ವಿಧಾನಪರಿಷತ್ ನಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮೆಲ್ಲರದ ಧ್ವನಿ ಡಾ.ಸಿ.ಎಸ್.ದ್ವಾರಕಾನಾಥ್ ಸರ್ ಅವರ ಮೂಲಕ ಮೊಳಗುವುದನ್ನು ಕೇಳಿಸಿಕೊಂಡು ಪುಲಕಿತರಾಗಲು ಕಾತುರರಾಗಿ ಕಾಯುತಿದ್ದೇವೆ

ಈ ದೇಶಕ್ಕೆ ಸ್ವಾತಂತ್ರ್ಯ ಬಂದು, ವಿಧಾನಸಭೆ ಮತ್ತು ವಿಧಾನಪರಿಷತ್ ಸೃಷ್ಟಿ ಆದಾಗಿನಿಂದಲೂ ನಮ್ಮ ಅಲೆಮಾರಿ/ಆದಿವಾಸಿ ಸಮುದಾಯದ ಪ್ರತಿನಿದಿಗಳು ಎರಡೂ ಸದನಗಳಲ್ಲಿ ಕಾಲಿಟ್ಟಿಲ್ಲ. ಅವರಿಗೆ ಈವರೆಗೂ ಇದರ ಅರಿವೇ ಇರಲಿಲ್ಲ. ಈ ಕಾರಣಕ್ಕೆ ನಮ್ಮ ನೋವು, ಅಸಹಾಯಕತೆ ಮತ್ತು ಸಮಸ್ಯೆಗಳ ಕುರಿತಂತೆ ವಿಧಾನಸಭೆ ಮತ್ತು ವಿಧಾನಪರಿಷತ್‌ ನಲ್ಲಿ ಈವರೆಗೂ ಯಾವುದೇ ಚರ್ಚೆಯಾಗಿಲ್ಲ!! ನಮ್ಮ ಸಮಸ್ಯೆಗಳ ಕುರಿತು ಯಾರಿಗೂ ಅರಿವಿಲ್ಲ, ಆದ್ದರಿಂದಲೇ ನಾವು ಇಂದಿಗೂ ನಿರ್ಗತಿಕರಾಗಿಯೇ ಉಳಿದಿದ್ದೇವೆ.

“ಶಾಸನವನ್ನು ರೂಪಿಸುವ ಜಾಗಕ್ಕೆ ನೀವು ಹೋಗದ ಹೊರತು ನಿಮ್ಮ ಸಮಸ್ಯೆಗಳು ಪರಿಹಾರವಾಗಲಾರವು” ಎಂದು ಡಾ.ಅಂಬೇಡ್ಕರ್ ರವರು ಹೇಳುತ್ತಾರೆ. ಆದರೆ ಹಣಬಲ, ಜಾತಿಬಲ, ಸಂಘಟನೆಯ ಬಲ ಯಾವುದೂ ಇಲ್ಲದ ನಾವು ವಿಧಾನಸಭೆ, ವಿಧಾನಪರಿಷತ್‌ ಗಳಿಗೆ ಹೇಗೆ ಹೋಗಲು ಸಾಧ್ಯ? ಆದ್ದರಿಂದ ಕನಿಷ್ಟ ವಿಧಾನಪರಿಷತ್ತಿಗೆ ನಮ್ಮ ಪ್ರತಿನಿಧಿಯನ್ನು ನಾಮನಿರ್ದೇಶನ ಮಾಡುವುದೊಂದೇ ಈಗಿರುವ ಮಾರ್ಗ.

ಈ ಹಿನ್ನೆಲೆಯಲ್ಲಿ ಕರ್ನಾಟಕದ ಆದಿವಾಸಿ ಮತ್ತು ಅಲೆಮಾರಿಗಳೆಲ್ಲಾ ಸೇರಿ ಸುಮಾರು 120 ಸಮುದಾಯಗಳು ಸಂಘಟಿತರಾಗಿ ಡಾ.ಸಿ.ಎಸ್.ದ್ವಾರಕಾನಾಥ್ ಸರ್ ಅವರನ್ನು ನಮೆಲ್ಲರ ಪ್ರತಿನಿಧಿಯನ್ನಾಗಿ ವಿಧಾನಪರಿಷತ್ತಿಗೆ ಕಳುಹಿಸಿಕೊಡಲು ನಾಮನಿರ್ದೇಶನ ಮಾಡಬೇಕೆಂದು ಒತ್ತಾಯಿಸಲು ತೀರ್ಮಾನಿಸಿದ್ದೇವೆ.

ದ್ವಾರಕಾನಾಥ್ ಸರ್ ಅವರು ಕಳೆದ ಮೂರುನಾಲ್ಕು ದಶಕಗಳಿಂದ ನಮ್ಮ ಅಲೆಮಾರಿ ಮತ್ತು ಆದಿವಾಸಿ ಸಮಸ್ಯೆಗಳ ಕುರಿತಂತೆ ನ್ಯಾಯಾಲಯ ಮತ್ತು ಸರ್ಕಾರದ ಮಟ್ಟದಲ್ಲಿ ನಮ್ಮ ಹಕ್ಕುಗಳಿಗಾಗಿ ಹೋರಾಡುತಿದ್ದಾರೆ. ನಮ್ಮ ಎಲ್ಲಾ ಸಮುದಾಯಗಳ ಬಗ್ಗೆ ಅವರಿಗೆ ಅಪಾಯ ಮಾಹಿತಿ ಇದೆ. ಸುಮಾರು 48 ಸಮುದಾಯಗಳ ಸಂಶೋಧನಾ ಕೃತಿಗಳಿಗೆ ಮಾರ್ಗದರ್ಶಕರಾಗಿ ಸರ್ಕಾರದ ‘ಡಾ.ಅಂಬೇಡ್ಕರ್ ಸಂಶೋದನ ಸಂಸ್ಥೆ’ಗೆ ಕೆಲಸ ಮಾಡಿ ಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಹಿಂದುಳಿದ ವರ್ಗಗಳ ಪ್ರವರ್ಗ-1 ರಲ್ಲಿರುವ 46 ಅಲೆಮಾರಿ ಸಮುದಾಯಗಳಿಗೆ ಅಸ್ಮಿತೆ ನೀಡಿದ್ದಾರೆ.

ರಾಜ್ಯದಲ್ಲಿ ಮೊಟ್ಟಮೊದಲ ಸಲ ಅಲೆಮಾರಿ ಪಟ್ಟಿ ಪ್ರಕಟಿಸಲು ಕಾರಣರಾಗಿದ್ದಾರೆ. “ಅಲೆಮಾರಿ ಕೋಶ” “ಅಲೆಮಾರಿ ಅಭಿವೃದ್ಧಿ ನಿಗಮ” ಮತ್ತು ಈಗ ಬಜೆಟ್ ನಲ್ಲಿ ಪ್ರಕಟವಾದ “ಅಲೆಮಾರಿ ಆಯೋಗ” ರಚಿಸಲು ಕೂಡ ದ್ವಾರಕಾನಾಥ್ ಅವರೇ ಮೂಲ ಕಾರಣಕರ್ತರಾಗಿದ್ದಾರೆ. ನಾಡಿನಾದ್ಯಂತ ಮೂಲೆಮೂಲೆಗಳಿಂದ ದಿಕ್ಕಿಲ್ಲದೆ ಬರುವ ಅಲೆಮಾರಿಗಳ ಜಾತಿ ಸರ್ಟಿಫಿಕೇಟ್, ಸಾಲಸೋಲ, ನಿವೇಶನ, ಭೂಮಿ, ಅನುದಾನ, ಸವಲತ್ತು ಕೂಡಿಸಲು ತಮ್ಮ ಲಾಯರ್ ಆಫೀಸನ್ನೇ ಮೀಸಲಾಗಿ ಇಟ್ಟಿದ್ದಾರೆ! ಸದಾ ಅಲೆಮಾರಿ, ಆದಿವಾಸಿಗಳ ಸಮಸ್ಯೆಗಳು ಮತ್ತು ಪರಿಹಾರಗಳ ಕುರಿತಂತೆ ನಿರಂತರ ಅಧ್ಯಯನದಲ್ಲಿ ತೊಡಗಿರುತ್ತಾರೆ. ಒಂದು ಮಾತಿನಲ್ಲಿ ಹೇಳುವುದಾದರೆ ದ್ವಾರಕಾನಾಥ್ ಅವರು ನಮ್ಮ ಪಾಲಿಗೆ ಅಂಬೇಡ್ಕರ್ ರವರೇ ಕಳಸಿದ ಅವದೂತರಿದ್ದಂತೆ. ಅವರು ಮಾಡಿದ ಕೆಲಸಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅದಕ್ಕೆ ಕೊನೆಮೊದಲಿರಲಾರದು.

ಇಷ್ಟೆಲ್ಲಾ ಹಿನ್ನೆಲೆಯುಳ್ಳ ದ್ವಾರಕಾನಾಥ್ ಸರ್ ಅವರು ಮಾತ್ರ ನಮ್ಮ ಎಲ್ಲಾ ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಕುರಿತ ಪ್ರೀತಿ, ಕಾಳಜಿ, ಅರಿವು ಮತ್ತು ಜ್ಞಾನ ಉಳ್ಳವರು, ಅವರು ಮಾತ್ರ ನಮ್ಮ ಎಲ್ಲಾ 120 ಸಮುದಾಯಗಳನ್ನು ವಿಧಾನಪರಿಷತ್ ನಲ್ಲಿ ಸಮರ್ಥವಾಗಿ ಪ್ರತಿನಿಧಿಸಬಲ್ಲರು. ಈ ಕಾರಣಕ್ಕೆ, ದ್ವಾರಕಾನಾಥ್ ಅವರನ್ನು ನಮ್ಮೆಲ್ಲರ ಪ್ರತಿನಿಧಿಯಾಗಿ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡಬೇಕೆಂದು ಅಖಿಲ ಭಾರತ ಕಾಂಗ್ರೆಸ್ ಅಧಿನಾಯಕರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು, ನಮ್ಮ ಜನಪ್ರಿಯ ಮುಖ್ಯಮಂತ್ರಿ ಗಳಾದ ಶ್ರೀ ಸಿದ್ಧರಾಮಯ್ಯ ನವರನ್ನು ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಅದ್ಯಕ್ಷರು ಹಾಗೂ ಉಪಮುಖ್ಯಮಂತ್ರಿಗಳಾದ ನೇರ ಮತ್ತು ನಿಷ್ಟುರತೆಗೆ ಹೆಸರಾದ ಶ್ರೀ ಶಿವಕುಮಾರ್ ಅವರನ್ನು ಅತ್ಯಂತ ನಮ್ರವಾಗಿ ವಿನಂತಿಸುತ್ತೇವೆ.

ವಿಧಾನಪರಿಷತ್ ನಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮೆಲ್ಲರದ ಧ್ವನಿ ಡಾ.ಸಿ.ಎಸ್.ದ್ವಾರಕಾನಾಥ್ ಸರ್ ಅವರ ಮೂಲಕ ಮೊಳಗುವುದನ್ನು ಕೇಳಿಸಿಕೊಂಡು ಪುಲಕಿತರಾಗಲು ಕಾತುರರಾಗಿ ಕಾಯುತಿದ್ದೇವೆ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ಅಧ್ಯಕ್ಷರಾದ ಬಿ. ಎಲ್. ಹನುಮಂತಪ್ಪ ಮತ್ತು ಪ್ರಧಾನ ಕಾರ್ಯಧರ್ಶಿಗಳಾದ ನಾಗರಾಜ್ ಎಚ್. ಸಿ. ತಿಳಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.