
ನಾಳೆ ಬೆಂಗಳೂರಿನ ಗಾಂಧಿ ಭವನದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಪ್ರಾತಿನಿಧ್ಯ ಸಮಾವೇಶ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಗರ್ ಹುಕುಂ ರೈತರು, ಸರ್ಕಾರಿ ಜಾಗಗಳಲ್ಲಿ ಮನೆ ಕಟ್ಟಿಕೊಂಡ ಮನೆಗಳು ಸಕ್ರಮಗೊಳ್ಳದೆ ಸಂಕಷ್ಟದಲ್ಲಿರುವ ಬಡಜನರು, ಸರ್ಕಾರದ ಭೂಸ್ವಾಧೀನದಿಂದ ಸಂತ್ರಸ್ತಗೊಂಡಿರುವ ಜನರು ಹಾಗೂ ಈಗ ಮಲೆನಾಡಿನಲ್ಲಿ ಗೂಡು ಕಟ್ಟಿಕೊಳ್ಳಲೂ ತುಂಡು ಜಾಗವಿಲ್ಲದೆ ಪರದಾಡುತ್ತಿರುವ ಬಡಜನರು ಈ ಸಮಾವೇಶದಲ್ಲಿ ಭಾಗವಹಿಸುತ್ತಿದ್ದಾರೆ.
ಸಮಾವೇಶವನ್ನು ಉದ್ಘಾಟಿಸಲು ಗುಜರಾತಿನ ಪ್ರಖರ ವಾಗ್ನಿ, ಹೋರಾಟಗಾರ ಹಾಗೂ ಶಾಸಕರಾದ ಜಿಗೇಶ್ ಮೇವಾನಿ ಅವರು ಆಗಮಿಸುತ್ತಿದ್ದಾರೆ. ಬಡಜನರ ಸಂಕಷ್ಟಗಳನ್ನು ಆಲಿಸಲು ಕಂದಾಯ ಸಚಿವ ಕೃಷ್ಣ ಭೈರೇ ಗೌಡರು ಭಾಗವಹಿಸುತ್ತಿದ್ದಾರೆ. ದಲಿತ ಚಳವಳಿಯ ಹಿರಿಯ ಮುಖಂಡರಾದ ಎನ್. ವೆಂಕಟೇಶ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾವೇಶದಲ್ಲಿ ನೂರ್ ಶ್ರೀಧರ್, ಡಾ. ವಿಜಯ, ವಿ. ನಾಗರಾಜ್, ಸಿರಿಮನೆ ನಾಗರಾಜ್, ರವೀಂದ್ರ ನಾಯ್ಕ, ಡಿ.ಹೆಚ್. ಪೂಜಾರ್, ವೀರಸಂಗಯ್ಯ ಮುಂತಾದ ಮುಖಂಡರು ಭಾಗವಹಿಸುತ್ತಿದ್ದಾರೆ.

ಸಮಾವೇಶದಲ್ಲಿ ವಿವಿಧ ರೂಪದ ಭೂಮಿ ಸಮಸ್ಯೆಗಳ ಕುರಿತು, ಜನರು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಹಾಗೂ ಇದನ್ನು ಬಗೆಹರಿಸಲು ತೆಗೆದುಕೊಳ್ಳಬೇಕಿರುವ ಕ್ರಮಗಳ ಕುರಿತು ಚರ್ಚೆ ನಡೆಯಲಿದೆ. ಭೂ ಮಂಜೂರಾತಿಯನ್ನು ಯುದ್ದೋಪಾದಿಯಲ್ಲಿ ಪೂರ್ಣಗೊಳಿಸಬೇಕು. ಈ ಉದ್ದೇಶಕ್ಕಾಗಿ ಈ ಹಿಂದೆ ರಚಿಸಲಾಗಿ ಈಗ ನಿಷ್ಕ್ರಿಯಗೊಂಡಿರುವ ‘ಉನ್ನತ ಮಟ್ಟದ ಸಮಿತಿ’ಯನ್ನು ಪುನರ್ಚಾಲನೆಗೊಳಿಸಬೇಕು. ಕಾಗದ ಪತ್ರಗಳ ಜಂಜಾಟದಲ್ಲಿ ಸಿಲುಕಿಸದೆ ನಿಜವಾಗಿಯೂ ಉಳುಮೆ ಮಾಡುತ್ತಿರುವ ಹಾಗೂ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿರುವ ಬಡಜನರಿಗೆ ‘ಬನ್ ಟೈಂ ಸೆಟಲೈಂಟ್’ ಆಧಾರದಲ್ಲಿ ಭೂಮಿ/ಜಾಗಗಳನ್ನು ಮಂಜೂರು ಮಾಡಬೇಕು. ಬಲವಂತದ ಭೂ ಸ್ವಾಧೀನ ಮಾಡಬಾರದು. ಒತ್ತುವರಿ ತೆರವಿನ ಹೆಸರಿನಲ್ಲಿ ನೆಲವ ನಂಬಿ ಬದುಕುತ್ತಿರುವವರ ಬದುಕನ್ನು ನಾಶ ಮಾಡಬಾರದು…. ಇನ್ನು ಮುಂತಾದ ಆಗ್ರಹಗಳನ್ನು ಸರ್ಕಾರದ ಮುಂದೆ ಇಡಲಾಗುತ್ತಿದೆ. ಸರ್ಕಾರ
ಭೂಮಿ ವಸತಿ ಹೋರಾಟ ಸಮಿತಿಯು ಸ್ವಾತಂತ್ರ್ಯ ಸೇನಾನಿ ದಿವಂಗತ ಹೆಚ್. ಎಸ್. ದೊರೆಸ್ವಾಮಿಯವರ ನೇತೃತ್ವದಲ್ಲಿ 2016ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು. 2016 ರಿಂದ 2018ರ ನಡುವೆ ಪ್ರಸಿದ್ದ ದಿಡ್ಡಳ್ಳಿ ಹೋರಾಟವನ್ನೂ ಒಳಗೊಂಡಂತೆ ಹಲವು ಸುತ್ತಿನ ಗಮನ ಸೆಳೆಯುವ ಹೋರಾಟಗಳನ್ನು ಸಂಘಟಿಸಿತ್ತು. ಪರಿಣಾಮವಾಗಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸಂಬಂಧಿತ ಎಲ್ಲಾ ಸಚಿವರು ಹಾಗೂ ಅಧಿಕಾರಗಳ ಸಮ್ಮುಖದಲ್ಲಿ ಉನ್ನತ ಮಟ್ಟದ ಸಭೆ ನಡೆದು ಹಲವು ಜನಪರ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಫಾರಂ ನಂ 57ರಡಿ ಭೂ ಮಂಜೂರಾತಿಗಾಗಿ ಮತ್ತೆ ಅರ್ಜಿ ಸಲ್ಲಿಸುವ ಅವಕಾಶ ಸಿಕ್ಕಿದ್ದೂ ಈ ಸಭೆಯಿಂದಾಗಿಯೇ. ಆದರೆ 2018ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಹಿನ್ನೆಡೆಯಾಗಿ, ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಡೀ ಪ್ರಕ್ರಿಯೆ ಸ್ಥಬ್ದಗೊಂಡಿತ್ತು. ಹಾಗಾಗಿಯೇ ಕಳೆದ ಚುನಾವಣೆಯಲ್ಲಿ ಭೂಮಿ ವಸತಿ ಹೋರಾಟ ಸಮಿತಿಯು ಬಿಜೆಪಿಯನ್ನು ತಿರಸ್ಕರಿಸಲು ಕರೆ ನೀಡಿ ರಾಜ್ಯವ್ಯಾಪಿ ಪ್ರಚಾರ ನಡೆಸಿತ್ತು.
ವಿಷಾದದ ವಿಚಾರವೆಂದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದ ನಂತರವೂ ಬಡಜನರ ಪರವಾದ ಯಾವ ಕೆಲಸಗಳೂ ಮುಂದೆ ಹೋಗುತ್ತಿಲ್ಲ. ಬದಲಿಗೆ ಬಿಜೆಪಿ ತಂದ ಭೂ ತಿದ್ದುಪಡಿಗಳನ್ನು, ಭೂ ಸ್ವಾಧೀನ ಕ್ರಮಗಳನ್ನು, ಕಂಪನಿಗಳಿಗೆ ಭೂಮಿ ನೀಡುವ ತೀರ್ಮಾನಗಳನ್ನು ತಾನೂ ಮುಂದುವರೆಸುತ್ತಿದೆ. ಈ ಎಲ್ಲಾ ವಿಚಾರಗಳ ಸುತ್ತ ಸರ್ಕಾರದ ನಡೆಯನ್ನು ಪ್ರಶ್ನಿಸಿ ಚರ್ಚೆಗಳು ನಡೆಯಲಿವೆ.
ಬಡವರ ಪರ ಕಾಳಜಿ ಹೊಂದಿರುವ, ಪ್ರಾಮಾಣಿಕ ನಡತೆಗೆ ಹೆಸರಾಗಿರುವ ಕೃಷ್ಣ ಭೈರೇಗೌಡರು ಕಂದಾಯ ಸಚಿವರಾಗಿರುವುದರಿಂದ ಅವರ ಮುಂದೆಯೂ ಒಮ್ಮೆ ಈ ಸಮಸ್ಯೆಗಳನ್ನು ಬಿಚ್ಚಿಡಬೇಕು. ಈ ಜಟಿಲ ಸಮಸ್ಯೆಗಳಿಗೆ ಪರಿಹಾರ ಮಾರ್ಗಗಳನ್ನು ಪ್ರಸ್ತಾಪಿಸಬೇಕು ಎಂಬ ಉದ್ದೇಶದಿಂದ ಈ ಸಮಾವೇಶ ಏರ್ಪಡಿಸಲಾಗಿದೆ. ಇದೊಂದು ರೀತಿಯಲ್ಲಿ ಅನುಸಂಧಾನದ ಸಮಾವೇಶವೇ ಆಗಿದೆ. ಸರ್ಕಾರ ಮತ್ತೆಯೂ ಬಡಜನರ ನ್ಯಾಯಸಮ್ಮತ ಬೇಡಿಕೆಗಳಿಗೆ ಬೆಲೆ ನೀಡದಿದ್ದರೆ ಈ ಸರ್ಕಾರದ ವಿರುದ್ಧ ಪ್ರಬಲ ಹೋರಾಟಕ್ಕೆ ಮರು ಚಾಲನೆ ನೀಡಲು ನಿರ್ಣಯತೆಗೆದುಕೊಳ್ಳುವ ಸಾಧ್ಯತೆಗಳು ಇವೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಪರವಾಗಿ ಮುಖಂಡರುಗಳಾದ ಸಿರಿಮನೆ ನಾಗರಾಜ್,ಕೆಜೆಎಸ್ ಮರಿಯಪ್ಪ,ಕುಮಾರ್ ಸಮತಳ, ವೀರಸಂಗಯ್ಯ ಹಾಗೂ ನಾಗೇಶ್ವರರಾವ್ ಬಾಬು ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿ ಯಲ್ಲಿ ತಿಳಿಸಿದರು.
City Today News 9341997936
