ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ಒಳಮೀಸಲಾತಿ ಕುರಿತು ಬಿಎಸ್‌ಪಿ ರಾಷ್ಟ್ರೀಯ ಅಧ್ಯಕ್ಷರ ವಿರೋಧ ಕರ್ನಾಟಕ ಬಿಎಸ್‌ಪಿ ರಾಜ್ಯ ನಾಯಕರುಗಳು ಪಕ್ಷವನ್ನು ತೊರೆಯುವ ನಿರ್ಧಾರ.

ಬಹುಜನ ಸಮಾಜ ಪಕ್ಷದ ಸರ್ವೋಚ್ಛ ನಾಯಕಿ ಬೆಹನ್ ಕುಮಾರಿ ಮಾಯಾವತಿಜೀಯವರು ಪರಿಶಿಷ್ಟ ಜಾತಿಯ ಮೀಸಲಾತಿಯಲ್ಲಿ ವರ್ಗಿಕರಣ (ಒಳಮೀಸಲಾತಿ) ವ್ಯವಸ್ಥೆಗೆ ಸಂಬಂಧಿಸಿದಂತೆ ಆಗಸ್ಟ್ 1. 2024ರ ಮಾನ್ಯ ಸುಪ್ರಿಂಕೋರ್ಟ್ ನೀಡಿರುವ ತೀರ್ಪನ್ನು ಬಲವಾಗಿ ವಿರೋಧಿಸಿದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೀಸಲಾತಿಯಲ್ಲಿ ಮಧ್ಯಪ್ರವೇಶಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರ, ಮೀಸಲಾತಿಯನ್ನು ಒಂದು ಪೀಳಿಗೆಗೆ ಮಾತ್ರ ನಿಯಂತ್ರಿಸುವುದು ಮತ್ತು ಕೆನೆಪದರ ವಿಷಯಗಳನ್ನು ವಿರೋಧಿಸಿರುವ ರಾಷ್ಟ್ರೀಯ ಅಧ್ಯಕ್ಷರ ನಿಲುವನ್ನು ನಾವು ಸಂಪೂರ್ಣವಾಗಿ ಅನುಮೋದಿಸುತ್ತೇವೆ. ಆದರೆ ಒಳಮೀಸಲಾತಿ ವಿರೋಧಿಸುವ ರಾಷ್ಟ್ರೀಯ ಅಧ್ಯಕ್ಷರ ತೀರ್ಮಾನದ ಬಗ್ಗೆ ಕರ್ನಾಟಕ ಬಿಎಸ್‌ಪಿ ನಾಯಕರಾದ ನಾವು ಭಿನ್ನಾಭಿಪ್ರಾಯವನ್ನು ಹೊಂದಿದ್ದೇವೆ. ಏಕೆಂದರೆ ಕಳೆದ 30 ವರ್ಷಗಳಿಂದ ಒಳಮೀಸಲಾತಿ ಆಂದೋಲನವನ್ನು ನಾವು. ಬಿಎಸ್‌ಪಿ ನಾಯಕರು ಮತ್ತು ಕಾರ್ಯಕರ್ತರು, ಬೆಂಬಲಿಸುತ್ತಾ ಬಂದಿದ್ದಾರೆ.

ಕರ್ನಾಟಕದ ಸ್ಥಿತಿಯ ಬಗ್ಗೆ ರಾಷ್ಟ್ರೀಯ ಅಧ್ಯಕ್ಷರೊಂದಿಗೆ ಮಾತನಾಡಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ಉಸ್ತುವಾರಿಗಳಾದ ಡಾ. ಅಶೋಕ್ ಸಿದ್ಧಾರ್ಥ್ ಅವರ ಮೂಲಕ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಒಂದು ಮನವಿಯನ್ನು ಸಲ್ಲಿಸಿದೆವು. ಅಲ್ಲದೆ ದಿನಾಂಕ: 09.08.2024 ರಂದು, ಅವರೊಂದಿಗೆ ಫೋನ್ ಮೂಲಕ ನಮ್ಮ ಅಹವಾಲನ್ನು ಹೇಳಿಕೊಂಡೆವು. ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯವನ್ನು ನೀಡಿ ಮೀಸಲಾತಿಯಲ್ಲಿ ಒಳಮೀಸಲಾತಿ ಒದಗಿಸುವಂತೆ ನ್ಯಾ. ಸದಾಶಿವ ಆಯೋಗವು ಮಾಡಿರುವ ಶಿಫಾರಸ್ಸುಗಳು ಬಾಬಾಸಾಹೇಬ್ ಡಾ. ಅಂಬೇಡ್ಕ‌ರವರ ಸಾಮಾಜಿಕ ನ್ಯಾಯದ ಸಿದ್ಧಾಂತ ಮತ್ತು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಲಾದ ತತ್ವಗಳ ಪ್ರಕಾರವಾಗಿದೆ. ನಮ್ಮ ಮನವಿಯನ್ನು ಆಲಿಸಿದ ರಾಷ್ಟ್ರೀಯ ಅಧ್ಯಕ್ಷರಾದ ಅಕ್ಕ ಮಾಯಾವತಿಯವರು ಆಗಸ್ಟ್ 27, 2024 ರಂದು ಮಧ್ಯಾಹ್ನ 3 ಗಂಟೆಗೆ ಲಕ್ಕೋದಲ್ಲಿ ರಾಷ್ಟ್ರೀಯ ಅಧ್ಯಕ್ಷರ ಚುನಾವಣಿ ಮುಗಿದ ಕೂಡಲೇ ಈ ವಿಷಯವನ್ನು ಚರ್ಚಿಸಲು ನಮಗೆ ಸಮಯ ನಿಗಧಿ ಮಾಡಿದ್ದರು.

ಆದರೆ ಅಂದು ನಮಗೆ ಸಂಪೂರ್ಣ ನಿರಾಶೆ ಮತ್ತು ಆಶ್ಚರ್ಯ ಕಾದಿತ್ತು. ರಾಷ್ಟ್ರೀಯ ಅಧ್ಯಕ್ಷರ ಆಹ್ವಾನದ ಮೇರೆಗೆ ಹಿರಿಯ ರಾಜ್ಯ ಪದಾಧಿಕಾರಿಗಳ ನಿಯೋಗವು ದಿನಾಂಕ: 27.08.2024 ರಂದು, ಅವರನ್ನು ನೇರವಾಗಿ ಭೇಟಿಯಾಗಿ ನಮ್ಮ ಮನವಿಯನ್ನು ಸಲ್ಲಿಸಲು ನಮಗೆ ಅವಕಾಶವನ್ನೇ ಮಾಡಿಕೊಡಲಿಲ್ಲ. ನಮ್ಮಂತೆಯೇ ಆಂಧ್ರಪ್ರದೇಶ ಮತ್ತು ತೆಲಂಗಾಣ ನಾಯಕರೂ ಸಹ ತಮ್ಮ ಮನವಿಯನ್ನು ಸಲ್ಲಿಸಲಾಗದೆ ಸಾಕಷ್ಟು ಅವಮಾನ ಅನುಭವಿಸಿದರು.

ಕಳೆದ ಹಲವಾರು ವರ್ಷಗಳಿಂದ ನಮ್ಮ ಅನುಭವದ ಹಿನ್ನಲೆಯಲ್ಲಿ ನಮಗೆ ಮನವರಿಕೆ ಆಗಿರುವುದೇನೆಂದರೆ, ನಮ್ಮ ಬಹುಜನ ಸಮಾಜ ಪಾರ್ಟಿಯು ಬಾಬಾಸಾಹೇಬ್ ಅಂಬೇಡ್ಕರ್ ಮತ್ತು ಮಾನ್ಯವಾರ್ ಕಾಶ್ಮೀರಾಮ್ ಜೀಯವರ ಸಿದ್ಧಾಂತದಿಂದ ಸಂಪೂರ್ಣವಾಗಿ ದೂರಸರಿದಿದೆ. ಅಲ್ಲದೆ ಪಕ್ಷವು ತನ್ನ ಪ್ರಜಾಸತ್ತಾತ್ಮಕ ಸ್ವರೂಪವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಆದ್ದರಿಂದಲೇ, ಬಹುಜನ ಸಮಾಜದಲ್ಲಿರುವ ಅತ್ಯಂತ ನಿಕೃಷ್ಟ ಸಮುದಾಯಗಳ ಅಳಲು ಇಂದು ಅರಣ್ಯರೋಧನೆಯಾಗಿದೆ. ಇಂತಹ ಹತಾಶ ಪರಿಸ್ಥಿತಿಯಲ್ಲಿ ನಾವು ಕರ್ನಾಟಕ ರಾಜ್ಯ ಸಮಿತಿಯ ಪದಾಧಿಕಾರಿಗಳು ಭಾರವಾದ ಹೃದಯದಿಂದ ಮತ್ತು ದುಖಃದಿಂದ ಬಹುಜನ ಸಮಾಜ ಪಕ್ಷವನ್ನು ತಕ್ಷಣದಿಂದ ತೊರೆಯಲು ನಿರ್ಧರಿಸಿದ್ದೇವೆ. ಆದಾಗ್ಯೂ ಮಹಾತ್ಮ ಪುಲೆ, ಶಾಹು ಮಹಾರಾಜ್, ನಾಲ್ವಡಿ ಕೃಷ್ಣರಾಜ ಒಡೆಯರ್, ಪೆರಿಯಾರ್, ನಾರಾಯಣಗುರು, ಬಾಬಾಸಾಹೇಬ್ ಅಂಬೇಡ್ಕ‌ರ್ ಮತ್ತು ಮಾನ್ಯವಾರ್ ಕಾಶ್ಮೀರಾಮ್‌ಜೀಯವರ ಆದರ್ಶಗಳ ಮೇಲೆ ಬಹುಜನ ಚಳುವಳಿಯನ್ನು ಮುಂದುವರಿಸಲು ನಾವು ಧೃಡಸಂಕಲ್ಪ ಮಾಡಿದ್ದೇವೆ ಮತ್ತು ಬಾಬಾಸಾಹೇಬ್ ಅಂಬೇಡ್ಕ‌ರವರ ಕಾರವಾನನ್ನು ಒಂದು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಘನಕಾರ್ಯವನ್ನು ಎಂದಿನಂತೆ ಮುಂದುವರಿಸಲು 6 ತಣ ಬದ್ಧರಾಗಿರುತ್ತೇವೆ ಎಂದು ಮಾರಸಂದ್ರ ಮುನಿಯಪ್ಪ- ರಾಜ್ಯಾಧ್ಯಕ್ಷರು,ಗೋಪಿನಾಥ್ ರಾಜ್ಯ-ಸಂಯೋಜಕರು,ಆ‌ರ್. ಮುನಿಯಪ್ಪ-ರಾಜ್ಯ ಪ್ರಧಾನ ಕಾರ್ಯಧರ್ಶಿ, ಕೆ.ಬಿ.ವಾಸು-ರಾಜ್ಯ ಪ್ರಧಾನ ಕಾರ್ಯಧರ್ಶಿ, ಎಂ. ಗುರುಮೂರ್ತಿ-ರಾಜ್ಯ ಕಾರ್ಯಧರ್ಶಿ ಹಾಗೂ ಜಿ.ಎನ್. ವಿಷ್ಣು-ರಾಜ್ಯ ಖಜಾಂಚಿ ಜಂಟಿಯಾಗಿ ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪ್ರಕಟಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.