
ಬೆಂಗಳೂರು: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘವು ಪ್ರಕಟಿಸಿದಂತೆ, ಬೆಂಗಳೂರಿನ ಪ್ರತಿಷ್ಠಿತ ವಕೀಲರ ಸಂಘದಲ್ಲಿ ಎಸ್.ಸಿ./ಎಸ್.ಟಿ. ಹಾಗೂ ಮಹಿಳಾ ವಕೀಲರಿಗೆ ಸೂಕ್ತ ಮೀಸಲಾತಿ ನೀಡಬೇಕು ಎಂಬ ಆಗ್ರಹವನ್ನು ಮುನ್ನಿರಿಸಲಾಗಿದೆ. ಈ ಸಂಬಂಧ ಸಂಘದ ಪದಾಧಿಕಾರಿಗಳು ನಗರದ ಪತ್ರಿಕಾ ಗೋಷ್ಠಿಯಲ್ಲಿ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬೆಂಗಳೂರು ವಕೀಲರ ಸಂಘವು ದೇಶದ ಅತಿದೊಡ್ಡ ವಕೀಲರ ಸಂಘಗಳಲ್ಲಿ ಒಂದಾಗಿದ್ದು, ಸುಮಾರು 25,000 ವಕೀಲರ ಸದಸ್ಯತ್ವ ಹೊಂದಿದೆ. ಸಂಘವು ಸರ್ಕಾರದಿಂದ ವಿವಿಧ ಹಣಕಾಸು ಅನುದಾನಗಳನ್ನು ಪಡೆಯುತ್ತಾ ಬರುತ್ತಿದ್ದು, ಸಂಘದ 2025-2028 ಸಾಲಿನ ಚುನಾವಣೆಯು ಫೆಬ್ರವರಿ 16, 2025 ರಂದು ನಡೆಯಲಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಮುನಿಯಪ್ಪ ಅವರು, “ಸಂಘದಲ್ಲಿ ಸುಮಾರು 7000-8000 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಕೀಲರು ಇದ್ದರೂ, ಅವರಿಗಾಗಿ ಯಾವುದೇ ಮೀಸಲಾತಿ ವ್ಯವಸ್ಥೆ ಕಲ್ಪಿಸಿಲ್ಲ. ಇದು ಅತ್ಯಂತ ವಿಷಾದನೀಯ” ಎಂದು ತಿಳಿಸಿದ್ದಾರೆ.
ಅವರು ಮುಂದುವರೆದು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಕಲ್ಪಿಸುವ ಕುರಿತಾಗಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಕೀಲರ ಸಂಘವು ಡಬ್ಲ್ಯೂಪಿ ನಂ. 3071/2025 ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಅದರ ಆಧಾರದಲ್ಲಿ ನ್ಯಾಯಾಲಯವು ಎಸ್.ಸಿ./ಎಸ್.ಟಿ. ವಕೀಲರಿಗೆ ಸಂಘದಲ್ಲಿ ಮೀಸಲಾತಿ ಕಲ್ಪಿಸುವಂತೆ ಸೂಚನೆ ನೀಡಿದೆ ಎಂದು ಹೇಳಿದರು.
ಇದೇ ವೇಳೆ ಮಹಿಳಾ ವಕೀಲರಿಗೆ 30% ಮೀಸಲಾತಿ ನೀಡುವಂತೆ ಸರ್ವೋಚ್ಚ ನ್ಯಾಯಾಲಯವು ಎಸ್.ಎಲ್.ಪಿ(ಸಿ)1404/2025 ಪ್ರಕರಣದಲ್ಲಿ ನಿರ್ದೇಶನ ನೀಡಿದ ತೀರ್ಪನ್ನು ಉಲ್ಲೇಖಿಸಿದರು.
ಸಂಘದ ಅಧ್ಯಕ್ಷರಾದ ಎಂ. ಮುನಿಯಪ್ಪ, ಖಜಾಂಚಿ ಟಿ.ಎಲ್. ನಾಗರಾಜ್, ಮುಖಂಡರುಗಳಾದ ಗೋಪಾಲ್,ಮಂಜುಳಾ, ಕೃಷ್ಣಪ್ಪ , ಮತ್ತು ರಘು ಉಪಸ್ಥಿತರಿದ್ದು, “2025-2028 ನೇ ಸಾಲಿನ ಚುನಾವಣೆಗಳಲ್ಲಿ ಎಸ್.ಸಿ./ಎಸ್.ಟಿ. ವಕೀಲರಿಗೆ ನ್ಯಾಯಸಮ್ಮತ ಮೀಸಲಾತಿ ಕಲ್ಪಿಸದಿದ್ದರೆ, ವಿಸ್ತೃತ ಹೋರಾಟಕ್ಕೆ ಮುಂದಾಗಲಾಗುವುದು” ಎಂದು ಎಚ್ಚರಿಕೆ ನೀಡಿದರು.
City Today News 9341997936
