
ಬೆಂಗಳೂರು, ಫೆಬ್ರವರಿ 22: ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ಅರ್ಚಕರು ಮತ್ತು ದೇವಸ್ಥಾನಗಳ ಹಿತಾಸಕ್ತಿಗಾಗಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಮುನ್ನಡೆ ಸಿಕ್ಕಿದೆ. ಮುಜರಾಯಿ ಇಲಾಖೆಯ ಸಚಿವರಾದ ಶ್ರೀ ರಾಮಲಿಂಗ ರೆಡ್ಡಿಯವರ ನೇತೃತ್ವದಲ್ಲಿ ದೇವಸ್ಥಾನಗಳ ಅಭಿವೃದ್ಧಿ, ಅರ್ಚಕರ ಕಲ್ಯಾಣ ಹಾಗೂ ಉದ್ಯೋಗಿಗಳ ಹಿತಾಸಕ್ತಿಗೆ ಹೊಸ ಯೋಜನೆಗಳು ಕಾರ್ಯರೂಪಕ್ಕೆ ಬಂದಿವೆ.
2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಡಾ. ಜಿ. ಪರಮೇಶ್ವರ್ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಕಾಂಗ್ರೆಸ್ ಪ್ರಣಾಳಿಕೆ ಅರ್ಚಕರು ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷ ಪ್ರಾಮುಖ್ಯತೆ ನೀಡಿತ್ತು. ಇದನ್ನು ಇಂದು ಹೊಸ ಬಜೆಟ್‌ನಲ್ಲಿ ಅನುಮೋದಿಸುವಂತೆ ಅರ್ಚಕರ ಒಕ್ಕೂಟ ಆಗ್ರಹಿಸಿದೆ.
ಅರ್ಚಕರ ಪ್ರಮುಖ ಬೇಡಿಕೆಗಳು:
1. ಕಳೆದ 10 ವರ್ಷಗಳಿಂದ ಮಾಸಿಕ ₹5,000 ಮಾತ್ರ ನೀಡಲಾಗುತ್ತಿರುವ ತಸ್ತೀಕ್ ಮೊತ್ತವನ್ನು ಕನಿಷ್ಟ ₹10,000 ಕ್ಕೆ ಏರಿಸಲು ಒತ್ತಾಯ.
2. 60 ವರ್ಷ ಮೇಲ್ಪಟ್ಟ ಅರ್ಚಕರಿಗೆ ಗೌರವ ನಿಧಿ ಮೂಲಕ ಮಾಸಿಕ ಗೌರವ ವೇತನ ನೀಡುವುದು.
3. ದೇವಸ್ಥಾನಗಳ ಸಮೀಪದಲ್ಲೇ ಅರ್ಚಕರಿಗೆ ವಸತಿ ಯೋಜನೆ ಕಲ್ಪಿಸುವುದು.
4. ಐತಿಹಾಸಿಕ “ಸಿ” ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುವುದು.
5. ದೇವಸ್ಥಾನಗಳ ಆಸ್ತಿಗಳನ್ನು ಅಕ್ರಮ ಒತ್ತುವರಿಯಿಂದ ಮುಕ್ತಗೊಳಿಸಲು ವಿಶೇಷ ತಂಡ ರಚನೆ.
ಕಳೆದ 2024ರ ಡಿಸೆಂಬರ್ 21ರಂದು ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮತ್ತು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅವರು ಈ ಬೇಡಿಕೆಗಳ ಬಗ್ಗೆ ಸ್ಪಂದಿಸಿದ್ದರು.
ಮುಜರಾಯಿ ಕಾನೂನಿನ ತಿದ್ದುಪಡಿ ರಾಜ್ಯಪಾಲರ ಒಪ್ಪಿಗೆಗಾಗಿ ಕಾಯುತ್ತಿದೆ
ಕರ್ನಾಟಕ ವಿಧಾನಸಭೆ ಮತ್ತು ಪರಿಷತ್ತು ಒಮ್ಮತದಿಂದ ಅಂಗೀಕರಿಸಿರುವ ಮುಜರಾಯಿ ಕಾನೂನಿನ ತಿದ್ದುಪಡಿ ಈಗ ರಾಜ್ಯಪಾಲರ ಒಪ್ಪಿಗೆಗಾಗಿ ರಾಜಭವನದಲ್ಲಿ ಕಾಯುತ್ತಿದೆ. ಈ ಮಸೂದೆ ಜಾರಿಗೆ ಬಂದರೆ ಮುಜರಾಯಿ ಇಲಾಖೆ ಆರ್ಥಿಕವಾಗಿ ಸ್ವಾವಲಂಬಿಯಾಗಿ ದೇವಸ್ಥಾನಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ಸಾಧ್ಯವಾಗಲಿದೆ.
ಈ ಕುರಿತು ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ (ರಿ.) ರಾಜ್ಯಪಾಲರಿಗೆ ತಕ್ಷಣ ಸಹಿ ಮಾಡುವಂತೆ ಮನವಿ ಮಾಡಿದೆ. ಈ ಕುರಿತು ಪ್ರೆಸ್ ಕ್ಲಬ್ ಬೆಂಗಳೂರುದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒಕ್ಕೂಟದ ಪ್ರಮುಖರು ಮನವಿ ಸಲ್ಲಿಸಿದರು.
City Today News 9341997936
