ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯಲ್ಲಿರುವ ಸಂಘಟನೆಗಳು ತೆಗೆದುಕೊಂಡ ನಿರ್ಣಯಗಳು

ದಿನಾಂಕ : 19-07-2024ರಂದು ಬೆಳಗ್ಗೆ 11-30ಕ್ಕೆ ಎಲ್ಲಾ ಸಂಯುಕ್ತ ಸಂಘರ್ಷ ಸಮಿತಿಯ ಅಂಗನವಾಡಿ ಸಂಘಟನೆಗಳ ಸಭೆಯನ್ನು ನಡೆಸಲಾಯಿತು. ಈ ಸಭೆಯಲ್ಲಿ ಕರ್ನಾಟಕ ಸರ್ಕಾರ ಶಿಶು ಅಭಿವೃದ್ಧಿ ಯೋಜನೆಯ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಸಮಸ್ಯೆಗಳ ಬಗ್ಗೆ ಸುಧೀರ್ಘವಾಗಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಚರ್ಚೆ ನಡೆಸಿದ ನಂತರ ಎಲ್ಲಾ ಸಂಘಟನೆಗಳು ಸರ್ವಾನುಮತದಿಂದ ಈ ಕೆಳಕಂಡ ನಿರ್ಣಯಗಳನ್ನು ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ.
1) ಸರ್ವೋಚ್ಛ ನ್ಯಾಯಾಲಯ ಅಂಗನವಾಡಿ ಕಾರ್ಯಕರ್ತೆಯರಿಗೆ / ಸಹಾಯಕಿಯರಿಗೆ ನಿವೃತ್ತಿ ಉಪಧನ (ಗ್ರಾಚ್ಯುಟಿ) ಬಗ್ಗೆ ಆದೇಶ ಮಾಡಿರುತ್ತದೆ. ಆ ಆದೇಶದ ಪ್ರಕಾರ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರು/ಸಹಾಯಕಿಯರು 1975 ರಿಂದ ಕೆಲಸ ಮಾಡುತ್ತಿದ್ದು ಕಾಲ ಕಾಲಕ್ಕೆ ನಿವೃತ್ತಿಯಾದ ದಿನಾಂಕಗಳಲ್ಲಿ ಅವರಿಗೆ ಗ್ರಾಚ್ಯುಟಿ (ನಿವೃತ್ತಿ ಉಪಧನ) ಕೊಡುವ ಬಗ್ಗೆ ಸರ್ವೋಚ್ಛ ನ್ಯಾಯಾಲಯ ಏಪ್ರಿಲ್ 25, 2022ರಲ್ಲಿ ಆದೇಶಿಸಿದೆ. ಆದರೆ ಕರ್ನಾಟಕ ಸರ್ಕಾರ 01-04-2023ರಿಂದ ಅನ್ವಯವಾಗುವಂತೆ ಗ್ರಾಚ್ಯುಟಿ (ಉಪಧನ) ಬಗ್ಗೆ ಮಾಡಿರುವ ಆದೇಶವನ್ನು ಕೂಡಲೇ ವಾಪಸ್ ಪಡೆದು ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೆ /ಸಹಾಯಕಿಯರಿಗೆ ಗ್ರಾಚ್ಯುಟಿ (ಉಪಧನ) ನೀಡಬೇಕೆಂದು ಸಭೆಯಲ್ಲಿ ಒತ್ತಾಯಿಸಲಾಯಿತು.
2) ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಶಿಕ್ಷಣ ನೀಡಲು ನಿರ್ಧರಿಸಿದ್ದು ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟಸ್ಸರಿ ಎಂದು ಹೊಸದಾಗಿ 22ನೇ ಜುಲೈ 2024 ರಿಂದ ನಾಮಕರಣ ಮಾಡಲು ಸರಿಯಷ್ಟೇ. ಅಂಗನವಾಡಿ ಕೇಂದ್ರಗಳಲ್ಲಿಯೇ ಎಲ್.ಕೆ.ಜಿ., ಯು.ಕೆ.ಜಿ. ಮಾಡುವುದು ಸ್ವಾಗತನೀಯ. ಆದರೆ ಇದಕ್ಕೆ ಸಂಬಂಧಿಸಿದಂತೆ ಪೂರ್ವಭಾವಿಯಾಗಿ ಅಂಗನವಾಡಿ ಸಂಘಟನೆಗಳು ಕಳೆದ 35 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದು ಆ ಸಂಘಟನೆಗಳ ಅಭಿಪ್ರಾಯವನ್ನು ಪಡೆಯದೇ ಸರ್ಕಾರ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಳ್ಳುತ್ತಿರುವುದನ್ನು ಸಂಯುಕ್ತ ಸಂಘರ್ಷ ಸಮಿತಿಯ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಇದರ ಬಗ್ಗೆ ಎಲ್ಲಾ ಸಂಘಟನೆಗಳ ಮುಕ್ತ ಅಭಿಪ್ರಾಯಗಳನ್ನು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದು ಇಲಾಖೆಯ ಆದ್ಯ ಕರ್ತವ್ಯ. ಇದಕ್ಕೆ ಬದಲಾಗಿ ಅಂಗನವಾಡಿ ಸಂಘಟನೆಗಳನ್ನು ಸದರಿ ವಿಷಯದಲ್ಲಿ ಹೊಡೆದು ಆಳುವ ಇಲಾಖೆಯ ಅಧಿಕಾರಿಗಳ ಮತ್ತು ಸಚಿವರ ಅಭಿಪ್ರಾಯಗಳನ್ನು ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ರಾಜ್ಯದಲ್ಲಿರುವ 61,876 ಅಂಗನವಾಡಿ ಕೇಂದ್ರಗಳಲ್ಲಿ ಎಲ್.ಕೆ.ಜಿ., ಯು.ಕೆ.ಜಿ.ಯನ್ನು ಹಂತ ಹಂತವಾಗಿ ಪ್ರಾರಂಭಿಸುವುದಲ್ಲದೇ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತೆಯರಿಗೆ ತರಭೇತಿ, ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಸಭೆಯಲ್ಲಿ ಎಲ್ಲಾ ಸಂಘಟನೆಗಳ ಅಭಿಪ್ರಾಯ ವ್ಯಕ್ತಪಡಿಸಿವೆ.
3) ಕರ್ನಾಟಕ ರಾಜ್ಯದಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಆಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಸರಿಯಿಲ್ಲದ ಕಾರಣ ಫಲಾನುಭವಿಗಳು ಆ ಪೌಷ್ಠಿಕ ಆಹಾರ ತಿನ್ನುತ್ತಿಲ್ಲ. ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ನಿಯಮಾವಳಿಗಳಲ್ಲಿ ಸ್ಥಳೀಯ ಪೌಷ್ಠಿಕ ಆಹಾರ ನೀಡಲು ನಿಯಮವಿದ್ದರು ಅದನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿ ಗುತ್ತಿಗೆದಾರರಿಗೆ, ಅಧಿಕಾರಿಗಳಿಗೆ ಹಣ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವ ನೀತಿಯನ್ನು ನಮ್ಮ ಎಲ್ಲಾ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ.
4) ಅಂಗನವಾಡಿ ಕಾರ್ಯಕರ್ತೆಯರ/ಸಹಾಯಕಿಯರ ಹಾಗೂ ಫಲಾನುಭವಿಗಳಿಗೆ ಸಂಬಂಧಿಸಿದಂತೆ ಪ್ರಾರಂಭದಿಂದ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಹಾಲಿ ಮಹಿಳಾ ಮತ್ತು ಮಕ್ಕಳ ಸಚಿವೆಯಾದ ಶ್ರೀಮತಿ ಲಕ್ಷ್ಮೀ ಹೆಬ್ಬಾಳ್ಳರ್ ರವರು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವುದನ್ನು ಸಂಯುಕ್ತ ಸಂಘರ್ಷ ಸಮಿತಿ ತೀವ್ರವಾಗಿ ವಿರೋಧಿಸುತ್ತದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆಗಳ ಸಂಯುಕ್ತ ಸಂಘರ್ಷ ಸಮಿತಿ ಬೆಂಗಳೂರು ವತಿಯಿಂದ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಲಾಯಿತು.
City Today News 9341997936
