
ಸವಿತಾ ಸಮಾಜದ ಅನರ್ಥ್ಯ ರತ್ನ ಬಿಹಾರ ರಾಜ್ಯದ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ದಿ. ಕರ್ಪೂರಿ ಠಾಕೂರ್‌ರವರ ಸೇವೆಯನ್ನು ಗುರುತಿಸಿ, ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಿದ ಭಾರತ ಸರ್ಕಾರ ಮತ್ತು ರಾಷ್ಟ್ರಪತಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಮತ್ತು ಈ ಶುಭ ಸಂದರ್ಭದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ಸಂಪುಟ ಸಚಿವರುಗಳು ತಮ್ಮ ಅಮೃತ ಹಸ್ತದಿಂದ ಶ್ರೀಯುತರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, * ಗೌರವ ಸಮರ್ಪಿಸಲಿದ್ದಾರೆ. ಶ್ರೀ ಕರ್ಪೂರಿ ಠಾಕೂರ್‌ರವರ ಜನ್ಮ ಶತಮಾನೋತ್ಸದ ಸಂದರ್ಭದಲ್ಲಿ ಅವರ ಸೇವೆಯನ್ನು ಸ್ಮರಿಸಿ, ಗೌರವಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಭಾವಿಸುತ್ತೇವೆ.
ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘದ ವತಿಯಿಂದ ದಿನಾಂಕ : 06/02/2024 ಮಂಗಳವಾರದಂದು ರಾಜ್ಯ ಮಟ್ಟದ ಸಮಾವೇಶವನ್ನು ಆಚರಿಸುವ ಈ ಶುಭ ಸಂದರ್ಭದಲ್ಲಿ ಮೊಟ್ಟ ಮೊದಲನೆಯದಾಗಿ ರಾಜ್ಯ ಸರ್ಕಾರವನ್ನು ಒತ್ತಾಯಿಸುವುದೇನೆಂದರೆ ಸುಮಾರು ರೂ.178 ಕೋಟಿ ಸಾರ್ವಜನಿಕ ಹಣವನ್ನು ಬಿಡುಗಡೆಗೊಳಿಸಿ, ಸಿದ್ಧಗೊಂಡಿರುವ ಸನ್ಮಾನ್ಯ ಮುಖ್ಯಮಂತ್ರಿಗಳ ಮಹತ್ತರ ಯೋಜನೆಯಾದ ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಆದಷ್ಟು ಬೇಗ ಮತ್ತು ಕಡ್ಡಾಯವಾಗಿ ಜಾರಿಗೊಳಿಸಬೇಕೆಂದು ಈ ಮೂಲಕ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಮತ್ತು ಕರ್ನಾಟಕ ರಾಜ್ಯ ಸವಿತಾ ಕಲಾ ಸಂಘದ ಪರವಾಗಿ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇವೆ.
ಸವಿತಾ ಸಮಾಜದವರ ಜೀವನೋಪಾಯಕ್ಕಾಗಿ ಯಾವುದೇ ರೀತಿಯ ಜಮೀನು ಅಥವಾ ಇನ್ನಿತರ ಆರ್ಥಿಕ ಮೂಲಗಳಿಲ್ಲದೆ, ಸಮಾಜದ ಬಂಧುಗಳು ತಮ್ಮ ಜೀವನಕ್ಕಾಗಿ ಪೂರ್ವಿಕರ ವೃತ್ತಿಗಳಾದ ಕ್ಷೌರಿಕ ವೃತ್ತಿ ಹಾಗೂ ಕಲಾ ವೃತ್ತಿಯನ್ನು ನಂಬಿ ಬದುಕುತ್ತಿದ್ದಾರೆ. ಇಂತಹ ಹಿಂದುಳಿದ ಸವಿತಾ ಸಮಾಜವು ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 2ಎ ಗುಂಪಿನಲ್ಲಿ ಸೇರ್ಪಟ್ಟಿರುತ್ತದೆ. ಈ ಪ್ರವರ್ಗ 2ಎ ಗುಂಪಿನಲ್ಲಿ ಅತ್ಯಂತ ಪ್ರಬಲ ಹಿಂದುಳಿದ ಜಾತಿಗಳು ಸೇರಿರುವುದರಿಂದ ಇವರೊಡನೆ ಪೈಪೋಟಿ ನಡೆಸಿ, ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಸವಿತಾ ಸಮಾಜಕ್ಕೆ ಸಾಧ್ಯವಾಗುತ್ತಿಲ್ಲ. ಇಂತಹ ಶೋಷಿತ ಹಾಗು ಕುಲವೃತ್ತಿಯನ್ನೇ ನಂಬಿರುವ ಸವಿತಾ ಸಮಾಜವನ್ನು ಪ್ರವರ್ಗ 2ಎ ಗುಂಪಿನಿಂದ ಬೇರ್ಪಡಿಸಿ, ಪ್ರತ್ಯೇಕ ಗುಂಪಾಗಿ ಮಾಡಿ, ಇದನ್ನು ಪ್ರವರ್ಗ 1ಬಿ ಎಂದು ಪರಿಗಣಿಸಿ, ಪ್ರತ್ಯೇಕ ಮೀಸಲಾತಿಯನ್ನು ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸುತ್ತೇವೆ.

ನಮ್ಮ ಸಮಾಜದ ಆತ್ಮವಿಶ್ವಾಸವನ್ನು ಫಾಸಿಗೊಳಿಸುತ್ತಿರುವ “ಹಜಾಮ/ಹಜಾಮತ್” ಎಂಬ ಪದಗಳನ್ನು ಸಾರ್ವಜನಿಕವಾಗಿ ಬಳಸದಂತೆ ಸರ್ಕಾರ ಆದೇಶ ಹೊರಡಿಸಿದ್ದರೂ ಸಹ ಸಾಮಾನ್ಯ ಜನರ ಪದ ಬಳಕೆ ಇನ್ನೂ ಬದಲಾಗಲಿಲ್ಲ. ಆದ್ದರಿಂದ ಸರ್ಕಾರಿ ಆದೇಶ ಮೀರಿ ಈ ರೀತಿಯ ಪದ ಬಳಕೆ ಮಾಡುವವರ ವಿರುದ್ಧ ಜಾತಿ ನಿಂದನೆ ಮೊಕದ್ದಮೆ ಹೂಡಲು ಆದೇಶ ಹೊರಡಿಸುವ ಮೂಲಕ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳುವಂತೆ ಕೋರುತ್ತೇವೆ.
ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿರುವ ಸವಿತಾ ಸಮಾಜದ ಅಭಿವೃದ್ಧಿಗೆ 2024-25ನೇ ಸಾಲಿನ ಮುಂಗಡ ಪತ್ರದಲ್ಲಿ ರೂ. 50.00 ಕೋಟಿ ಅನುದಾನ ನೀಡಬೇಕೆಂದು ಕೋರುತ್ತೇವೆ.
ಬೆಂಗಳೂರು ಅಥವಾ ಹೊರವಲಯದಲ್ಲಿ ಒಂದು ಸಿ.ಎ. ನಿವೇಶನವನ್ನು ಉಚಿತವಾಗಿ ಸವಿತಾ ಕಲಾ ಸಂಘಕ್ಕೆ ಮಂಜೂರು ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚನೆ ನೀಡಲು ಕೋರುತ್ತೇವೆ.
ಸಮಾಜದ ಕಲಾವಿದರಿಗೆ ಮಾಸಾಶನ ಒದಗಿಸಿಕೊಡಬೇಕೆಂದು ಕೋರುತ್ತೇವೆ. ಉಚಿತ ಮತ್ತು ಆರೋಗ್ಯ ವಿಮೆ
ಸಮಾಜದ ವಸತಿ ಹೀನರಿಗೆ ಮೊದಲ ಆದ್ಯತೆಯಲ್ಲಿ ಸಮುಚ್ಚಯ ವಸತಿ ಯೋಜನೆ ಅಡಿಯಲ್ಲಿ ವಸತಿ ಕಲ್ಪಿಸಿಕೊಡಬೇಕೆಂದು ಮತ್ತು ನಿವೇಶನ ಹೊಂದಿದವರಿಗೆ ಮನೆ ಕಟ್ಟಿಕೊಳ್ಳಲು ಹಣಕಾಸು ನೆರವು ನೀಡಬೇಕೆಂದು ಕೋರುತ್ತೇವೆ.
ಮುಜರಾಯಿ ದೇವಸ್ಥಾನಗಳಲ್ಲಿ ಸಂಗೀತ ಕಲಾವಿದರಾದ ನಾದಸ್ವರ, ಡೋಲು ಮತ್ತು ಸ್ಯಾಕ್ರೋಫೋನ್ ನುಡಿಸುವವರಿಗೆ ವಸತಿ ಅವಕಾಶ ಮತ್ತು ವೇತನ ಕಡ್ಡಾಯಗೊಳಿಸಿ, ವಿಶೇಷ ಪೂಜೆಗಳಲ್ಲಿ ಕಡ್ಡಾಯವಾಗಿ ನಾದಸ್ವರ, ಡೋಲು ಮತ್ತು ಸ್ಯಾಕ್ರೋಫೋನ್ ಕಾರ್ಯಕ್ರಮ ಹಮ್ಮಿಕೊಂಡು, ಕಲಾವಿದರ ಜೀವನಕ್ಕೆ ಸಹಕಾರಿಯಾಗಲು ಆದೇಶಿಸಬೇಕೆಂದು ಕೋರುತ್ತೇವೆ.
ಈಗಾಗಲೇ ಕಲಾವಿದರಿಗೆ ನೀಡುತ್ತಿರುವ ಮಾಸಾಶನವನ್ನು ರೂ. 2000/- ದಿಂದ ರೂ. 5000/-ಕ್ಕೆ ಹೆಚ್ಚಿಸಬೇಕೆಂದು ಕೋರುತ್ತೇವೆ.
ಸರ್ಕಾರಿ ಬಸ್ಸುಗಳಲ್ಲಿ ನಾದಸ್ವರ, ಡೋಲು ಮತ್ತು ಸ್ಯಾಕ್ರೋಫೋನ್ ಸಾಮಗ್ರಿಗಳಿಗೆ ಹೆಚ್ಚುವರಿಯಾಗಿ ಲಗ್ಗೇಜ್ ಶುಲ್ಕ ಪಡೆಯದಂತೆ ಸಾರಿಗೆ ಇಲಾಖೆಗೆ ಸೂಚಿಸಲು ಮನವಿ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪ್ರತಿ ವರ್ಷ ನೀಡುವ ರಾಜ್ಯೋತ್ಸವ ಪ್ರಶಸ್ತಿಗೆ ‘ನಾದಸ್ವರ, ಡೋಲು ಮತ್ತು ಸ್ಯಾಕ್ರೋಫೋನ್ ನುಡಿಸಲು ಕಲಾವಿದರನ್ನು ಕಡ್ಡಾಯವಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲು ಮನವಿ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಮಾಜದ ಕಲಾವಿದರಿಗೆ ಗುರುತಿನ ಚೀಟಿ ನೀಡಿ, ಅದನ್ನು ಸರ್ಕಾರದ ಎಲ್ಲಾ ಕಾರ್ಯಕ್ರಮಗಳಲ್ಲಿ ಪರಿಗಣಿಸಲು ಮನವಿ ಮಾಡುತ್ತೇವೆ.
ಎಲ್ಲಾ ರಾಜ್ಯ ಮತ್ತು ರಾಷ್ಟ್ರೀಯ ಹಬ್ಬಗಳಲ್ಲಿ ಸವಿತಾ ಸಮಾಜದ ಕಲಾವಿದರಿಗೆ ಕಾರ್ಯಕ್ರಮವನ್ನು ಕಡ್ಡಾಯವಾಗಿ ರೂಪಿಸಬೇಕೆಂದು ಮನವಿ ಮಾಡುತ್ತೇವೆ.
ಸದ್ಯ ಇರುವ ಮಾಸಾಶನ ವಯೋಮಿತಿಯನ್ನು 58 ರಿಂದ 55ಕ್ಕೆ ಇಳಿಸಲು ಮನವಿ ಮಾಡುತ್ತೇವೆ.
ಬೆಂಗಳೂರು ಮತ್ತು ಇತರೆ ನಗರಗಳಲ್ಲಿ ಮಹಾನಗರ ಪಾಲಿಕೆ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆ ವ್ಯಾಪ್ತಿಯ ಸರ್ಕಾರಿ ಸ್ವಾಮ್ಯದ ವಾಣಿಜ್ಯ ಸಂಕೀರ್ಣದ ಕಟ್ಟಡಗಳಲ್ಲಿ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಮಳಿಗೆಗಳ ವ್ಯವಸ್ಥೆ ಮಾಡಿಕೊಡಬೇಕೆಂದು ಕೋರುತ್ತೇವೆ.
ಇತ್ತೀಚಿನ ದಿನಗಳಲ್ಲಿ ರಿಲಾಯನ್ಸ್ ಮತ್ತು ಇತರ ದೈತ್ಯ ಅಂತರಾಷ್ಟ್ರೀಯ ಕಂಪನಿಗಳು ನಮ್ಮ ಕುಲವೃತ್ತಿಗೆ ಕೈಹಾಕಿ ಸವಿತಾ ಸಮಾಜದ ಬದುಕನ್ನು ಬೀದಿಗೆ ತಳ್ಳಲು ಪ್ರಯತ್ನಿಸುತ್ತಿದ್ದಾರೆ. ಇದನ್ನು ಸಮಾಜವು ಅಪಾಯಕಾರಿ ಬೆಳವಣಿಗೆ ಎಂದು ಪರಿಗಣಿಸಿ, ಈ ಬೆಳವಣಿಗೆಯನ್ನು ತಡೆಯಲು ಒಂದು ಬಲಿಷ್ಠವಾದ ಕಾಯ್ದೆ ರೂಪಿಸಬೇಕೆಂದು ಕೋರುತ್ತೇವೆ.
ಸವಿತಾ ಅಭಿವೃದ್ಧಿ ನಿಗಮಕ್ಕೆ ಸಮಾಜದಲ್ಲಿ ಸಕ್ರಿಯವಾಗಿ ಕಾರ್ಯ ಪ್ರವೃತ್ತರಾಗಿ ಸದಾ ಜನರ ಸೇವೆಯಲ್ಲಿರುವ ಮತ್ತು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವವರಿಗೆ ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇವೆ.
ನಿಗಮ, ಮಂಡಳಿ ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವಾಗ ಸವಿತಾ ಸಮಾಜದ ಅಭ್ಯರ್ಥಿಗಳಿಗೂ ಅವಕಾಶ ಕಲ್ಪಿಸಿಕೊಡಬೇಕೆಂದು ಕೋರುತ್ತೇವೆ.
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಂ. ವೀರಪ್ಪ ಮೊಯ್ಲಿರವರನ್ನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕೆಂದು ಕೋರುತ್ತೇವೆ.
ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ಸವಿತಾ ಸಮಾಜದ ಯಾವುದೇ ಅಭ್ಯರ್ಥಿಗಳು ಇರುವುದಿಲ್ಲ. ಆದರೆ ಬಿಜೆಪಿ ಪಕ್ಷವು ಸವಿತಾ ಸಮಾಜದ ಅಶೋಕ್ ಗಸ್ತಿ ఎంబ ಸಾಮಾನ್ಯ ಕಾರ್ಯಕರ್ತನನ್ನು ರಾಜ್ಯಸಭೆಗೆ ನೇಮಿಸಿದ್ದು, ದೇಶದಲ್ಲಿಯೇ ಗಮನ ಸೆಳೆದ ವಿಷಯವಾಗಿದೆ. ನಮ್ಮ ಕಾಂಗ್ರೆಸ್ ಪಕ್ಷವೂ ಸಹ ಮಾದರಿಯಾಗುವಂತೆ ಸವಿತಾ ಸಮಾಜದ ಯಾರನ್ನಾದರೂ ಒಬ್ಬ ಸಕ್ರಿಯ ಕಾರ್ಯಕರ್ತರನ್ನು ಮೇಲಿನ ಯಾವುದಾದರೂ ಹುದ್ದೆಗೆ ನಾಮನಿರ್ದೇಶನ ಮಾಡಿಕೊಡಬೇಕೆಂದು ಎನ್. ಶಿವಶಂಕರ್, ಗೌರವಾಧ್ಯಕ್ಷರು,ಕೆ. ಚಂದ್ರಶೇಖರ್ ಅಧ್ಯಕ್ಷರು ಮತ್ತು ಸಮುದಾಯದ ಮುಖಂಡರುಗಳು ಪ್ರೆಸ್ಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಕೋರಿದರು.
City Today News 9341997936
