
ಫೆಬ್ರವರಿ 27, 2019, ಬೆಂಗಳೂರು : ಭಾರತದ ರಾಷ್ಟ್ರಪತಿಗಳಾದ ಶ್ರೀ. ರಾಮನಾಥ ಕೋವಿಂದ್-ರವರು ಕೊಯಮತ್ತೂರಿನ ಈಶ ಯೋಗ ಕೇಂದ್ರದಲ್ಲಿ ನಡೆಯುವ 25 ನೇ ಮಹಾಶಿವರಾತ್ರಿಯ ಆಚರಣೆಯಲ್ಲಿ ಮುಖ್ಯ ಅತಿಥಿಯಾಗಲಿದ್ದಾರೆ. ಜಗತ್ತಿನ ಅತಿ ದೊಡ್ಡ ಮಹಾಶಿವರಾತ್ರಿಯನ್ನು ಈ ವರ್ಷ ಮಾರ್ಚಿ 4 ರಂದು ಈಶದಲ್ಲಿ ಆಚರಿಸಲಾಗುತ್ತದೆ. ರಾಷ್ಟ್ರಪತಿಗಳು ಧ್ಯಾನಲಿಂಗ ಆಲಯ, ಲಿಂಗ ಭೈರವಿ ದೇವಿ ಆಲಯ ಮತ್ತು ಗ್ರಹಣಶೀಲತೆಯನ್ನು ವರ್ಧಿಸುವ ಶಕ್ತಿಶಾಲಿ ಜಲಕುಂಡವಾದ ಸೂರ್ಯಕುಂಡಕ್ಕೂ ಭೇಟಿ ನೀಡುತ್ತಾರೆ. ತರುವಾಯ ಅವರು ಮಹಾಶಿವರಾತ್ರಿಯ ಕಾರ್ಯಕ್ರಮವು ನಡೆಯುವ ಸ್ಥಳವಾದ ಆದಿಯೋಗಿಯ ಬಳಿ ತೆರಳುತ್ತಾರೆ. ರಾಷ್ಟ್ರಪತಿಗಳು ಧ್ಯಾನಲಿಂಗ ದೇವಸ್ಥಾನದಲ್ಲಿ ಪಂಚಭೂತಗಳನ್ನು (ಭೂಮಿ, ಅಗ್ನಿ, ಜಲ, ಗಾಳಿ ಮತ್ತು ಆಕಾಶ) ಶುದ್ಧೀಕರಿಸುವ ಕ್ರಿಯೆಯಾದ ಪಂಚಭೂತ ಆರಾಧನೆಯಲ್ಲಿ ಭಾಗವಹಿಸುತ್ತಾರೆ. ಈ ಕ್ರಿಯೆಯು ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯವನ್ನು ಸ್ಥಾಪಿಸುವುದಲ್ಲದೆ ದೇಹವನ್ನು ನಮ್ಮ ಪರಮ ಶ್ರೇಯಸ್ಸಿನ ಕಡೆಗೆ ಒಂದು ಮೆಟ್ಟಿಲಾಗುವಂತೆ ರೂಪಿಸುತ್ತದೆ.
ಈಶ ಫೌಂಡೇಶನ್ನಿನ ಸಂಸ್ಥಾಪಕರಾದ ಸದ್ಗುರುಗಳೊಂದಿಗೆ ಭಾರತದ ರಾಷ್ಟ್ರಪತಿಗಳು ಈಶ ಯೋಗ ಕೇಂದ್ರದಲ್ಲಿ ಸಸಿಗಳನ್ನು ನೆಡುವ ಮೂಲಕ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುತ್ತಾರೆ
ಈಶ ಈ ವರ್ಷ ತನ್ನ 25 ನೇ ಮಹಾಶಿವರಾತ್ರಿಯನ್ನು ಆದಿಯೋಗಿಯ ಸಾನ್ನಿಧ್ಯದಲ್ಲಿ ಆಚರಿಸುತ್ತಿದೆ. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 2017 ರ ಮಹಾಶಿವರಾತ್ರಿಯ ಆಚರಣೆಯ ಸಮಯದಲ್ಲಿ ಅದಿಯೋಗಿಯನ್ನು ಅನಾವರಣಗೊಳಿಸಿದ್ದರು. 25 ನೇ ವರ್ಷದ ಈ ಆಚರಣೆಯು ಹಿಂದೆಂದಿಗಿಂತಲೂ ದೊಡ್ಡದಾಗಿ ಮತ್ತು ಅದ್ದೂರಿಯಾಗಿರುತ್ತದೆಯೆಂದು ನಿರೀಕ್ಷಿಸಲಾಗಿದೆ. ಅಮಿತ್ ತ್ರಿವೇದಿ, ಹರಿಹರನ್, ಕಾರ್ತಿಕ್ ಮತ್ತು ಅಜರ್ಬೈಜಾನ್-ನಿಂದ ಡ್ರಮ್ಮರ್ಸ್ ಸೇರಿದಂತೆ ಇತರ ಜನಪ್ರಿಯ ಕಲಾವಿದರ ಸಂಗೀತ ಕಾರ್ಯಕ್ರಮಗಳು, ಶಾಸ್ತ್ರೀಯ ನೃತ್ಯಕಲಾ ಪ್ರದರ್ಶನಗಳು, ಜಾನಪದ ಕಲೆ ಮತ್ತು ಸಂಸ್ಕೃತಿ, ಹಾಗೂ ಧ್ಯಾನ ಕ್ರಿಯೆಗಳು ಈಶಾ ಯೋಗ ಕೇಂದ್ರದಲ್ಲಿ ನಡೆಯುವ ರಾತ್ರಿಯ ಉತ್ಸವದ ಭಾಗವಾಗಿದೆ. ಈಶದಲ್ಲಿ ಹುಟ್ಟಿ ಬೆಳೆದ ಸಂಗೀತ ತಂಡವಾದ ಸೌಂಡ್ಸ್ ಆಫ್ ಈಶದವರೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ. ಸದ್ಗುರುಗಳು ನಡೆಸಿಕೊಡುವ ಶಕ್ತಿಯುತ ಧ್ಯಾನ ಕ್ರಿಯೆಯು ಈ ಕಾರ್ಯಕ್ರಮದ ಪ್ರಮುಖಾಂಶವಾಗಿದೆ. ಮಹಾಶಿವರಾತ್ರಿಯಂದು ಗ್ರಹಗಳ ಶಕ್ತಿಯಿಂದಾಗಿ ಮಾನವ ಜೀವವ್ಯವಸ್ಥೆಯೊಳಗೆ ಶಕ್ತಿಯು ನೈಸರ್ಗಿಕವಾಗಿಯೇ ಮೇಲ್ಮುಖವಾಗಿ ಸ್ಫುರಿಸುತ್ತದೆ, ಮತ್ತಿದು ಮಧ್ಯರಾತ್ರಿಯಲ್ಲಿ ಉತ್ತುಂಗಕ್ಕೇರುತ್ತದೆಯೆಂದು ಹೇಳಲಾಗುತ್ತದೆ. ಈಶದಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರೆಲ್ಲರಿಗೂ ನಡೆಯುವ ಅನ್ನದಾನವು ಯೋಗ ಕೇಂದ್ರದಲ್ಲಿನ ಮಹಾಶಿವರಾತ್ರಿಯ ಮತ್ತೊಂದು ಪ್ರಮುಖಾಂಶವಾಗಿದೆ.
ಪ್ರಪಂಚದಾದ್ಯಂತದ ಲಕ್ಷಾಂತರ ಜನರು ಈ ವರ್ಷದ ಮಹಾಶಿವರಾತ್ರಿ ಆಚರಣೆಯಲ್ಲಿ ಖುದ್ದಾಗಿ ಅಥವಾ ವೆಬ್ ನೇರ ಪ್ರಸಾರದ ಮೂಲಕ ಭಾಗವಹಿಸುವ ನಿರೀಕ್ಷೆಯಿದೆ. ಇಂಗ್ಲಿಷ್ ಮತ್ತು ಪ್ರಾದೇಶಿಕ ಭಾಷಾ ವಾಹಿನಿಗಳು ಸೇರಿದಂತೆ 100 ಕ್ಕಿಂತ ಹೆಚ್ಚು ಟಿವಿ ಚ್ಯಾನಲ್-ಗಳು ಮತ್ತು ವೆಬ್ ಚಾನೆಲ್-ಗಳು ಕಾರ್ಯಕ್ರಮವನ್ನು ಮಾರ್ಚಿ 4 ರಂದು ಸಂಜೆ 6 ಗಂಟೆಯಿಂದ ಮಾರ್ಚಿ 5 ಬೆಳಿಗ್ಗೆ 6 ಗಂಟೆಯವರೆವಿಗೂ ನೇರ ಪ್ರಸಾರ ಮಾಡುತ್ತವೆ.

ಮಹಾಶಿವರಾತ್ರಿಯ ಮಹತ್ವದ ಬಗ್ಗೆ ಸದ್ಗುರುಗಳು ಹೀಗೆನ್ನುತ್ತಾರೆ, “ತಿಂಗಳ ಅತ್ಯಂತ ಕತ್ತಲಿನ ರಾತ್ರಿಯಾದ ಶಿವರಾತ್ರಿಯು, ಪ್ರತಿಯೊಬ್ಬ ಮನುಷ್ಯನಿಗೂ ಅವನ ಸೀಮಿತ ಅಸ್ತಿತ್ವವನ್ನು ಕರಗಿಸಿಕೊಂಡು, ಅವನ ಅಂತರಾಳದಲ್ಲಿರುವ ಸೃಷ್ಟಿಯ ಮೂಲದ ಅಪರಿಮಿತತೆಯನ್ನು ಅನುಭವಿಸಲು ದೊರೆತಿರುವ ಒಂದು ಅವಕಾಶವಾಗಿದೆ. ಪ್ರತಿಯೊಬ್ಬ ಮನುಷ್ಯನೊಳಗಿರುವ, ಇಡೀ ಸೃಷ್ಟಿಯ ಮೂಲವಾಗಿರುವ ಆ ಅಸೀಮತೆಯ ಅನುಭವಕ್ಕೆ ನಿಮ್ಮನ್ನು ತಂದುಕೊಳ್ಳಲು ಮಹಾಶಿವರಾತ್ರಿಯು ಒಂದು ಅವಕಾಶ ಮತ್ತು ಒಂದು ಸಾಧ್ಯತೆಯಾಗಿದೆ.”
ಯೋಗ ಸಂಸ್ಕೃತಿಯಲ್ಲಿ, ಶಿವನನ್ನು ದೇವರೆಂದು ಗುರುತಿಸಲಾಗುವುದಿಲ್ಲ, ಬದಲಾಗಿ ಅವನನ್ನು ಯೋಗದ ಉಗಮಕಾರಕ, ಮೊದಲ ಯೋಗಿ – ಆದಿಯೋಗಿಯೆಂದು ಪರಿಗಣಿಸಲಾಗುತ್ತದೆ. “ಮಾನವನು ಪ್ರಕೃತಿ ನಿರ್ಧಾರಿತ ಮಿತಿಗಳ ಹಿಡಿತದಲ್ಲಿರುವ ಅಗತ್ಯವಿಲ್ಲವೆಂಬ ಸಾಧ್ಯತೆಯನ್ನು ಆದಿಯೋಗಿಯು ಹೊರತಂದನು. ಶಿವನು ಹೀಗೆ ಹೇಳಿದ್ದನು, ’ನೀವು ನಿಮ್ಮ ಮೇಲೆ ಅಗತ್ಯವಾದ ಕಾರ್ಯಗೈದರೆ, ನಿಮ್ಮ ಈಗಿನ ಮಿತಿಗಳಾಚೆ ನೀವು ವಿಕಸಿತರಾಗಬಹುದು’ ಇದೇ ಆದಿಯೋಗಿಯ ಮಹತ್ವ” ಎಂದು ಸದ್ಗುರುಗಳು ಹೇಳುತ್ತಾರೆ.
ಭಾರತದಲ್ಲಿನ ಎಲ್ಲಾ ಉತ್ಸವಾಚರಣೆಗಳಲ್ಲಿ ಮಹಾಶಿವರಾತ್ರಿಯನ್ನು ಆಧ್ಯಾತ್ಮಿಕವಾಗಿ ಅತ್ಯಂತ ಮಂಗಳಕರವಾದದ್ದು ಎಂದು ಪರಿಗಣಿಸಲಾಗಿದೆ. ಈ ರಾತ್ರಿಯಂದು, ಭೂಮಿಯ ಉತ್ತರ ಗೋಳಾರ್ಧದಲ್ಲಿ ಮನುಷ್ಯರಲ್ಲಿ ಜೀವಶಕ್ತಿಯ ನೈಸರ್ಗಿಕ ಉತ್ಕರ್ಷ ಉಂಟಾಗುತ್ತದೆ. ಈ ಸಮಯದಲ್ಲಿ ಪ್ರಕೃತಿಯು ಮನುಷ್ಯರನ್ನು ಅವರ ಆಧ್ಯಾತ್ಮಿಕ ಉತ್ತುಂಗಕ್ಕೆ ತಳ್ಳುತ್ತಿರುತ್ತದೆ. ಆದ್ದರಿಂದ ಈ ನೈಸರ್ಗಿಕ ಉತ್ಕರ್ಷದ ಲಾಭವನ್ನು ಪಡೆಯಲು ಬೆನ್ನುಮೂಳೆಯನ್ನು ನೇರವಾಗಿರಿಸಿ ಎಚ್ಚರವಾಗಿರುವುದು ಮುಖ್ಯವೆಂದು ಪರಿಗಣಿಸಲಾಗಿದೆ. ಈ ರಾತ್ರಿಯಲ್ಲಿ ಉಂಟಾಗುವ ಶಕ್ತಿಯು ಯಾವ ನಂಬಿಕೆಯ ಕಟ್ಟುಪಾಡು ಅಥವಾ ಮತಗಳ ಸಿದ್ಧಾಂತಗಳಿಗೆ ಒಳಪಟ್ಟಿಲ್ಲ. ಆದ್ದರಿಂದ ಮಹಾಶಿವರಾತ್ರಿಯು ಎಲ್ಲರಿಗೂ, ವಿಶೇಷವಾಗಿ ಆಧ್ಯಾತ್ಮಿಕ ಪಥದಲ್ಲಿ ಸಾಗುತ್ತಿರುವವರಿಗೆ, ಸಾರ್ವತ್ರಿಕವಾಗಿ ಮಹತ್ವಪೂರ್ಣವಾಗಿದೆ.
City Today News
(citytoday.media)
9341997936
