
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟವು ಅವಕಾಶ ವಂಚಿತ ಹಿಂದುಳಿದ ಸಮುದಾಯಗಳಿಗೆ ಸಂವಿಧಾನ ಬದ್ಧವಾಗಿ ರಾಜಕೀಯ ಪ್ರಾತಿನಿಧ್ಯವನ್ನು ದೊರಕಿಸುವ ಅವಕಾಶ ಸಿಗುವಂತೆ ಮಾಡಲು ನಿರಂತರವಾಗಿ ಹೋರಾಡುತ್ತಿದೆ . ಹಿಂದುಳಿದ ವರ್ಗಗಳಿಗೆ ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ಪಾಲ್ಗೊಳ್ಳುವಂತಹ ಸ್ಥಿತಿಯನ್ನು ಉಂಟು ಮಾಡಲು ಅವಿರತವಾಗಿ ಶ್ರಮಿಸುತ್ತಿದೆ . ಈ ಹಿನ್ನೆಲೆಯಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯನ್ನು ಗಮನಿಸಿದಾಗ ಅತ್ಯಂತ ನಿರಾಸೆ ಮತ್ತು ಬೇಸರವುಂಟಾಗುತ್ತದೆ . ಕರ್ನಾಟಕದಲ್ಲಿ ಪ್ರಮುಖವಾಗಿ ಎರಡು ರಾಷ್ಟ್ರೀಯ ಪಕ್ಷಗಳು ಮತ್ತು ಒಂದು ಪ್ರಾಂತೀಯ ಪಕ್ಷವು ಚುನಾವಣೆಗೆ ನಿಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯನ್ನು ನೋಡಿದಾಗ ಧಿಗೃಮೆಯುಂಟಾಗುತ್ತದೆ . ವೀಶೇಷವಾಗಿ ಜಗತ್ತಿನಲ್ಲಿಯೇ ಅತಿ ದೊಡ್ಡ ರಾಜಕೀಯ ಪಕ್ಷವೆಂದು ಹೇಳಿಕೊಳ್ಳುವ ಭಾರತೀಯ ಜನತಾ ಪಕ್ಷವು ಆಯ್ಕೆ ಮಾಡಿರುವ 27 ಅಭ್ಯರ್ಥಿಗಳಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 1 ಮತ್ತು ಪ್ರವರ್ಗ – 2ಎ ಗೆ ಸೇರಿದ ಒಬ್ಬನೇ ಒಬ್ಬ ಉಮೇದುವಾರರೂ ಇಲ್ಲದಿರುವುದು ದುರಂತದ ಸಂಗತಿಯಾಗಿದೆ . ಹಿಂದುಳಿದ ವರ್ಗಗಳ ಬಗ್ಗೆ ಭಾ . ಜ . ಪ . ಪಕ್ಷವು ತೋರಿಸುತ್ತಿರುವ ನಿರ್ಲಕ್ಷಕ್ಕೆ ಇದು ಸಾಕ್ಷಿಯಾಗಿದೆ . ಹಿಂದುಳಿದ ಸಮುದಾಯಗಳಿಗೆ ಸಂವಿಧಾನಬದ್ಧವಾದ ರಾಜಕೀಯ ಪ್ರಾತಿನಿಧ್ಯದ ಅವಕಾಶವನ್ನು ನೀಡುವ ಬಗ್ಗೆ ಈ ರಾಷ್ಟ್ರೀಯ ಪಕ್ಷವು ಯಾವುದೇ ಬದ್ಧತೆಯನ್ನೂ ತೋರಿಸುತ್ತಿಲ್ಲ .
ಹಿಂದುಳಿದವರ ಬಗ್ಗೆ : ಭಾರತೀಯ ಜನತಾ ಪಕ್ಷವು ತೋರುತ್ತಿರುವ ನಿರ್ಲಕ್ಷವನ್ನು ಮತ್ತು ಅನ್ಯಾಯವನ್ನು ಒಕ್ಕೂಟವು ಬಲವಾಗಿ ಖಂಡಿಸುತ್ತದೆ . ರಾಜ್ಯದ ಹಿಂದುಳಿದ ವರ್ಗಕ್ಕೆ ಸೇರಿದ ಸಮುದಾಯಗಳು ಈ ಪಕ್ಷದ ಧೋರಣೆಯನ್ನು ಉಗ್ರವಾಗಿ ಖಂಡಿಸಲು ಒಕ್ಕೂಟವೂ ತೀರ್ಮಾನಿಸಿರುತ್ತದೆ . ಈ ನಿಟ್ಟಿನಲ್ಲಿ ಒಕ್ಕೂಟವು ಯಾವುದೇ ರಾಜಕೀಯ ಪಕ್ಷದ ಹಿಂದುಳಿದ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳಿಗೆ ಬೆಂಬಲ ನೀಡಲು ನಿರ್ಣಯಿಸಿದೆ . ಒಕ್ಕೂಟದ ಪದಾಧಿಕಾರಿಗಳು ರಾಜ್ಯದ ಆದ್ಯಂತ ಪ್ರವಾಸ ಮಾಡಿ ಹಿಂದುಳಿದ ವರ್ಗಕ್ಕೆ ಸೇರಿದ ಉಮೇದುವಾರರ ಪರವಾಗಿ ಪ್ರಚಾರವನ್ನು ನಡೆಸಲಿದ್ದಾರೆ . ಈ ಲೋಕಸಭಾ ಚುನಾವಣೆಯಲ್ಲಿ ಅಧಿಕ ಸಂಖ್ಯೆಯಲ್ಲಿ ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಗೆಲ್ಲಿಸುವಲ್ಲಿ ಎಲ್ಲಾ ಹಿಂದುಳಿದ ಸಮುದಾಯಗಳು ಒಗ್ಗಟ್ಟಿನಿಂದ ಸಹಕಾರ ನೀಡಬೇಕೆಂದು ಒಕ್ಕೂಟವು ಕರೆ ನೀಡುತ್ತದೆ . ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿಯೂ ಒಕ್ಕೂಟದ ಜಿಲ್ಲಾ ಘಟಕಗಳು ಮತ್ತು ಹಿಂದುಳಿದ ಸಮುದಾಯಗಳ ಧುರೀಣರು ಪತ್ರಿಕಾಗೋಷ್ಟಿಗಳನ್ನು ಏರ್ಪಡಿಸಿ ಒಕ್ಕೂಟದ ನಿಲುವನ್ನು ಬೆಂಬಲಿಸುವುದರೊಂದಿಗೆ ರಾಜಕೀಯ ಪಕ್ಷಗಳನ್ನು ಮೀರಿ ಹಿಂದುಳಿದ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಬೇಕೆಂದು ಕರೆ ನೀಡುತ್ತದೆ .
City Today News
(citytoday.media)
9341997936
