ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವವರ ಮೇಲೆ ಹೊರೆ ಹೊರಿಸುತ್ತಿರುವ ಬಿಬಿಎಂಪಿ: ಎಎಪಿ ಆಕ್ರೋಶ

ಬೆಂಗಳೂರು: ಬಿಬಿಎಂಪಿಯು ಆಸ್ತಿ ತೆರಿಗೆ ಸಂಗ್ರಹ ಹಾಗೂ ಆದಾಯದ ಕ್ರೋಡೀಕರಣದಲ್ಲಿ ನಿರ್ಲಕ್ಷ್ಯ ವಹಿಸುತ್ತಿದೆ. ಪ್ರಾಮಾಣಿಕವಾಗಿ ತೆರಿಗೆ ಕಟ್ಟಿಕೊಂಡು ಬರುತ್ತಿರುವವರ ಮೇಲೆ  ತೆರಿಗೆ ಹೆಚ್ಚಿಸುವ ಮೂಲಕ ಹೊರೆ ಹೊರಿಸುತ್ತಿದೆ ಎಂದು ಆಮ್‌ಆದ್ಮಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಮೋಹನ‌ ದಾಸರಿ ಆರೋಪಿಸಿದರು.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಡಿಎ ಲೌಔಟ್ ಗಳ ಅನೇಕ ಭಾಗಗಳು  ಬಿಬಿಪಿಎಂಗೆ ಇದುವರೆಗೂ ಹಸ್ತಾಂತರಗೊಂಡಿಲ್ಲ. ಅಲ್ಲಿನ‌ ನಿವಾಸಿಗಳು ತೆರಿಗೆ ಕಟ್ಟಲು ಸಿದ್ಧರಿದ್ದಾರೆ. ಒಂದು ಮನೆ ಅಸೆಸ್ ಮಾಡಿ, ಬಿಬಿಎಂಪಿಗೆ ಹಸ್ತಾಂತರಿಸಲು ಅಧಿಕಾರಿಗಳು ಕನಿಷ್ಟ ಎರಡ್ಮೂರು ಲಕ್ಷ ರೂಪಾಯಿ ಲಂಚ ಕೇಳುತ್ತಿದ್ದಾರೆ. ಇದರಿಂದ ಜನರು ಬಿಬಿಎಂಪಿಗೆ ನೇರವಾಗಿ ತೆರಿಗೆ ಕಟ್ಟಲು ಆಗುತ್ತಿಲ್ಲ. ಮೂಲಸೌಲಭ್ಯಕ್ಕಾಗಿ ಪರಿತಪಿಸುವಂತಾಗಿದೆ. ಇಂತಹ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಬೇಕು ಎಂದು ಹೇಳಿದರು.

ಬಿಡಿಎ ನಿರ್ಮಿಸಿರುವ  ಬಹುತೇಕ ಸೈಟ್, ಮನೆ, ಅಪಾರ್ಟ್ಮೆಂಟ್, ಕಾಂಪ್ಲೆಕ್ಸ್ ಗಳು ಬಿಬಿಎಂಪಿಗೆ ತೆರಿಗೆ ಕಟ್ಟುತ್ತಿಲ್ಲ. ಬೆಂಗಳೂರಿನ ದಕ್ಷಿಣ ಭಾಗದ ಅಂಜನಾಪುರ ಭಾಗದಲ್ಲಿ 1ರಿಂದ11 ಬ್ಲಾಕ್ ಗಳು, ಜೆ.ಪಿ.ನಗರದ 9ನೇ ಫೇಸ್, ಬನಶಂಕರಿ 6ನೇ ಸ್ಟೇಜ್ ನ 1ರಿಂದ 10ನೇ ಬ್ಲಾಕ್ ಬಡಾವಣೆಗಳು ಹಾಗೂ ಕೆಂಗೇರಿ ಭಾಗದ ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆ ಗಳಿಂದ ಆಸ್ತಿ ತೆರಿಗೆ ಸಂಗ್ರಹವಾಗುತ್ತಿಲ್ಲ ಎಂದು ದೂರಿದರು.

ಕಂದಾಯ ಇಲಾಖೆಯ ವಿಶೇಷ ಆಯುಕ್ತರು ಈ ಬಗ್ಗೆ ಕ್ರಮ ವಹಿಸುತ್ತಿಲ್ಲ. ಬಿಡಿಎನಿಂದ ಬಿಬಿಎಂಪಿಗೆ ಅಭಿವೃದ್ಧಿ ಹೊಂದಿದ ಬಡಾವಣೆಗಳನ್ನು ಏಕೆ ಹಸ್ತಾಂತರ ಮಾಡುತ್ತಿಲ್ಲ‌?, ಇಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿದೆಯೇ? ಡಿ.ಕೆ.ಶಿವಕುಮಾರ್ ಹಾಗೂ ಬಿಡಿಎ ಅಧ್ಯಕ್ಷರಿಗೆ ಕಮಿಷನ್ ಹೋಗುತ್ತಿದ್ದೆಯೇ?  ಎಂದು‌ ಪ್ರಶ್ನಿಸಿದರು.

ಬಿಬಿಎಂಪಿಗೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೊಳಿಸಿದರೆ ಅಧಿಕ ಆಸ್ತಿ ತೆರಿಗೆ ಬರುತ್ತದೆಯೇ? ಅಂದಾಜು ₹20 ಸಾವಿರ ಕೋಟಿ ಆದಾಯ ಬರುವಂತ ಯೋಜನೆಗಳ ಬಗ್ಗೆ ನಮ್ಮ ಪಕ್ಷ  ಸಂಶೋಧನೆ ಮಾಡುತ್ತಿದೆ. ಬಿಬಿಎಂಪಿಯಲ್ಲಿ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಆಸ್ತಿ ತೆರಿಗೆ ಮತ್ತು ಇನ್ನಿತರ ತೆರಿಗೆಯನ್ನು ಬಿಬಿಎಂಪಿಗಾಗಿ ಸಂಗ್ರಹಿಸಲು ಮುಂದಾಗುತ್ತೇವೆ ಎಂದು ತಿಳಿಸಿದರು.

ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಡಾ.ಸತೀಶ್ ಕುಮಾರ್ ಮಾತನಾಡಿ, ಬಿಬಿಎಂಪಿ ಜೊತೆಗೆ ಬಿಡಿಎ, ಬಿಡಬ್ಲ್ಯುಎಸ್ಎಸ್ ಬಿ ಮುಂತಾದ ಅಂಗ ಸಂಸ್ಥೆಗಳು ಒಗ್ಗೂಡದಿರುವುದು ದುರಂತ. ಸಮನ್ವಯತೆ ಸಾಧಿಸದಿದ್ದರೆ ಅಭಿವೃದ್ಧಿ ಕುಂಠಿತವಾಗಲಿದೆ. ಸರ್ಕಾರ ಈ ಬಗ್ಗೆ ಜಾಣ ವಹಿಸುವುದು ತರವಲ್ಲ. ನಿರ್ಮಾಣ ಕಾರ್ಯ ಅಪೂರ್ಣಗೊಂಡಿರುವ ಕೆಂಪೇಗೌಡ ಬಡಾವಣೆ ಬಗ್ಗೆ ನಗರಾಭಿವೃದ್ಧಿ ಸಚಿವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

₹100 ಕೋಟಿಗೂ ಅಧಿಕ ಆಸ್ತಿ ತೆರಿಗೆ ವಸೂಲಿ ಆಗಬೇಕಿದೆ ಎಂದು ಬಿಬಿಎಂಪಿ ಅಡಿಟ್ ವರದಿ ಹೇಳಿದೆ. ಈ ಬಗ್ಗೆ ಸರ್ಕಾರ ಕ್ರಮವಹಿಸುತ್ತಿಲ್ಲ ಎಂದರು.

City Today News 9341997936

Leave a comment

This site uses Akismet to reduce spam. Learn how your comment data is processed.