ಲಾಕ್‌ಡೌನ್‌ ತೆರವಿನ ನಂತರ ಪದವಿ ಪರೀಕ್ಷೆಯ ನಿರ್ಧಾರ: ಡಾ. ಅಶ್ವತ್ಥನಾರಾಯಣ-ಶೀಘ್ರದಲ್ಲೇ ಮಂಡ್ಯ ವಿವಿಗೆ ಕುಲಪತಿ ನೇಮಕ-

ಮಂಡ್ಯ: ಲಾಕ್‌ಡೌನ್‌ ತೆರವು ನಂತರ ಪದವಿ ವಿಭಾಗದ ತರಗತಿಗಳನ್ನು ನಡೆಸಲಾಗುವುದು. ಬಳಿಕ ಪರೀಕ್ಷೆಯ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

ಮಂಡ್ಯ ವಿಶ್ವವಿದ್ಯಾಲಯಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಅವರು ಮಾತನಾಡಿದರು. ರೂಸಾ ಅನುದಾನ ದಡಿ ಕಟ್ಟುತ್ತಿರುವ ಕಟ್ಟಡಗಳನ್ನೂ ವೀಕ್ಷಿಸಿದರು

“ಜೂನ್‌ 30ರಂದು ಲಾಕ್‌ಡೌನ್‌ ತೆರವಾಗಲಿದ್ದು, ಆ ನಂತರ ಪದವಿ ವಿಭಾಗದ ತರಗತಿ ಮತ್ತು ಪದವಿಯನ್ನು ಯಾವಾಗ ಮತ್ತು ಹೇಗೆ ನಡೆಸಬೇಕು ಎಂಬುದನ್ನು ಸಂಬಂಧಪಟ್ಟವರ ಜತೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು. ಪರೀಕ್ಷೆ ಬಗ್ಗೆ ಗೊಂದಲ ಇಟ್ಟುಕೊಳ್ಳದೇ, ವಿದ್ಯಾರ್ಥಿಗಳು ಅಭ್ಯಾಸ ಮುಂದುವರಿಸಬೇಕು,”ಎಂದು ಅವರು ಹೇಳಿದರು.

“ಮಂಡ್ಯ ಕ್ಲಸ್ಟರ್‌ಗೆ ವಿಶ್ವವಿದ್ಯಾಲಯದ ಮಾನ್ಯತೆ ಕೊಡಲು ಸಂಪುಟದ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಈ ಸಂಬಂಧ ಸುಗ್ರೀವಾಜ್ಞೆ ಹೊರಬೀಳಲಿದೆ. ವಿಶ್ವವಿದ್ಯಾಲಯವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಈ ತಿದ್ದುಪಡಿ ತರಲಾಗಿದೆ. ಜತೆಗೆ, ಕುಲಪತಿ ನೇಮಕಕ್ಕೆ ಇದ್ದ ಅಡ್ಡಿ ನಿವಾರಣೆ ಆಗಿದ್ದು ಆದಷ್ಟು ಬೇಗ ಮಂಡ್ಯ ವಿಶ್ವವಿದ್ಯಾಲಯಕ್ಕೆ ಕುಲಪತಿ ನೇಮಕ ಮಾಡಲಾಗುವುದು,”ಎಂದು ಭರವಸೆ ನೀಡಿದರು.

“ವಿಶ್ವವಿದ್ಯಾಲಯ ಗುಣಮಟ್ಟ ಹೆಚ್ಚಿಸಿಕೊಂಡು ಜ್ಞಾನ ಕೇಂದ್ರವಾಗಿ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ 40-50 ವರ್ಷಗಳಷ್ಟು ಹಳೆಯ ಪಠ್ಯಕ್ರಮ ಬದಲಾಗುವ ಅಗತ್ಯ ಇದೆ. ಬದುಕು ರೂಪಿಸಿಕೊಳ್ಳಲು ಶಿಕ್ಷಣ ಮುಖ್ಯ ಅದೇ ರೀತಿ ವೃತ್ತಿ ಜೀವನಕ್ಕೆ ಪೂರಕವಾದ ಕೌಶಲ್ಯ ಅಭಿವೃದ್ಧಿಗೂ ಒತ್ತು ನೀಡಲಾಗುವುದು. ವಿಶ್ವವಿದ್ಯಾಲಯದ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾಧಿಕಾರಿ, ವಿಶೇಷಾಧಿಕಾರಿ ಗಮನ ಹರಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯವನ್ನು ಉತ್ತಮವಾಗಿ ರೂಪಿಸಲು ಸರ್ಕಾರದ ಕಡೆಯಿಂದ ಎಲ್ಲ ಸಹಕಾರ ನೀಡಲಾಗುವುದು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ತವರು ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡಿ, ಮಂಡ್ಯದ ಗೌರವ ಹೆಚ್ಚಿಸೋಣ,”ಎಂದರು.

ಈ ಸಂದರ್ಭದಲ್ಲಿ ಮಂಡ್ಯ ಶಾಸಕ ಎಂ.ಶ್ರೀನಿವಾಸ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌, ಮಂಡ್ಯ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಎನ್‌.ನಿಂಗೇಗೌಡ ಉಪಸ್ಥಿತರಿದ್ದರು.

City Today News

(citytoday.media)

9341997936

Leave a comment

This site uses Akismet to reduce spam. Learn how your comment data is processed.