ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ

ದಿನಾಂಕ:-12/02/1935 ರಂದು ಹನ್ಯಾಳು ಗ್ರಾಮದಲ್ಲಿ ಜನಿಸಿ ತಮ್ಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾಭ್ಯಾಸವನ್ನು ರುದ್ರಪಟ್ಟಣ & ಬಸವಪಟ್ಟಣದಲ್ಲಿ ಮುಗಿಸಿದರು. ಪದವಿ ಪೂರ್ವ ಶಿಕ್ಷಣವನ್ನು ಹಾಸನದಲ್ಲಿ, ಬಿ ಎ ಪದವಿಯನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಹಾಗೂ ಎಲ್ ಎಲ್ ಬಿ ಯನ್ನು ಶಾರದ ವಿಲಾಸ್ ಮೈಸೂರಿನಲ್ಲಿ ಪಡೆದು ವಿದ್ಯಾರ್ಥಿ ಸಂಘದ ಚುನಾವಣೆಗೆ ಪ್ರತಿನಿಧಿಸುವ ಮೂಲಕ ಅಂದಿನ ಕಾಲದಲ್ಲೇ ನಾಯಕತ್ವ ಗುಣಗಳನ್ನು ಬೆಳೆಸಿಕೊಂಡಿದ್ದರು. ನಂತರ 16 ಮೇ 1962 ರಂದು ದೇವರಹಟ್ಟಿ ಅಷ್ಟೇಗೌಡರ ಹಾಗೂ ಮಾಯಮ್ಮ ದಂಪತಿಗಳ ಹಿರಿಯ ಪುತ್ರಿಯಾದ (ಇಂದಿನ ಅರಕಲಗೂಡು ಕ್ಷೇತ್ರದ ಶಾಸಕರಾದ ಶ್ರೀಯುತ ಎ ಮಂಜುರವರ ಅಕ್ಕ) ಕಮಲಮ್ಮರವರ ಜೊತೆ ರಾಮನಾಥಪುರದ ರಾಮೇಶ್ವರ ದೇವಾಲಯದಲ್ಲಿ ವಿವಾಹವಾದರು. ನಂತರ 1962ರ ಅರಕಲಗೂಡು ವಿಧಾನಸಭಾ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದಿಂದ ಸ್ಪರ್ಧಿಸಿ ಕಾಂಗ್ರೆಸ್ನ ಜಿ.ಎ. ತಿಮ್ಮಪ್ಪ ಗೌಡರ ವಿರುದ್ಧ ಸೋತಿದ್ದರು. ನಂತರ 1967ರಲ್ಲಿ ಅರಕಲಗೂಡು ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಸ್ವತಂತ್ರ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರ ವಿರುದ್ಧ ಗೆಲುವು ಸಾಧಿಸಿದರು.

ಆ ಕಾಲದಲ್ಲಿ ಹೇಮಾವತಿ ಡ್ಯಾಮ್ ಕಟ್ಟುವಾಗ ಮುಳುಗಡೆಯಾದ ನಿರಾಶ್ರಿತರಿಗೆ 50 ಎಕರೆ ಜಾಗವನ್ನು ಸರ್ಕಾರದಿಂದ ಮಂಜೂರು ಮಾಡಿಸಿಕೊಟ್ಟು ಹಲವು ಕುಟುಂಬಗಳಿಗೆ ಆಸರೆಯಾಗಿದ್ದರು. ಅನಂತರ 1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಕೆ.ಬಿ. ಮಲ್ಲಪ್ಪನವರನ್ನು ಎರಡನೇ ಬಾರಿಗೆ ಸೋಲಿಸಿದ್ದು, ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ರವರ ಸಂಪುಟ ಸೇರಿ ನೀರಾವರಿ ಸಚಿವರಾಗಿದ್ದು, ಹಾರಂಗಿ ಜಲಾಶಯ ನೀರನ್ನು ಅರಕಲಗೂಡು ತಾಲೂಕಿನ ರೈತರಿಗೆ ಕಾಲುವೆಗಳ ಮುಖಾಂತರ ನೀರು ಹರಿಯುವಂತೆ ಮಾಡಿ ಅರಕಲಗೂಡು ಭಾಗದ ಜನಕ್ಕೆ ನೀರಾವರಿ ಸೌಲಭ್ಯ ಒದಗಿಸಿದ ಭಗೀರಥರಾದರು.

ಅರಕಲಗೂಡು ತಾಲೂಕಿನ ವಿವಿಧ ಹೋಬಳಿಗಳಲ್ಲಿ ಗ್ರಾಮೀಣ ಬ್ಯಾಂಕ್ ಸ್ಥಾಪಿಸಲು ಸಹಕರಿಸಿದರು ಹಾಗೂ ಹೇಮಾವತಿ ಜಲಾಶಯ ಯೋಜನೆ ಜಾರಿಯಾಗಿದ್ದ ಆ ಸಂದರ್ಭದಲ್ಲಿ ಹಿನ್ನೀರಿನ ಸಮರ್ಪಕ ಬಳಕೆಗೆ ಹಲವು ಚೆಕ್ ಡ್ಯಾಮ್ ನಿರ್ಮಿಸಲು ಕಾರಣೀ ಭೂತರಾಗಿದ್ದರು. ನಂತರ 1980 ರಿಂದ 1989 ರವರೆಗೆ ಎರಡು ಬಾರಿಗೆ ಹಾಸನ ಲೋಕಸಭೆಯಿಂದ ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದರು ಆ ಸಂದರ್ಭದಲ್ಲಿ ನೀರಾವರಿ ವಿಷಯಗಳ ಸಂಬಂಧಿಸಿದಂತೆ ಅದರಲ್ಲೂ ಕಾವೇರಿ ಜಲ ವಿವಾದಗಳು ಸಂಭವಿಸಿದಾಗ ಮಾನ್ಯರು ಅಂದಿನ ರಾಜ್ಯದ ಮುಖ್ಯಮಂತ್ರಿಗಳೊಡಗೂಡಿ ಪ್ರಧಾನಮಂತ್ರಿಯವರೊಂದಿಗೆ ಚರ್ಚಿಸಿ ಹಲವು ಬಾರಿ ರಾಜ್ಯಕ್ಕೆ ಬಂದೊದಗುತ್ತಿದ್ದ ಹಲವಾರು ತೊಡಕುಗಳನ್ನು ಬಗೆಹರಿಸಿದ್ದರು.

ಶ್ರೀಯುತ ಚನ್ನಬಸಪ್ಪನವರ ಶಿಷ್ಯರಾಗಿದ್ದ ನಂಜೇಗೌಡರು ರಾಜ್ಯದ ನೀರಾವರಿ ವಿಷಯಗಳ ಬಗ್ಗೆ ಅಗಾಧವಾದ ಜ್ಞಾನಪಡೆದಿದ್ದ ಇವರು ದುರದೃಷ್ಟವಶಾತ್ ಸನ್ಮಾನ್ಯರ ನೇರ ದಿಟ್ಟ ನುಡಿಯೇ ಅವರಿಗೆ ಮುಳುವಾಗಿದ್ದಕ್ಕೆ ಹಲವು ನಿದರ್ಶನಗಳಿವೆ. ಒಮ್ಮೆ 1987ರಲ್ಲಿ ಸಂಸತ್ ಭವನದ ಭಾಷಣದಲ್ಲಿ ಸ್ವಪಕ್ಷೀಯರ ವಿರುದ್ಧ ಬೊಫೋರ್ಸ್ ಹಗರಣದ ಬಗ್ಗೆ ಧ್ವನಿಯೆತ್ತಿ ಸ್ವಪಕೀಯರ ವಿರೋದಕ್ಕೆ ಗುರಿಯಾಗಿದ್ದರು.

ನಂತರ 1994ರಲ್ಲಿ ಬಿಜೆಪಿಯಿಂದ ಬಸವನಗುಡಿಯಲ್ಲಿ ಸ್ಪರ್ಧಿಸಿ ಜಯಶೀಲರಾಗಿದ್ದರು. ಇವರ ಹೆಸರಿನಲ್ಲಿ ಈಗಲೂ ಬಸವನಗುಡಿಯ ಒಂದು ರಸ್ತೆಗೆ ಹೆಸರಿಟ್ಟಿರುವುದು ಅವರ ಸಾಧನೆಯ ಕೈಗನ್ನಡಿಯಾಗಿದೆ. ಹೆಚ್‌ಎನ್ ನಂಜೇಗೌಡರವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಎಸ್ ಎಂ ಕೃಷ್ಣ, ರವರು ಕೆ.ಎಚ್ ಪಟೇಲರು, ಬೊಮ್ಮಾಯಿಯವರು ಹೀಗೆ ಹಲವಾರು ಗಣ್ಯಾತಿ ಗಣ್ಯರೊಡನೆ ನೀರಾವರಿ ವಿಷಯ ಬಂದಾಗ ಸಲಹೆಗಳನ್ನು ನೀಡುತ್ತಿದ್ದರು.

1994ರ ನಂತರ ರಾಜಕೀಯವಾಗಿ ಏಳುಬೀಳುಗಳನ್ನು ಕಂಡರು ಯಾವುದೇ ಪಕ್ಷದ ಯಾರೇ ಅಧಿಕಾರದಲ್ಲಿದ್ದರೂ ಕಾವೇರಿ ವಿವಾದ ತಲೆದೋರಿದಾಗ ಮಾನ್ಯ ನಂಜೇಗೌಡರ ಸಲಹೆ ಪಡೆದೇ ಮುಂದಿನ ರೂಪರೇಷೆ ರಚಿಸುತ್ತಿದ್ದ ಹಲವಾರು ನಿದರ್ಶನಗಳಿವೆ. ಇವರು ದಿನಾಂಕ 19 ಡಿಸೆಂಬರ್ 2008ರಲ್ಲಿ ಇಹಲೋಕ ತ್ಯಜಿಸಿ ಜನಮನದಲ್ಲಿ ಅಜರಾಮರರಾದರು.

ಹಲವಾರು ವರ್ಷಗಳ ನಂತರ ಮಾನ್ಯರ ಬಗ್ಗೆ ಕಾರ್ಯಕ್ರಮವನ್ನು ದಿನಾಂಕ 11.08.2024 ರಂದು ಬೆಂಗಳೂರಿನ ಕುವೆಂಪು ಕಲಾಕ್ಷೇತ್ರ ಒಕ್ಕಲಿಗ ಸಂಘದ ಕ್ಯಾಂಪಸ್ ನಲ್ಲಿ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ಶ್ರೀ ಹೆಚ್ ಎನ್ ನಂಜೇಗೌಡರ ಅಭಿಮಾನಿ ಬಳಗ ಹಾಗೂ ಹನ್ಯಾಳು ಪ್ರಕಾಶನದ ಹೆಚ್.ಎಸ್. ಗೋವಿಂದೇಗೌಡರ ಸಂಪಾದಕತ್ವದ “ಸಂಸ್ಮರಣ ಗ್ರಂಥ” ಬಿಡುಗಡೆ ಕಾರ್ಯಕ್ರಮ ನಡೆಸುತ್ತಿರುವುದು ಹಾಸನ ಭಾಗದ ಜನತೆಗೆ ಒಂದು ಸಂತೋಷದ ಸಂಗತಿ ಎಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೆಚ್.ಎನ್. ನಂಜೇಗೌಡರ ಅಭಿಮಾನಿ ವೃಂದ ದ ವತಿಯಿಂದ ತಿಳಿಸಲಾಯಿತು.

City Today News 9341997936

Leave a comment

This site uses Akismet to reduce spam. Learn how your comment data is processed.