ಮಾದಿಗ ಸಮುದಾಯಕ್ಕೆ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಟಿಕೇಟ್ ತಪ್ಪಿಸಲು ಯತ್ನಿಸುತ್ತಿರುವ ಮಂತ್ರಿಗಳಾದ ಸುಧಾಕರ್ ಮತ್ತು ಕೊತ್ತಲೂರು ಮಂಜುನಾಥ್ ಅವರ ಹೇಳಿಕೆಗೆ ಖಂಡನೆ.

ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ ಸುಮಾರು 20 ಕ್ಷೇತ್ರಗಳಲ್ಲಿ ಪರಿಶಿಷ್ಟ ಜಾತಿಗಳಲ್ಲೇ ಬಹುಸಂಖ್ಯಾತರಾಗಿರುವ ಮಾದಿಗ ಎಡಗೈ ಸಮುದಾಯವು ಪ್ರತೀ ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮತದಾರರಿದ್ದು ಗೆಲುವು ಸಾಧಿಸಲು ನಿರ್ಣಾಯಕ ಪಾತ್ರ ವಹಿಸುತ್ತಾರೆ. ಕಾಂಗ್ರೆಸ್ ಪಕ್ಷದ ಸಾಂಪ್ರದಾಯದಂತೆ ಐದು ಮೀಸಲು ಲೋಕಸಭಾ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳಲ್ಲಿ ಬಲಗೈ ಸಮುದಾಯದವರಿಗೆ ಮತ್ತು ಎರಡು ಕ್ಷೇತ್ರಗಳಲ್ಲಿ ಎಡಗೈ ಸಮುದಾಯದವರಿಗೆ ಚುನಾವಣೆಯಲ್ಲಿ ಟಿಕೇಟ್ ನೀಡುತ್ತಾ ಬಂದಿದೆ. ಕೋಲಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಹಲವಾರು ಬಾರಿ ಗೆಲುವು ಸಾಧಿಸಿ ತೋರಿಸಿಕೊಟ್ಟಿದ್ದೇವೆ.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಚಿಂತಾಮಣಿ, ಶಿಡ್ಲಘಟ್ಟ, ಶ್ರೀನಿವಾಸಪುರ, ತಾಲ್ಲೂಕುಗಳಲ್ಲಿ ಬಹುಸಂಖ್ಯಾತರಾದ ಮಾದಿಗ ಸಮುದಾಯದವರಿದ್ದು ಬಂಗಾರಪೇಟೆ ಮುಳಬಾಗಿಲು, ಕೋಲಾರ ತಾಲ್ಲೂಕುಗಳಲ್ಲಿ ಶೇಕಡ 50% ರಷ್ಟು ಜನಸಂಖ್ಯೆಯನ್ನು ಹೊಂದಿರುತ್ತಾರೆ. ಒಟ್ಟಾರೆ ಮೂರುವರೆ ಲಕ್ಷ ಅಧಿಕ ಜನಸಂಖ್ಯೆ ಮತದಾರರಿದ್ದಾರೆ.
ಕೋಲಾರ ಲೋಕಸಭಾ ಕ್ಷೇತ್ರದ ಶಾಸಕರುಗಳಾದ ಚಿಂತಾಮಣಿ ಡಾ|| ಎಂ.ಸಿ. ಸುಧಾಕರ್, ಕೋಲಾರ ಕೊತ್ತನೂರು ಮಂಜುನಾಥ್, ಮಾಲೂರು ನಂಜೇಗೌಡ, ಬಂಗಾರಪೇಟೆ ಎಸ್.ಎನ್.ನಾರಾಯಣಸ್ವಾಮಿ ಹಾಗೂ ವಿಧಾನಪರಿಷತ್ ಸದಸ್ಯರಾದ ಅನಿಲ್ ಕುಮಾರ್‌ರವರುಗಳು ಗೆದ್ದು ಬಂದಿರುವುದೂ ಕೂಡ ಈ ಸಮುದಾಯದ ಬೆಂಬಲದಿಂದಲೇ ಎಂಬುವುದನ್ನು ಮರೆಯಬಾರದು. ಅವರು ಮಾತನಾಡುವುದಾದರೆ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಬಲಗೈ ಮತ್ತು ಎಡಗೈ ಸಮುದಾಯದವರಿಗೆ ಸಮನಾಗಿ ಸೀಟು ಹಂಚಿಕೆಯಾಗುವಂತೆ ಒತ್ತಾಯ ಮಾಡಬೇಕು.
ಕಲಬುರಗಿ ಮತ್ತು ಚಾಮರಾಜ ನಗರದಲ್ಲಿ ನಾವು ನಿರಂತರವಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಸೇರಿದಂತೆ ಬಲಗೈ ಸಮುದಾಯದವರನ್ನು ಬೆಂಬಲಿಸುತ್ತಾ ಬಂದಿದ್ದೇವೆ. ಹಾಗೆಯೇ ಪರಿಶಿಷ್ಟ ಜಾತಿಗಳೆಲ್ಲರೂ ಒಂದಾಗಿ ರಾಜಕೀಯ ಅಧಿಕಾರವನ್ನು ಕೂಡ ಸಮನಾಗಿ ಹಂಚಿಕೊಳ್ಳುವ ಅನಿವಾರ್ಯತೆ ಇದೆ. ಕೋಲಾರದಲ್ಲಿ ಕೆ.ಹೆಚ್.ಮುನಿಯಪ್ಪನವರು ಈಗಾಗಲೇ 7 ಬಾರಿ ನಿರಂತರವಾಗಿ ಗೆದ್ದು ತೋರಿಸಿಕೊಟ್ಟಿರುತ್ತಾರೆ. ಹಾಗೆಯೇ ಚಿಕ್ಕಪೆದ್ದಣ್ಣನವರಿಗಾಗಲೀ ಅಥವಾ ಡಾ|| ಎಲ್. ಹನುಮಂತಯ್ಯನವರಿಗಾಗಲೀ ಯಾರಾದರೂ ಸರಿಯೇ ಮಾದಿಗ ಸಮುದಾಯಕ್ಕೆ ಕೋಲಾರ ಕ್ಷೇತ್ರವನ್ನು ಮೀಸಲಾಗಿಟ್ಟು ಟಿಕೇಟ್ ನೀಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಮಾನ್ಯ ಡಿ.ಕೆ.ಶಿವಕುಮಾರ್‌ರವರು ಮತ್ತು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಮಾದಿಗ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಒದಗಿಸಬೇಕೆಂದು ಒತ್ತಾಯಿಸುತ್ತೇವೆ.
ಕಳೆದ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷವು ಮಾದಿಗ ಸಮುದಾಯಕ್ಕೆ 15 ಎಂ.ಎಲ್.ಎ. ಕ್ಷೇತ್ರಗಳಿಗೆ ಟಿಕೇಟ್ ನೀಡದೆ ಸಮುದಾಯವು ವಂಚನೆಗೊಳಗಾಗಿದ್ದೇವೆ. ಈ ಬಾರಿಯೂ ಕೂಡ ಕೋಲಾರ ಲೋಕಸಭಾ ಕ್ಷೇತ್ರಕ್ಕೆ, ಟಿಕೇಟ್ ತಪ್ಪಿಸುವ ಹುನ್ನಾರಗಳು ನಡೆಯುತ್ತಿರುವ ಬಗ್ಗೆ ನಮಗೆ ಮಾಹಿತಿ ಲಭ್ಯವಾಗಿದೆ.
ಸಾಮಾಜಿಕ ನ್ಯಾಯದ ಹಿತ ದೃಷ್ಟಿಯಿಂದ ನ್ಯಾಯ ಸಮ್ಮತವಾಗಿ ಸಮನಾಗಿ ರಾಜಕೀಯ ಪ್ರಾತಿನಿಧ್ಯವನ್ನು ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಎಡಗೈ ಮಾದಿಗ ಸಮುದಾಯದವರಿಗೆ ಲೋಕಸಭಾ ಟಿಕೆಟ್ ನೀಡಿದರೆ ರಾಜ್ಯಮಟ್ಟದಲ್ಲಿ ಮಾದಿಗ ಸಮುದಾಯದ ಓಟು ಪಡೆದು ಪಕ್ಷವು ಗೆಲುವು ಸಾಧಿಸಲು ಅನುಕೂಲವಾಗುತ್ತದೆ. ಕಾಂಗ್ರೆಸ್ ಪಕ್ಷದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಅಸ್ಪೃಶ್ಯರಲ್ಲಿ ಅಸ್ಪೃಶ್ಯರಾದ ಮಾದಿಗ ಸಮುದಾಯಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ನೀಡದಿದ್ದರೆ ಚುನಾವಣೆಯಲ್ಲಿ ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಈ ಮೂಲಕ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಕೇಶವಮೂರ್ತಿ ಬಿ, ರಾಜ್ಯಧ್ಯಕ್ಷರು, ಎಂ. ಸಿ. ಶ್ರೀನಿವಾಸ್, -ರಾಜ್ಯಧ್ಯಕ್ಷರು, ಮಾದಿಗ ದಂಡೋರ ಜನಜಾಗೃತಿ ಸಮಿತಿ, ಕೆ. ಬಿ. ನರಸಿಂಹ, ರಾಜ್ಯ ಗೌರವಧ್ಯಕ್ಷರು, ದಾಸ್. ಸಿ. ರಾಜ್ಯ ಪ್ರಧಾನ ಕಾರ್ಯಧರ್ಶಿಗಳು ಹಾಗೂ ರಾಮಪ್ಪ ರಾಜ್ಯ ಮಹಾ ಪ್ರಧಾನ ಕಾರ್ಯಧರ್ಶಿಗಳು ಮನವಿ ಮಾಡುತ್ತಾ ಎಚ್ಚರಿಸುತ್ತೇವೆ ಎಂದು ತಿಳಿಸಿದರು.
City Today News 9341997936
