
ಬೆಂಗಳೂರು, ಫೆಬ್ರವರಿ 24: ರಾಜ್ಯದ ಗುತ್ತಿಗೆ ಶುಶ್ರೂಷಾಧಿಕಾರಿಗಳು ತಮ್ಮ ಸೇವೆಯನ್ನು ಖಾಯಂ ಮಾಡಬೇಕು ಮತ್ತು ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ವೇತನ ನೀಡಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಒತ್ತಾಯಿಸಿ ಫೆಬ್ರವರಿ 24 ರಿಂದ ಅನಿರ್ದಿಷ್ಟಾವಧಿ ಆಹೋರಾತ್ರಿ ಧರಣಿಗೆ ಕರೆ ನೀಡಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರು ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಧ್ಯಕ್ಷರಾದ ಪಿ.ಎನ್. ರಾಧಾ ಸುರೇಶ್ ಮತ್ತು ಪ್ರಧಾನ ಕಾರ್ಯದರ್ಶಿ ಸೌಮ್ಯ ಶ್ರೀ.ಕೆ ಈ ಬಗ್ಗೆ ಮಾಹಿತಿ ನೀಡಿದರು.
ಪ್ರಮುಖ ಬೇಡಿಕೆಗಳು:
1️⃣ ಸೇವೆ ಖಾಯಂ: ಗುತ್ತಿಗೆ ಶುಶ್ರೂಷಾಧಿಕಾರಿಗಳನ್ನು ಖಾಯಂ ಮಾಡಿ, ಅವರಿಗೆ ಶಾಶ್ವತ ಉದ್ಯೋಗ ಭದ್ರತೆ ನೀಡಬೇಕು.
2️⃣ ಸಮಾನ ಕೆಲಸಕ್ಕೆ ಸಮಾನ ವೇತನ: ಸುಪ್ರೀಂ ಕೋರ್ಟ್ ಆದೇಶದಂತೆ ಖಾಯಂ ನೌಕರರಿಗೆ ನೀಡುವ ವೇತನವನ್ನು ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಸಹ ನೀಡಬೇಕು. ಕನಿಷ್ಠಪಕ್ಷ, ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಇರುವ ವೇತನ ಮಾದರಿಯಂತೆ ವೇತನ ನಿಗದಿಪಡಿಸಬೇಕು.
3️⃣ ಜೇಷ್ಠತಾ ಆಧಾರದ ಮೇಲೆ ಕೃಪಾಂಕ: ಮುಂಬರುವ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತಾ ಆಧಾರದ ಮೇಲೆ ಕೃಪಾಂಕ ಮತ್ತು ವಯೋಮಿತಿ ಸಡಿಲಿಕೆ ನೀಡಬೇಕು. ಗುತ್ತಿಗೆ ವೈದ್ಯಾಧಿಕಾರಿಗಳಿಗೆ 30 ಕೃಪಾಂಕ ನೀಡಿದಂತೆ, ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಪ್ರತಿ ವರ್ಷಕ್ಕೆ 3 ಕೃಪಾಂಕಗಳಂತೆ ಗರಿಷ್ಠ 30 ಕೃಪಾಂಕ ನೀಡಬೇಕು.
4️⃣ ಜಿಲ್ಲಾ ವರ್ಗಾವಣೆ: ಕಳೆದ ಎರಡು ವರ್ಷಗಳಿಂದ ಹಲವಾರು ಸಮಿತಿಗಳು ಸಭೆ ನಡೆಸಿದರೂ, ಜಿಲ್ಲೆಯಿಂದ ಜಿಲ್ಲೆಗೆ ವರ್ಗಾವಣೆ ಕುರಿತಂತೆ ಯಾವುದೇ ನೀತಿ ರೂಪಿಸಿಲ್ಲ. ತಕ್ಷಣ ವರ್ಗಾವಣೆಗೆ ಅವಕಾಶ ಮಾಡಿಕೊಡಬೇಕು.
5️⃣ ಪರಿಗಣನೆ ಇಲ್ಲದ ಸೇವೆಯನ್ನು ಪರಿಗಣಿಸಬೇಕು: PHCO [2 ANM] ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ಗುತ್ತಿಗೆ ಶುಶ್ರೂಷಾಧಿಕಾರಿಗಳ ಸೇವೆಯನ್ನು ನೇಮಕಾತಿಯಲ್ಲಿ ಪರಿಗಣಿಸಲು ಆದೇಶ ಹೊರಡಿಸಿದರೂ, ಅದು ಜಾರಿಗೆ ಬರಲಿಲ್ಲ. ತಕ್ಷಣ ಈ ಆದೇಶವನ್ನು ಜಾರಿಗೆ ತರಬೇಕು.
ಕೊನೆಗೆ, ಗುತ್ತಿಗೆ ಶುಶ್ರೂಷಾಧಿಕಾರಿಗಳು ಏನಂದರು?
“ಸರ್ಕಾರ ನಮ್ಮ ಬೇಡಿಕೆಗಳನ್ನು ಹಲವಾರು ಬಾರಿ ಕೇಳಿ ತಡೆಯಾಡಿದೆ. ಆದರೆ ಈ ಬಾರಿ ನಾವು ಹಿಂಜರಿಯುವ ಪ್ರಶ್ನೆಯೇ ಇಲ್ಲ. ನಮ್ಮ ಹಕ್ಕುಗಳನ್ನು ಪಡೆಯಲು ಹೋರಾಟ ತೀವ್ರಗೊಳಿಸಬೇಕಾಗಿದೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಿಶ್ಚಿತ!”
ಈ ಮುಷ್ಕರದಿಂದ ಸಾರ್ವಜನಿಕ ಆರೋಗ್ಯ ಸೇವೆಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸುತ್ತಿದ್ದರೂ, ಪ್ರತಿಭಟನಾಕಾರರು ಸರ್ಕಾರದ ನಿರ್ಲಕ್ಷ್ಯವೇ ಈ ಹಂತಕ್ಕೆ ತರುವಂತಾಗಿದೆ ಎಂದು ತೋಡಿಕೊಂಡಿದ್ದಾರೆ. ಈಗ ಎಲ್ಲರ ಗಮನ ಸರ್ಕಾರದ ಪ್ರತಿಕ್ರಿಯೆ ಕಡೆ ಹೊರಳಿದೆ.
City Today News 9341997936
