
ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್ಮೆಂಟ್ ಬೋರ್ಡ್ (ಕೆಐಎಡಿಬಿ) ಯಲ್ಲಿನ ಇಬ್ಬರು ಅಧಿಕಾರಿಗಳು ಭಾರೀ ಅವ್ಯವಹಾರ ಮಾಡಿದ್ದಾರೆಂದು ದಲಿತ ಸಂಘರ್ಷ ಸಮಿತಿ ಅರೋಪ ಮಾಡಿದೆ. ದಲಿತ ಸಂಘರ್ಷ ಸಮಿತಿ ಮುಖಂಡರು ಮಾಧ್ಯಮಗೋಷ್ಠಿ ನಡೆಸಿ, ಕೆಐಎಡಿಬಿ ಚೀಫ್ ಡೆವಲ್ಪಮೆಂಟ್ ಅಧಿಕಾರಿ ಎಂ. ರಾಮು ಮತ್ತು ಕೆಐಎಡಿಬಿ ಚೀಫ್ ಸೆಕ್ರೆಟರಿ ಗೌರವ್ ಗುಪ್ತ ವಿರುದ್ದ ಅರೋಪಿಸಿದ್ದಾರೆ. ಇದಕ್ಕೆ ಮಾಜಿ ಸಚಿವರುಗಳಾದ ಕೆ.ಜೆ.ಜಾರ್ಜ್ ಮತ್ತು ಡಿ.ಸಿ ತಮ್ಮಣ್ಣ ಸಾಥ್ ನೀಡಿದ ಅರೋಪವನ್ನ ದಲಿತ ಸಂಘಟನೆಗಳ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ಮಾಡಿದ್ದಾರೆ.
ಈ ಹಿಂದೆ ಕೈಗಾರಿಕಾ ಸಚಿವರವಾಗಿದ್ದ ಜಾರ್ಜ್ ಈ ಅಧಿಕಾರಿಗಳಾದ ಎಂ.ರಾಮು ಮತ್ತು ಗೌರವ್ ಗುಪ್ತ ನಡೆಸಿರುವ ಅನೇಕ ಅವ್ಯವಹಾರಗಳಿಗೆ ಸಾಥ್ ನೀಡುವ ಮೂಲಕ ತಾವು ಪಾಲುದಾರರಾಗಿದ್ದಾರೆ. ಅಲ್ಲದೇ ಮಾಜಿ ಸಚಿವ ಡಿ.ಸಿ ತಮ್ಮಣ್ಣ ತಮ್ಮ ಮಂಡ್ಯದಲ್ಲಿರುವ ಅಕ್ರಮ ಜಮೀನುಗಳನ್ನು ಉಳಿಸಿಕೊಳ್ಳಲು ರಾಮುರನ್ನ ಮುಖ್ಯ ಅಭಿವೃಧ್ಧಿ ಅಧಿಕಾರಿಯನ್ನಾಗಿ ನೇಮಕ ಮಾಡಿಸಿದ್ದಾರೆಂದು ದಲಿತ ಸಂಘಟನೆಗಳ ಹೋರಾಟ ಸಮಿತಿಯ ರಾಜ್ಯ ಸಂಯೋಜಕ ವಿ.ನಾಗರಾಜ್ ನೇರವಾಗಿ ಅರೋಪಿಸಿದ್ದಾರೆ.
ನಕಲಿ ಜಾತಿ ಪ್ರಮಾಣ ಸೃಷ್ಟಿಸಿ ಅಧಿಕಾರ ಪಡೆದ ಎಂ.ರಾಮು
ಇಷ್ಟೇ ಅಲ್ಲದೇ ಕೆಐಎಡಿಬಿ ಅಧಿಕಾರಿ ರಾಮು ತಾನು ಕುರುಬ ಎಂದು ನಕಲಿ ದಾಖಲೆ ನೀಡಿ ಸರ್ಕಾರಿ ಕೆಲಸಕ್ಕೆ ಸೇರಿದ್ದಾನೆ ಎಂಬ ಗಂಭೀರ ಅರೋಪವೂ ಇದೆ. ಈ ಬಗ್ಗೆ ದಲಿತ ಸಂಘರ್ಷ ಸಮಿತಿ ಕೊಟ್ಟ ದೂರಿನಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ತನಿಖೆ ಮಾಡಲು ಆದೇಶಿಸಿದ್ದರೂ, ಕೆಐಎಡಿಬಿ ಕಾರ್ಯದರ್ಶಿ ಗೌರವ್ ಗುಪ್ತ ಕ್ರಮ ಕೈಗೊಂಡಿಲ್ಲವೆಂಬ ಆರೋಪವನ್ನ ಮಾವಳ್ಳಿ ಶಂಕರ್ ಮಾಡಿದ್ದಾರೆ.

ಕೆಐಎಡಿಬಿ ಅಧಿಕಾರಿಗಳ ವಿರುದ್ದದ ಆರೋಪಗಳು.!
ಇನ್ನು ಈ ಇಬ್ಬರು ಅಧಿಕಾರಿಗಳ ವಿರುದ್ದ ಹತ್ತಾರು ಆರೋಪಗಳನ್ನು ದಲಿತ ಸಂಘರ್ಷ ಸಮಿತಿ ಮಾಡಿದೆ.
ಅವ್ಯವಹಾರ 1
ನಾಗಮಂಗಲದ ಅಟ್ನಾ ಮತ್ತು ಬೆಳಗುಂದ ಗ್ರಾಮದಲ್ಲಿ 1500 ಎಕರೆ ಜಮೀನನ್ನ ಬೇನಾಮಿ ಹೆಸರಲ್ಲಿ ಕರಾರು ಸೃಷ್ಟಿಸಿ, ಅದಕ್ಕೆ 4(1),6(1) ಪ್ರಕ್ರಿಯೆ ಮಾಡಿ ಹೆಚ್ಚು ಬೆಲೆ ಫಿಕ್ಸ್ ಮಾಡಿ ಲೂಟಿ ಮಾಡಿರುವ ಆರೋಪ
ಅವ್ಯವಹಾರ 2
ಹಾರೋಹಳ್ಳಿ ಕೆಐಎಡಿಬಿ 2 ನೇ ಹಂತದ ವಿಸ್ತರಣೆಗೆ, ಎಕರೆಗೆ 10 ಲಕ್ಷದಂತೆ 1000 ಎಕರೆ ಬೇನಾಮಿ ಆಸ್ತಿ ಖರೀದಿಸಿದ್ದಾರೆ, ಬಳಿಕ ಅದಕ್ಕೆ ಕೆಐಎಡಿಬಿಯಿಂದ ಎಕರೆಗೆ 70 ಲಕ್ಷದಂತೆ ಖರೀದಿ ಮಾಡಿ ಹಣ ಗುಳುಂ ಮಾಡಿರುವ ಆರೋಪ
ಅವ್ಯವಹಾರ 3
ಪರಿಶಿಷ್ಟ ಜಾತಿಯ ರತ್ನಮ್ಮ- ರಾಮಕೃಷ್ಣ ದಂಪತಿಗೆ ಕೆಐಎಡಿಬಿ ನೀಡಬೇಕಿದ್ದ ಪರಿಹಾರ ಹಣವನ್ನ ಗೌರವ್ ಗುಪ್ತ ಮತ್ತು ಎಂ ರಾಮು ದೋಖಾ ಮಾಡಿದ ಆರೋಪ
ಅವ್ಯವಹಾರ 4
ಸುಮಾರು ವರ್ಷಗಳ ಹಿಂದೆ ಯಶವಂತಪುರದಲ್ಲಿ ಕೆಐಎಡಿಬಿಯಿಂದ ಸ್ವಾಧೀನಗೊಂಡಿದ್ದ 4 ಎಕರೆ ಜಮೀನಿಗೆ ಬೇನಾಮಿ ರೈತನನ್ನ ಸೃಷ್ಟಿಸಿ, ಆತನ ಮೂಲಕ ಕೋರ್ಟ್ ಕೇಸ್ ಹಾಕಿಸಿ ಭೂಮಿ ವಾಪಸ್ಸು ಪಡೆದು ಅದನ್ನ ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆ. ಅದರಿಂದ ಕೋಟ್ಯಾಂತರ ರೂಪಾಯಿ ಹಣವನ್ನ ಗೌರವ್ ಗುಪ್ತ ಮತ್ತು ರಾಮು ಪಡೆದ ಆರೋಪ
ಅವ್ಯವಹಾರ 5
ದೇವನಹಳ್ಳಿ ಏರೋಸ್ಟೇಸ್ ಪ್ರಾಜೆಕ್ಟ್ ನಲ್ಲಿ ಗುತ್ತಿಗೆದಾರರು ಕಮಿಷನ್ ಕೊಟ್ಟಿಲ್ಲವೆಂದು ಕಿರುಕುಳ ನೀಡಿ, ಕಾಮಗಾರಿಯನ್ನ ಇನ್ನೂ ಆರಂಭಿಸದ ಆರೋಪ
ಹೀಗೆ ಹತ್ತಾರು ಆರೋಪಗಳನ್ನು ದಲಿತ ಸಂಘಟನೆಗಳ ಜಂಟಿ ಹೋರಾಟ ಸಮಿತಿಯ ಮುಖಂಡರಾದ ವಿ.ನಾಗರಾಜ್, ಹೆಣ್ಣೂರು ಶ್ರೀನಿವಾಸ್, ಮತ್ತು ಮಾವಳಿ ಶಂಕರ್ ಮಾಡಿದ್ದಾರೆ.
City Today News
(citytoday. Media)
9341997936
