
ಫ್ಯೂಚರ್ ಮೊಬಿಲಿಟಿ ಸಲ್ಯೂಷನ್ಸ್ ನಿಂದ ರಾಜ್ಯದ ಮೊದಲ ಸುಸಜ್ಜಿತ ನೈಸರ್ಗಿಕ ಅನಿಲ ಘಟಕ ಹಾಗೂ ಸಿ.ಎನ್.ಜಿ. ಫಿಟ್‌ಮೆಂಟ್ ಕೇಂದ್ರ ಶುಭಾರಂಭ:
ಆರ್ಥಿಕವಾಗಿ ಲಾಭದಾಯಕ, ದಕ್ಷತೆ, ಸುರಕ್ಷತೆ, ವಾಯುಮಾಲೀನ್ಯ ನಿಯಂತ್ರಣಕ್ಕೆ ಆದ್ಯತೆ

ಬೆಂಗಳೂರು, ಅ, 8: ಫ್ಯೂಚರ್ ಮೊಬಿಲಿಟಿ ಸಲ್ಯೂಷನ್ಸ್‌ನಿಂದ ರಾಜ್ಯದ ಮೊದಲ ಸುಸಜ್ಜಿತ ಪರಿಸರ ಸ್ನೇಹಿ ನೈಸರ್ಗಿಕ ಅನಿಲ – ಸಿಎನ್‌ಜಿ ಘಟಕ ಹಾಗೂ ಪರಿಸರ ಸ್ನೇಹಿ ಸಿಎನ್‌ಜಿ ವಾಹನವಾಗಿ ಪರಿವರ್ತಿಸುವ ಆಧುನಿಕ ಸಿ.ಎನ್.ಜಿ. ಫಿಟ್‌ಮೆಂಟ್ ಕೇಂದ್ರ ನಗರದ ಹೊಸೂರು ರಸ್ತೆಯ ಬೊಮ್ಮಸಂದ್ರದಲ್ಲಿಂದು ಶುಭಾರಂಭ ಮಾಡಿತು.ಆನೆಕಲ್ ಶಾಸಕ ಶಿವಣ್ಣ, ವಿಧಾನ ಪರಿಷತ್ ಸದಸ್ಯ ಡಾ. ಟಿ.ಎ.ಶರವಣ ಕೇಂದ್ರಕ್ಕೆ ಚಾಲನೆ ನೀಡಿದರು. ಸಿ.ಎನ್.ಜಿ. ಪರಿಸರ ಸ್ನೇಹಿಯಾಗಿದ್ದು, ಆರ್ಥಿಕವಾಗಿ ಲಾಭದಾಯಕವಾಗಿದೆ. ದಕ್ಷತೆ ಮತ್ತು ಸುರಕ್ಷಿತವಾಗಿದ್ದು, ನೈಸರ್ಗಿಕ ಅನಿಲ ಭವಿಷ್ಯದ ಇಂಧನವಾಗಿದೆ. ಬೆಂಗಳೂರು ನಗರ ಆಟೋಮೊಬೈಲ್ ಕ್ಷೇತ್ರದಲ್ಲಿ ಗಣನೀಯವಾಗಿ ಬೆಳವಣಿಗೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಫ್ಯೂಚರ್ ಮೊಬಿಲಿಟಿ ಸಲ್ಯೂಷನ್ಸ್ ಸಿ.ಎನ್.ಜಿ. ಫಿಟ್‌ಮೆಂಟ್ ಸೆಂಟರ್ ಆರಂಭಿಸಿದೆ.

೮೦೦ ಸಿಸಿ ಸಾಮರ್ಥ್ಯದ ಪೆಟ್ರೋಲ್ ವಾಹನ ಪ್ರತಿಲೀಟರ್ ಪೆಟ್ರೋಲ್ ಗೆ ೧೭ ಕಿಲೋಮೀಟರ್ ಮೈಲೇಜ್ ನೀಡಿದರೆ, ಸಿ.ಎನ್.ಜಿ.ಯಾಗಿ ಪರಿವರ್ತನೆಗೊಂಡ ವಾಹನ ೨೨ ಕಿ.ಲೋಮೀಟರ್ ನೀಡುತ್ತದೆ. ೧೧೦೦ ಸಿ.ಸಿ. ಸಾಮರ್ಥ್ಯದ ವಾಹನ ೧೫ ಕಿಲೋಮೀಟರ್ ನೀಡಿದರೆ, ಸಿ.ಎನ್.ಜಿ. ೨೨ ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಇದೇ ರೀತಿ ೧೨೦೦ ಸಿಸಿ ಸಾಮರ್ಥ್ಯದ ಪೆಟ್ರೋಲ್ ವಾಹನ ೧೩ ಕಿಲೋಮೀಟರ್ ನೀಡಿದರೆ, ಸಿ.ಎನ್.ಜಿ. ವಾಹನ ೧೯ ಕಿಲೋಮೀಟರ್, ಹಾಗೆಯೇ ೧೬೦೦ ಸಿಸಿ ಸಾಮಾರ್ಥ್ಯದ ವಾಹನ ೧೧ ಕಿಲೋಮೀಟರ್ ನೀಡಿದರೆ ಸಿ.ಎನ್.ಜಿ. ೧೬ ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಸಿ.ಎನ್.ಜಿ. ಬಳಕೆ ಪರಿಸರದ ದೃಷ್ಟಿಯಿಂದಲೂ ಸಾಕಷ್ಟು ಅನುಕೂಲಕರವಾಗಿವೆ.ಬಳಿಕ ಸಮಾರಂಭದಲ್ಲಿ ಮಾತನಾಡಿದ ಶಾಸಕ ಶಿವಣ್ಣ, ಸಿ.ಎನ್.ಜಿ. ಪರಿಸರ ಸ್ನೇಹಿಯಾಗಿದ್ದು, ಹೆಚ್ಚುತ್ತಿರುವ ಮಾಲೀನ್ಯ ಯುಗದಲ್ಲಿ ಪರ್ಯಾಯ ಇಂಧನ ಬಳಕೆ ಅತ್ಯಂತ ಅಗತ್ಯವಾಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ನ್ಯಾಯಾಲಯದ ಆದೇಶದಂತೆ ಸಿ.ಎನ್.ಜಿ ಯನ್ನು ಕಡ್ಡಾಯಗೊಳಿಸಲಾಗಿದೆ. ಬೆಂಗಳೂರು ನಗರದಲ್ಲಿ ಸಿ.ಎನ್.ಜಿ. ಕಡ್ಡಾಯಗೊಳಿಸುವ ಕಾಲ ದೂರವಿಲ್ಲ ಎಂದರು.
ಬೆಂಗಳೂರು ನಗರದಲ್ಲಿ ೧.೩ ಕೋಟಿ ಜನಸಂಖ್ಯೆಯಿದ್ದು, ಪ್ರತಿನಿತ್ಯ ಸಹಸ್ರಾರು ವಾಹನಗಳು ನೋಂದಣಿಯಾಗುತ್ತಿವೆ. ಇದರಿಂದ ವಾಯು ಮಾಲೀನ್ಯ ಹೆಚ್ಚಾಗುತ್ತಿದೆ. ಇದರಿಂದ ಹೃದ್ರೋಗ, ಕ್ಯಾನ್ಸರ್, ಆಸ್ತಮ ಸೇರಿ ಹಲವಾರು ಆರೋಗ್ಯ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಜನತೆ ಸಾಂಪ್ರದಾಯಿಕ ಇಂಧನದ ಬದಲಿಗೆ ನೈಸರ್ಗಿಕ ಅನಿಲದ ಬಳಕೆಗೆ ಒತ್ತು ನೀಡುವುದು ಅಗತ್ಯವಾಗಿದೆ ಎಂದು ಶಿವಣ್ಣ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಟಿ.ಎ. ಶರವಣ ಮಾತನಾಡಿ, ನೈಸರ್ಗಿಕ ಅನಿಲ ಬಳಕೆಯಿಂದ ಆರ್ಥಿಕವಾಗಿ ಹೆಚ್ಚು ಲಾಭವಾಗುತ್ತದೆ. ದೈನಂದಿನ ಬದುಕಿನಲ್ಲಿ ಅರ್ಥಶಾಸ್ತ್ರ ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ. ಈ ನೈಸರ್ಗಿಕ ಅನಿಲದ ಅರ್ಥ ಶಾಸ್ತ್ರದಲ್ಲಿ ಎಲ್ಲವೂ ಅಡಗಿದೆ. ಸಿ.ಎನ್.ಜಿ. ವಾಹನಗಳು ಪೆಟ್ರೋಲ್ ಮತ್ತು ಡೀಸೆಲ್ ಗಿಂತ ಹೆಚ್ಚು ಮೈಲೇಜ್ ನೀಡುತ್ತವೆ. ವಾಹನದ ಎಂಜಿನ್ ಜೀವಿತಾವಧಿಯನ್ನು ಹೆಚ್ಚಿಸುತ್ತದೆ. ಕಡಿಮೆ ನಿರ್ವಹಣಾ ವೆಚ್ಚದಿಂದ ಜನ ಸಾಮಾನ್ಯರಿಗೆ ಸಿ.ಎನ್.ಜಿ ನಿಜಕ್ಕೂ ಆಶಾಕಿರಣವಾಗಿದೆ ಎಂದರು.ಸಾರಿಗೆ ಇಲಾಖೆ ಆಯುಕ್ತ ಶಿವಕುಮಾರ್, ಬೆಂಗಳೂರು ನಗರದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಪರಿಸರ ಸ್ನೇಹಿ ಮತ್ತು ಇಂಧನ ಮಿತವ್ಯಯ ವಾಹನಗಳನ್ನು ಬಳಸದಿದ್ದರೆ ವಾತಾವರಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ನಗರದ ಜನತೆ ಇದೀಗ ಸಿ.ಎನ್.ಜಿ.ಯತ್ತ ಪರಿವರ್ತನೆಯಾಗಬೇಕು ಎಂದರು.
City Today News
(citytoday.media)
9341997936
