
ಬೆಂಗಳೂರು: ರಾಜ್ಯದಲ್ಲಿ 30 ವರ್ಷಗಳಿಂದ ನಡೆಯುತ್ತಿರುವ ಒಳ ಮೀಸಲಾತಿ ಹೋರಾಟಕ್ಕೆ ತೀವ್ರತೆಯುಂಟಾಗಿದ್ದು, ಸರ್ಕಾರದ ಮೌನ ಭಂಗ ಮಾಡಬೇಕೆಂದು ಮಾದಿಗ ಸಮುದಾಯದ ಮುಖಂಡರು ಒತ್ತಾಯಿಸಿದ್ದಾರೆ. ಪ್ರೆಸ್ ಕ್ಲಬ್ ಆಫ್ ಬೆಂಗಳೂರುದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಭೀಮ್ ಆರ್ಮಿ ಸೌತ್ ಇಂಡಿಯಾ ಕರ್ನಾಟಕ ಹಕ್ಕೊತ್ತಾಯ ಮಂಡನೆಯ ಸಂಸ್ಥಾಪಕ ಸಿ. ಅನ್ನದಾನಿ, ರಾಜ್ಯ ಸರ್ಕಾರದ ಧೋರಣೆಯನ್ನು ತೀವ್ರವಾಗಿ ಟೀಕಿಸಿದರು.
ಸರ್ಕಾರದ ಹಿಂಜರಿತಕ್ಕೆ ಆಕ್ಷೇಪ
ಅವರು ಮಾತನಾಡಿ, “ಚುನಾವಣಾ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಜಾರಿಗೆ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದ 11/2 ವರ್ಷವಾದರೂ ಕೇವಲ ಆಯೋಗ ನೇಮಿಸುವ ಮೂಲಕ ಸಮುದಾಯಕ್ಕೆ ದ್ರೋಹ ಮಾಡುತ್ತಿದೆ” ಎಂದು ಆರೋಪಿಸಿದರು.
ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳ ನಿರ್ಲಕ್ಷ್ಯ
ಇದೇ ವೇಳೆ, “ಎಂಫರಿಕಲ್ ಡಾಟಾ ಲಭ್ಯವಿಲ್ಲ ಎಂಬ ನೆಪದಲ್ಲಿ ರಾಜ್ಯ ಸರ್ಕಾರ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಅವಮಾನ ಮಾಡಿದೆ. ಸದಾಶಿವ ಆಯೋಗದ ವರದಿಯನ್ನು ಪರಿಗಣಿಸದೆ ಮತ್ತೊಬ್ಬ ನ್ಯಾಯಮೂರ್ತಿಗೆ ವಿಚಾರ ವಹಿಸಿರುವುದು ನ್ಯಾಯಾಂಗ ವ್ಯವಸ್ಥೆಯ ಅವಹೇಳನವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅವರು ಮುಂದುವರಿದು, “ಭಾರತದ ಸರ್ವೋಚ್ಛ ನ್ಯಾಯಾಲಯವು ಸಂವಿಧಾನ ಪೀಠದ ಮೂಲಕ ಒಳ ಮೀಸಲಾತಿ ಜಾರಿಗೆ ಆದೇಶಿಸಿದೆ. ಮುಖ್ಯ ನ್ಯಾಯಮೂರ್ತಿಗಳು ಎ.ಜೆ. ಸದಾಶಿವ ಆಯೋಗದ ವರದಿಯನ್ನು ತಮ್ಮ ಆದೇಶದಲ್ಲಿ ಉಲ್ಲೇಖಿಸಿರುವರೂ ಕೂಡಾ, ಕರ್ನಾಟಕ ಸರ್ಕಾರ ಮಾತ್ರ ತಟಸ್ಥ ನಿಲುವು ತಾಳಿ, ನಿರ್ಧಾರ ತೆಗೆದುಕೊಳ್ಳಲು ಹಿಂಜರಿಯುತ್ತಿದೆ” ಎಂದು ಆರೋಪಿಸಿದರು.
ಆಂದೋಲನ ತೀವ್ರಗೊಳ್ಳಲಿದೆ
ಅನ್ನದಾನಿ ಅವರು, “ಮಾನ್ಯ ನ್ಯಾಯಮೂರ್ತಿ ನಾಗಮೋಹನ್ ದಾಸ್ ರಾಜ್ಯದಾದ್ಯಂತ ಸಂವಿಧಾನ ಓದಿ, ಅದರ ಪ್ರಸ್ತಾವನೆ ಕುರಿತು ಜನಜಾಗೃತಿ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಕೇವಲ ದೂರು ಸ್ವೀಕರಿಸುತ್ತಾ ಕುಳಿತರೆ, ಸಾಮಾಜಿಕ ನ್ಯಾಯ ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದರು.
ಹೆಚ್ಚುವರಿ ಮಾಹಿತಿ ನೀಡುತ್ತಾ, “1970ರಲ್ಲಿ ಎಲ್.ಜಿ. ಹಾವನೂರು ಆಯೋಗವೂ ಮಾದಿಗ ಸಮುದಾಯದ ಹಿಂದುಳಿದ ಪರಿಸ್ಥಿತಿಯನ್ನು ದಾಖಲಿಸಿತ್ತು. ಈ ಬಗ್ಗೆ ಸುಪ್ರೀಂ ಕೋರ್ಟ್ ಆದೇಶದಲ್ಲೂ ಉಲ್ಲೇಖವಿದೆ. ಆದರೂ ರಾಜ್ಯ ಸರ್ಕಾರ ಎಂಫರಿಕಲ್ ಡಾಟಾ ಕೊರತೆಯ ನೆಪವನ್ನೇ ಮುಂದಿಟ್ಟು, ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿದೆ” ಎಂದು ಅವರು ಆಕ್ಷೇಪಿಸಿದರು.
ಈ ಎಲ್ಲಾ ವಿಚಾರಗಳನ್ನು ಮನಗಂಡು, “ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ‘ಸಂವಿಧಾನ ಓದಿ’ ಅಭಿಯಾನವನ್ನು ಇನ್ನಷ್ಟು ಬಲಪಡಿಸಿ, ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ” ಎಂದು ಭೀಮ್ ಆರ್ಮಿ ಹಕ್ಕೊತ್ತಾಯ ಮಂಡನೆ ತಿಳಿಸಿದೆ.
City Today News 9341997936
