ಅಸ್ಪೃಶ್ಯತೆ ವಿರುದ್ಧ ಹೋರಾಟ: ಅರಿವು ಭಾರತ ದಶಮಾನೋತ್ಸವ ಸಮಾರಂಭ ಫೆಬ್ರವರಿ 15ರಂದು



ಬೆಂಗಳೂರು , ಫೆಬ್ರವರಿ 12: ದಲಿತರಿಗೆ ಗೃಹಪ್ರವೇಶ, ದೇವಾಲಯ ಪ್ರವೇಶ ಹಾಗೂ ಅಸ್ಪೃಶ್ಯತೆ ಮುಕ್ತ ಸಮಾಜ ನಿರ್ಮಾಣದ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ಅರಿವು ಭಾರತ ಸಂಸ್ಥೆಯು ದಶಮಾನೋತ್ಸವಕ್ಕೆ ಕಾಲಿಟ್ಟಿದ್ದು, ಫೆಬ್ರವರಿ 15ರಂದು ಕೋಲಾರದ ಟಿ. ಚನ್ನಯ್ಯ ರಂಗ ಮಂದಿರದಲ್ಲಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ ದಾಸ್ ಉದ್ಘಾಟನೆ ಮಾಡಲಿದ್ದಾರೆ. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ “ಒಳ-ಹೊರಗು” ಪುಸ್ತಕ ಬಿಡುಗಡೆ ಮಾಡಲಿದ್ದು, ಸಮಾಜ ಕಲ್ಯಾಣ ಸಚಿವ ಹೆಚ್.ಸಿ. ಮಹದೇವಪ್ಪ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದಾರೆ. ಕೋಲಾರದ ಶಾಸಕರಾದ ಕೊತ್ತೂರು ಜಿ. ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದು, ಸಾರ್ವಜನಿಕ ಶಿಕ್ಷಣ ಆಯುಕ್ತ ಡಾ. ತ್ರಿಲೋಕಚಂದ್ರ ಅರಿವು ಅಭಿಯಾನ ಕುರಿತಾಗಿ ಮಾತನಾಡಲಿದ್ದಾರೆ. ಪತ್ರಕರ್ತ ಕೆ. ನರಸಿಂಹ ಮೂರ್ತಿ ಪುಸ್ತಕ ಕುರಿತು ವೀಕ್ಷಣೆ ನೀಡಲಿದ್ದಾರೆ.

ಅಸ್ಪೃಶ್ಯತೆ ವಿರುದ್ಧ ಹೋರಾಟದ ಹತ್ತು ವರ್ಷ

2014ರಲ್ಲಿ ಡಾ. ಶಿವಪ್ಪ ಅರಿವು ಅವರ ಮನೆಯಿಂದ ಪ್ರಾರಂಭವಾದ ದಲಿತ ಗೃಹಪ್ರವೇಶ ಕಾರ್ಯಕ್ರಮ ಈಗ ಕರ್ನಾಟಕದ ಹಲವೆಡೆ ಹಾಗೂ ಆಂಧ್ರಪ್ರದೇಶ, ತಮಿಳುನಾಡುಗಳಲ್ಲಿಯೂ ನಡೆಯುತ್ತಿದೆ. ಅಸ್ಪೃಶ್ಯತೆ ಮುಕ್ತ ಭಾರತಕ್ಕಾಗಿ “ಅಸ್ಪೃಶ್ಯತೆ ಮುಕ್ತ ಮನೆ”, “ಸಹಭೋಜನ”, “ಒಂದು ಊರು, ಒಂದು ನೀರು” ಅಭಿಯಾನಗಳು ಮುಂದುವರೆದಿವೆ. ದೇವಾಲಯ ಪ್ರವೇಶ ಹಕ್ಕಿಗಾಗಿ ಸರ್ಕಾರದ ಮೇಲೆ ಒತ್ತಡ ಹೇರುವ ಅರಿವು ಭಾರತ ಶ್ರಮದಿಂದ ಮುಜರಾಯಿ ದೇವಾಲಯಗಳಲ್ಲಿ “ಎಲ್ಲರಿಗೂ ಪ್ರವೇಶ” ಎಂಬ ಫಲಕ ಅಳವಡಿಸಲು ಸರ್ಕಾರ ನಿರ್ಧರಿಸಿದೆ.

ಸಮಾಜ ಪರಿವರ್ತನೆಯ ಶಕ್ತಿಯಾಗಿದೆ – ಅರಿವು ಭಾರತ

ಅಸ್ಪೃಶ್ಯತೆ ನಿರ್ಮೂಲನೆಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ “ಪ್ರತಿಜ್ಞಾವಿಧಿ” ಬೋಧನೆ, ವಿವಾಹದಿಂದ ಬಯಲಿಗೆ ಬಿದ್ದ ಮಹಿಳೆಯರಿಗೆ ಮರುಮದುವೆ ವೇದಿಕೆ ಎಂಬ ಮಹತ್ವದ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ದಶಮಾನೋತ್ಸವ ಕಾರ್ಯಕ್ರಮದಲ್ಲಿ ಮಂತ್ರಿಗಳು, ಸಂಸದರು, ಶಾಸಕರು, ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಲಿದ್ದಾರೆ.

“ಎದೆಗೆ ಬಿದ್ದ ಅಕ್ಷರ, ನೆಲಕ್ಕೆ ಬಿದ್ದ ಬೀಜ ಎಂದಿಗೂ ನಿಷ್ಪಲವಾಗುವುದಿಲ್ಲ” ಎಂಬ ದೇವನೂರು ಮಹದೇವ ಅವರ ಮಾತನ್ನು ಸ್ಮರಿಸಿಕೊಂಡು, ಅಸ್ಪೃಶ್ಯತೆ ಮುಕ್ತ ಭಾರತ ನಿರ್ಮಾಣವೆಂಬ ತಮ್ಮ ಕನಸು ಈಡೇರಿಸಲು ಅರಿವು ಭಾರತ ಹೋರಾಟ ಮುಂದುವರಿಸುತ್ತಿದೆ.

ಪ್ರೆಸ್ ಕ್ಲಬ್ ಆಫ್ ಬೆಂಗಳೂರ್ ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಡಾ.ಶಿವಪ್ಪ ಆರಿವು, ಎಚ್‌.ಕೆ.ವಿವೇಕಾನಂದ, ಡಾ.ರುದ್ರೇಶ್ ಆದರಂಗಿ, ಆನಂತ್ ನಾಯಕ್‌, ಟಿ.ವಿಜಯಕುಮಾ‌ರ್, ಪಂಡಿತ್ ಮುನಿವೆಂಕಟಪ್ಪ, ಅಬ್ಬಣಿ ಶಿವಪ್ಪ, ಕೆ.ಆನಂದ್ ಕುಮಾರ್ ಹಾಜರಿದ್ದರು

City Today News 9341997936

Leave a comment

This site uses Akismet to reduce spam. Learn how your comment data is processed.