
ಬೆಂಗಳೂರು, ಫೆಬ್ರವರಿ 15: ಸರ್ಕಾರಿ ಹೊರಗುತ್ತಿಗೆ ನೌಕರರ ಹಿತ ಕಾಯಲು ರಾಜ್ಯ ಸರ್ಕಾರದ ಕಾರ್ಮಿಕ ಇಲಾಖೆಯಿಂದ ‘ಕಾರ್ಮಿಕ ಸೇವೆಗಳ ವಿವಿದೋದ್ದೇಶ ಸಂಘ’ ರಚನೆಯಾಗಿದೆ. ಈ ಹೊಸ ಬೆಳವಣಿಗೆಯನ್ನು ಸ್ವಾಗತಿಸಿರುವ ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘ, ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಮತ್ತು ಬೇಡಿಕೆಗಳ ಬಗ್ಗೆ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿಲ್ಲ ಎಂದು ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ, ಸರ್ಕಾರಿ ಹೊರಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಸುಧಾಕರ್ ಅವರ ನೇತೃತ್ವದಲ್ಲಿ ಇಂದು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ನಲ್ಲಿ ಪತ್ರಿಕಾ ಗೋಷ್ಠಿ ನಡೆಯಿತು. ಸಂಘವು ತನ್ನ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತಿದ್ದು, ನಿರ್ದಿಷ್ಟ ಅವಧಿಯೊಳಗೆ ಈ ಬೇಡಿಕೆಗಳನ್ನು ಈಡೇರಿಸದಿದ್ದರೆ ಕಾನೂನು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಸಿದೆ.
ಸಂಘದ ಪ್ರಮುಖ ಬೇಡಿಕೆಗಳು:
1. ಈಗಾಗಲೇ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರನ್ನು ಅದೇ ಹುದ್ದೆ ಹಾಗೂ ಇಲಾಖೆಯಲ್ಲಿ ಮುಂದುವರಿಸುವುದು.
2. ನಿಯೋಜನೆ ಅವಧಿಯನ್ನು 6 ತಿಂಗಳ ಬದಲು ಕನಿಷ್ಠ 1 ವರ್ಷಕ್ಕೆ ನಿಗದಿಪಡಿಸುವುದು.
3. ಎಲ್ಲಾ ನೌಕರರಿಗೆ ಕಡ್ಡಾಯ ಸೇವಾ ಭದ್ರತೆ ಒದಗಿಸುವುದು.
4. ಸರ್ಕಾರದ ಅನುದಾನದ ನೆಪ ಹೇಳದೆ, ಪ್ರತೀ ತಿಂಗಳು ವೇತನ, ಇಪಿಎಫ್ (EPF) ಮತ್ತು ಇಎಸ್‌ಐ (ESI) ಪಾವತಿಸುವುದು.
5. ಕಾರ್ಮಿಕ ಇಲಾಖೆ ಸುತ್ತೋಲೆಯಂತೆ ಕನಿಷ್ಠ ವೇತನ ಹಾಗೂ ಇತರೆ ಸೌಲಭ್ಯಗಳನ್ನು ನೀಡುವುದು.
6. ಮಹಿಳಾ ನೌಕರರಿಗೆ ವಿಶೇಷ ರಜೆ ಸೌಲಭ್ಯ ಕಲ್ಪಿಸುವುದು.
ಈ ಬೇಡಿಕೆಗಳನ್ನು ಸರ್ಕಾರ ಅನುಷ್ಠಾನಗೊಳಿಸದಿದ್ದರೆ, ಸಂಘ ಕಾನೂನು ಹೋರಾಟಕ್ಕೆ ಇಳಿಯಲು ಸಿದ್ಧವಿದೆ ಎಂದು ಸಂಘದ ಮುಖಂಡರು ಸ್ಪಷ್ಟಪಡಿಸಿದರು. ಈ ಬಗ್ಗೆ ಸರ್ಕಾರ ಏನೂ ಸ್ಪಂದಿಸದಿದ್ದರೆ, ಮುಂದಿನ ಹಂತದಲ್ಲಿ ನೌಕರರ ಹಕ್ಕುಗಳಿಗಾಗಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷರು ಹೇಳಿದ್ದಾರೆ.
City Today News 9341997936
