
ನವದೆಹಲಿ,ಮಾ.10– ಪ್ರಧಾನಿ ನರೇಂದ್ರ ಮೋದಿ ಹಾಗೂ ಮಹಾಘಟಬಂಧನ್ ನಡುವಿನ ಜಿದ್ದಾಜಿದ್ದಿಯೆಂದೇ ಬಿಂಬಿತವಾಗಿರುವ 17ನೇ ಲೋಕಸಭಾ ಚುನಾವಣೆ ಏ.11ರಿಂದ ಮೇ.19ರವರೆಗೆ 7 ಹಂತದವರೆಗೆ ಜರುಗಲಿದ್ದು, ಮೇ. 23ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಭಾನುವಾರದಿಂದಲೇ ನೀತಿ ಸಂಹಿತೆ ದೇಶದಾದ್ಯಂತ ಜಾರಿಯಾಗಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತದಾರರಿಗೆ ಯಾವುದೇ ರೀತಿಯ ಆಮೀಷ ಒಡ್ಡುವಂತಹ ಆಶ್ವಾಸನೆಗಳನ್ನು ನೀಡುವಂತಿಲ್ಲ. ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳಿಗೆ ಏ.18 ಮತ್ತು 23ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ.

ಭಾನುವಾರ, ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಅರೋರಾ, ಆಯುಕ್ತರಾದ ಅಶೋಕ ಲಾವಾಸ ಮತ್ತು ಸುಶೀಲ್ ಚಂದ್ರ ಅವರುಗಳು ಪತ್ರಿಕಾಗೋಷ್ಠಿಯಲ್ಲಿ ಲೋಕಸಭೆ ಚುನಾವಣೆ ದಿನಾಂಕವನ್ನು ಪ್ರಕಟಿಸಿದರು.
ಕಳೆದ ಬಾರಿಗಿಂತ ಈ ಬಾರಿ ಸುಮಾರು 8.6 ಕೋಟಿ ಮತದಾರರು ಹೊಸದಾಗಿ ಸೇರ್ಪಡೆಯಾಗಿದ್ದಾರೆ. ಇದರಲ್ಲಿ 18 ರಿಂದ 19 ವರ್ಷದೊಳಗಿನ ಸುಮಾರು 1.5 ಕೋಟಿಯಷ್ಟಿದ್ದಾರೆ. ದೇಶದ ಒಟ್ಟು 30 ರಾಜ್ಯ, ಕೇಂದ್ರಾಡಳಿತ ಪ್ರದೇಶ ಸೇರಿದಂತೆ ಒಟ್ಟು 543 ಲೋಕ ಸಭಾ ಕ್ಷೇತ್ರಗಳಿಗೆ ಈ ಬಾರಿ 90 ಕೋಟಿ ಮತದಾರರು ಮುಂದಿನ ಐದು ವರ್ಷಗಳ ದೇಶದ ಭವಿಷ್ಯವನ್ನು ತೀರ್ಮಾನಿಸಲಿದ್ದಾರೆ.
ದೇಶಾದ್ಯಂತ ಒಟ್ಟು 10 ಲಕ್ಷ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದ್ದು, ವಿಕಲಚೇತರು, ದಿವ್ಯಾಂಗರು, ಹಿರಿಯ ನಾಗರೀಕರು ಸೇರಿದಂತೆ ಮತ್ತಿತರರಿಗೆ ಮತಗಟ್ಟೆಗಳಿಗೆ ಬಂದು ಮತ ಚಲಾಯಿಸಲು ವೀಲ್ ಛೇರ್ ಸೌಲಭ್ಯವನ್ನು ಒದಗಿಸಲಾಗಿದೆ. ಮುಕ್ತ ಮತ್ತು ನ್ಯಾಯಸಮ್ಮತ ಮತದಾನ ನಡೆಯಲು ಚುನಾವಣಾ ಆಯೋಗ ಈ ಬಾರಿ ಹಿಂದೆಂದಿಗಿಂತಲೂ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ
ಅಲ್ಲದೇ ಮತಗಟ್ಟೆಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಮತ್ತಿತರ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವಂತೆ ಆಯೋಗ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ಕೊಟ್ಟಿದೆ.
ಈ ಬಾರಿ ಮತದಾನಕ್ಕೆ ಅನುಕೂಲವಾಗಲೆಂದು ಮೊದಲ ಬಾರಿಗೆ ವಿದ್ಯುನ್ಮಾನಯಂತ್ರ(ಇವಿಎಂ)ಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವನ್ನು ಅಳವಡಿಸಲಾಗಿದೆ. ಅಲ್ಲದೇ ಪ್ರತಿಯೊಂದು ಇವಿಎಂ ಗಳಿಗೆ ವಿವಿಪ್ಯಾಟ್ ಕೂಡಾ ಅಳವಡಿಸಲಾಗಿದ್ದು, ಮತದಾರರು ತಾವು ಯಾವ ಅಭ್ಯರ್ಥಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಖಾತರಿಪಡಿಸಿಕೊಳ್ಳಬಹುದು. ಜೊತೆಗೆ ನೋಟಾ ವ್ಯವಸ್ಥೆಯೂ ಕೂಡ ಇದೆ.
16ನೇ ಲೋಕಸಭೆಯ ಅವಧಿ 2019ರ ಜೂನ್ 3ಕ್ಕೆ ಮುಕ್ತಾಯಗೊಳ್ಳಲಿದ್ದು ಸಂವಿಧಾನ ಕಲಂ 224ರ ಅನ್ವಯ ಅವಧಿ ಪೂರ್ಣಗೊಳ್ಳುವ ಮುನ್ನವೇ ಹೊಸ ಲೋಕಸಭೆ ಅಸ್ತಿತ್ವಕ್ಕೆ ಚುನಾವಣೆ ನಡೆಸಬೇಕಿದೆ. ಹೀಗಾಗಿ ಕೇಂದ್ರ ಚುನಾವಣಾ ಆಯೋಗ 17ನೇ ಲೋಕಸಭೆ ಚುನಾವಣೆಗೆ ಸಮಗ್ರ ಸಿದ್ಧತೆಗಳನ್ನು ಕೈಗೊಂಡಿದೆ.

ಆಂಧ್ರ, ಅರುಣಾಚಲ ಪ್ರದೇಶ, ಗೋವಾ, ಗುಜರಾತ್, ಹರ್ಯಾಣ, ಹಿಮಾಚಲ ಪ್ರದೇಶ, ಕೇರಳ, ನಾಗಾಲ್ಯಾಂಡ್, ಮಿಜೋರಾಂ, ಪಂಜಾಬ್, ಸಿಕ್ಕಿಂ, ಕೇರಳ, ತಮಿಳುನಾಡು, ಉತ್ತರಾಖಂಡ್, ಅಂಡೋಮಾನ್ ನಿಕೋಬಾರ್, ದಾದರ್ ಅಂಡ್ ಹವೇಲಿ, ಡಿಯುಡಾಮನ್, ಲಕ್ಷದ್ವೀಪ, ದೆಹಲಿ, ಪಾಂಡಿಚೇರಿ ಮತ್ತು ಚಂಡಿಗಢದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ.
ಕರ್ನಾಟಕ, ಮಣಿಪುರ, ರಾಜಸ್ಥಾನ್, ತ್ರಿಪುರಗಳಲ್ಲಿ 2 ಹಂತದಲ್ಲಿ ಚುನಾವಣೆ ನಡೆಯಲಿದೆ. ಅಸ್ಸೋಂ ಮತ್ತು ಛತ್ತೀಸ್‍ಗಢದಲ್ಲಿ 3 ಹಂತದಲ್ಲಿ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಸ್ಸಾಗಳಲ್ಲಿ 4 ಹಂತಗಳಲ್ಲಿ, ಜಮ್ಮು ಕಾಶ್ಮೀರದಲ್ಲಿ 5 ಹಂತಗಳಲ್ಲಿ, ಬಿಹಾರ್, ಉತ್ತರ ಪ್ರದೇಶ್ ಮತ್ತು ಪಶ್ಚಿಮ ಬಂಗಾಳದಲ್ಲಿ 7 ಹಂತದಲ್ಲಿ ಚುನಾವಣೆ ನಡೆಯಲಿದೆ.

# ಮೊಬೈಲ್‍ನಲ್ಲಿ ದೂರು ಸಲ್ಲಿಕೆ:
ಬೆಂಗಳೂರಿನಲ್ಲಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪ್ರಾಯೋಗಿಕವಾಗಿ ಜಾರಿ ಮಾಡಿದ್ದ ಮೊಬೈಲ್ ಆಧಾರಿದ ದೂರು ವ್ಯವಸ್ಥೆಯನ್ನು ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಬಳಕೆ ಮಾಡಲಾಗುತ್ತಿದೆ. ಬೆಂಗಳೂರಿನಲ್ಲಿ ಜಾರಿ ಮಾಡಿದ ದೂರು ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಸುಮಾರು 28 ಸಾವಿರ ದೂರುಗಳು ಆಯೋಗಕ್ಕೆ ಬಂದಿದ್ದವು. ಹಣ ಹಂಚಿಕೆ ಸೇರಿದಂತೆ ವಿವಿಧ ಮಾಹಿತಿಗಳನ್ನು ನೀಡಿದವರ ಹೆಸರನ್ನು ಗೌಪ್ಯವಾಗಿಡಲಾಗುವು.
# ಇಂದಿನಿಂದಲೇ ನೀತಿ ಸಂಹಿತೆ ಜಾರಿ :
ಲೋಕಸಭೆ ಚುನಾವಣೆಗೆ ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಲಿದೆ. ಚುನಾವಣಾ ಆಯೋಗ ಈ ಬಾರಿ ಅತ್ಯಂತ ಗಂಭೀರವಾಗಿ ನೀತಿ ಸಂಹಿತೆಯನ್ನು ಜಾರಿ ಜಾರಿಯಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತರಾದ ಸುನೀಲ್ ಅರೋರಾ ತಿಳಿಸಿದ್ದಾರೆ.
ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ.ರಾತ್ರಿ 10 ಗಂಟೆಯಿಂದ ಬೆಳಗ್ಗೆ 6ಗಂಟೆವರೆಗೂ ಧ್ವನಿವರ್ದಕ ಬಳಸುವಂತಿಲ್ಲ. ಪರಿಸರ ಸ್ನೇಹಿ ಪ್ರಚಾರ ಸಾಮಾಗ್ರಿಗಲನ್ನು ಬಳಸಬೇಕು ಎಂದು ಹೇಳಿದರು.
# ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ:
ಚುನಾವಣಾ ಆಭ್ಯರ್ಥಿಗಳು ಯಾವುದೇ ರೀತಿಯ ರಾಜಕೀಯ ಜಾಹಿರಾತು ನೀಡಬೇಕಾದರೂ ಚುನಾವಣಾ ಆಯೋಗದ ಪೂರ್ವಾನುಮತಿ ಪಡೆಯಬೇಕು. ಸಾಮಾಜಿಕ ಜಾಲ ತಾಣಗಳ ಮೇಲೆ ತೀವ್ರ ನಿಗಾವಹಿಸಲಾಗುವುದು.ಫೆಸ್‍ಬುಕ್, ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಜಾಹಿರಾತುಗಳನ್ನು ಪ್ರಕಟಿಸಬೇಕಾದರೂ ಆಯೋಗದ ಪೂರ್ವಾನುಮತಿ ಪಡೆಯಬೇಕು ಎಂದು ಹೇಳಿದರು. ದ್ವೇಷದ ಭಾಷಣ ಮತ್ತು ವದ್ಧಂತಿಗಳ ವಿರುದ್ಧ ಸ್ಥಳೀಯಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.
# ಪಾನ್ ನಂಬರ್ ಕಡ್ಡಾಯ:
ಈ ಬಾರಿ ಕಣಕ್ಕಿಳಿಯಲಿರುವ ಅಭ್ಯರ್ಥಿಗಳು ನಾಮಪತ್ರದ ಜೊತೆಗೆ ಪಾನ್ ನಂಬರ್ ಕಡ್ಡಾಯವಾಗಿ ನಮೂದಿಸಲೇಬೇಕು. ಅಲ್ಲದೇ ಫಾರಂ ನಂ.26ನ ಸಮರ್ಪಕವಾಗಿ ಭರ್ತಿ ಮಾಡಬೇಕು. ಒಂದು ವೇಳೆ ತಪ್ಪು ಮಾಹಿತಿ ನೀಡಿದರೆ ನಾಮಪತ್ರವನ್ನು ತಿರಸ್ಕರಿಸುವುದಾಗಿ ತಿಳಿಸಿದರು.
ಎಲ್ಲಾ ಅಭ್ಯರ್ಥಿಗಳು ಕಟ್ಟುನಿಟ್ಟಾಗಿ ನೀತಿ ಸಂಹಿತೆಯನ್ನು ಅನುಸರಿಸಲೇಬೇಕು. ಒಂದು ವೇಳೆ ಯಾರಾದರೂ ಉಲ್ಲಂಘಿಸಿದರೆ ಆಯೋಗ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು, ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ಹಾಗೂ ಹಣ ಹಂಚಿಕೆ ಬಗ್ಗೆ ನೇರವಾಗಿ ಆಯೋಗಕ್ಕೆ ದೂರು ನೀಡಬಹುದು.
ದೂರು ನೀಡಲು ಆಯೋಗ 1950 ಸಹಾಯವಾಣಿ ಹಾಗೂ ಮೊಬೈಲ್ ಆ್ಯಪ್ ಆರಂಭಿಸಿದೆ. ದೂರು ನೀಡುವವರ ಹೆಸರನ್ನು ಗೌಪ್ಯವಾಗಿಡಲಾಗುವುದು.
ರಾತ್ರಿ 10ರಿಂದ ಬೆಳಗ್ಗೆ 6 ಗಂಟೆಯವರೆಗೆ ಧ್ವನಿವರ್ಧಕ ಬಳಕೆ ನಿಷೇಧಿಸಲಾಗಿದೆ. ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಸಿಆರ್‍ಪಿಎಫ್, ಸಿಸಿಟಿವಿ, ವೆಬ್ ಕಾಸ್ಟಿಂಗ್ ಅಳವಡಿಕೆ ಮಾಡಲಾಗುವುದು. ಮತದಾನದ ಅಕ್ರಮದ ಬಗ್ಗೆ ದೂರು ನೀಡಿದರೆ ಕ್ಷಣಾರ್ಧದಲ್ಲೇ ಕ್ರಮ ಕೈಗೊಳ್ಳಲಾಗುವುದು ತಿಳಿಸಿದರು.
City Today News
(citytoday.media)
9341997936
