಾತಿಗಳನ್ನು ಒಡೆಯಲು ನಡೆಸಲಾಗುತ್ತಿರುವ ಅತೀ ದೊಡ್ಡ ಷಡ್ಯಂತ್ರ ಇದಾಗಿದೆ. ಸದಾಶಿವ ಆಯೋಗ ವರದಿ ಅವೈಜ್ಞಾನಿಕ ಹಾಗೂ ಸಂವಿಧಾನ ವಿರೋಧಿಯಾಗಿದೆ. ಒಳಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂಬುದನ್ನು ವಿವಿಧ ನ್ಯಾಯಾಲಯಗಳು ಸ್ಪಷ್ಟವಾಗಿ ಹೇಳಿರುವ ಕಾರಣ ರಾಜ್ಯ ಸರ್ಕಾರ ಈ ಆಯೋಗದ ವರದಿಯನ್ನು ತಿರಸ್ಕರಿಸಬೇಕೆಂದು ಆಗ್ರಹಿಸುತ್ತೇವೆ.

2005 ರಲ್ಲಿ ರಚನೆಯಾದ ಸದಾಶಿವ ಆಯೋಗ 7 ವರ್ಷಗಳ ನಂತರ 2012 ರಲ್ಲಿ ಡಿ.ವಿ.ಸದಾನಂದಗೌಡರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆಯಾಗಿ ಈಗಾಗಲೇ 10 ವರ್ಷಗಳು ಕಳೆದಿದ್ದು, ಈಗ ಅದನ್ನು ಜಾರಿಗೊಳಿಸಬೇಕೆನ್ನುವುದು ಅಪ್ರಸ್ತುತ ಹಾಗೂ ಅರ್ಥಹೀನವಾಗಿದೆ. ಕೇಂದ್ರ ಸರ್ಕಾರದ ಜಾತಿಗಣತಿ ಅಂಕಿಅಂಶ ಹಾಗೂ ಸದಾಶಿವ ಆಯೋಗ ವರದಿ ಅಂಕಿಅಂಶಗಳಿಗೆ ಸಾಕಷ್ಟು ವ್ಯತ್ಯಾಸವಿದೆ. ಹಾಗಾಗಿ ಸರ್ಕಾರ ಮತ್ತೊಂದು ಜಾತಿಗಣತಿ ಮಾಡಿ ಸ್ಪಷ್ಟ ವರದಿ ನೀಡಬೇಕೆಂದು ಕೋರುತ್ತೇವೆ. ರಾಜ್ಯ ಸರ್ಕಾರಕ್ಕೆ

ರಾಜ್ಯದಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಹಾಗೂ ಇನ್ನಿತರೆ ಪರಿಶಿಷ್ಟ ಜಾತಿಯ ಸಮುದಾಯಗಳು ಅತ್ಯಂತ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಬಡತನ, ಅನಕ್ಷರತೆ, ನಿರುದ್ಯೋಗ, ವಲಸೆ, ದಬ್ಬಾಳಿಕೆ, ಅತ್ಯಾಚಾರ, ಸರ್ಕಾರಿ ಸೌಲಭ್ಯ ಮತ್ತು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿರುವುದು ಸೇರಿದಂತೆ ಸಾಕಷ್ಟು ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ಇವರ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿದೆ.

ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಹೆಚ್‌.ಡಿ. ಕುಮಾರಸ್ವಾಮಿ, ಬಿ.ಜೆ.ಪಿ. ರಾಜ್ಯಾಧ್ಯಕ್ಷರಾದ ನಳೀನ್‌ ಕುಮಾರ್ ಕಟೀಲ್, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾದ ಎ.ನಾರಾಯಣಸ್ವಾಮಿ, ರಾಜ್ಯ ಸರ್ಕಾರದ ಮಧ್ಯಮ ನೀರಾವರಿ ಮತ್ತು ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಅವರು ಚುನಾವಣೆ ಹಿತದೃಷ್ಟಿಯಿಂದ ಎಡ ಸಮುದಾಯದ ಮತವನ್ನು ಓಲೈಸುವ ಸಲುವಾಗಿ ಸದಾಶಿವ ಆಯೋಗ ವರದಿ ಜಾರಿಗೆ ಬೆಂಬಲ ಸೂಚಿಸುತ್ತಿರುವುದು ವಿಪರ್ಯಾಸವಾಗಿದೆ. ಸಾರ್ವಜನಿಕವಾಗಿ ಬಹಿರಂಗವಾಗದ ಸದಾಶಿವ ಆಯೋಗ ವರದಿಯನ್ನು ಏಕಾಏಕಿ ಜಾರಿ ಮಾಡಬೇಕು ಎನ್ನುವ ರಾಜಕೀಯ ಪಕ್ಷಗಳಿಗೆ ಹಾಗೂ ನಾಯಕರುಗಳಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಸಮಸ್ತ ಬಂಜಾರ ಸಮುದಾಯದ ವಿರೋಧವಿದೆ ಎಂದು ಈ ಪತ್ರಿಕಾ ಗೋಷ್ಠಿಯ ಮೂಲಕ ಸ್ಪಷ್ಟಪಡಿಸುತ್ತಿದ್ದೇವೆ.

ಒಳಮೀಸಲಾತಿ ಹೋರಾಟ ನೆಪದಲ್ಲಿ ಬಂಜಾರ ಸಮಾಜದ ಆರಾಧ್ಯದೈವ ಕುಲಗುರು ಸಂತ ಶ್ರೀ ಸೇವಾಲಾಲ್‌ ಮಹಾರಾಜರನ್ನು ಹಾಗೂ ರಾಜ್ಯ ಸರ್ಕಾರದ ಪಶುಸಂಗೋಪನಾ ಸಚಿವರಾದ ಪ್ರಭು ಚವ್ಹಾಣ್ ರವರನ್ನು ಮಾದಿಗ ದಂಡೋರ ಸಮಿತಿಯವರು ಏಕ ವಚನದಲ್ಲಿ ನಿಂಧಿಸುವುದು. ಅಪಮಾನಿಸುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದನ್ನು ಬಂಜಾರ ಸಮುದಾಯ ತೀವ್ರವಾಗಿ ಖಂಡಿಸುತ್ತದೆ. ಮಾದಿಗ ದಂಡೋರ ಸಮಿತಿಯವರು ಪ್ರಜಾಸತ್ತಾತ್ಮಕವಾಗಿ ಹೋರಾಟ ಮಾಡುವುದು ಬಿಟ್ಟು ಬಂಜಾರ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಯಪಡಿಸುತ್ತೇವೆ.

ಪರಿಶಿಷ್ಟ ಸಮುದಾಯಗಳ ಮಧ್ಯೆ ಬಿನ್ನಾಭಿಪ್ರಾಯ ಮೂಡಿಸಿ ಏಕತೆಗೆ ಧಕ್ಕೆ ತರುತ್ತಿರುವ ಸದಾಶಿವ ಆಯೋಗ ವರದಿಯನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕೆಂದು ಈ ಮೂಲಕ ಅಗ್ರಹಿಸುತ್ತೇವೆ.

ಒಂದು ವೇಳೆ ತರಾತುರಿಯಲ್ಲಿ ಆಯೋಗದ ವರದಿ ಶಿಫಾರಸಿಗೆ ಸರ್ಕಾರ ಮುಂದಾದರೆ ಮುಂಬರುವ ವಿಧಾನಸಭಾ ಚುಣಾವಣೆಯಲ್ಲಿ 30 ಲಕ್ಷಕ್ಕೂ ಅಧಿಕ ಜನಸಂಖ್ಯೆ ಇರುವ ಬಂಜಾರ ಸಮುದಾಯ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಗಿರೀಶ್ ಡಿ.ಆರ್. ರಾಜ್ಯಾಧ್ಯಕ್ಷರು ಈ ಮೂಲಕ ಎಚ್ಚರಿಸುತ್ತಿದ್ದೇವೆ ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು

City Today News – 9341997936