ಬಜೆಟ್ ಅಧಿವೇಶನದ ಮುನ್ನೋಟ: ಸರ್ಕಾರದ ಖರ್ಚು, ಹಾಲಿ ಆರ್ಥಿಕ ಸ್ಥಿತಿ ಮತ್ತು ಆಡಳಿತದ ಗೊಂದಲಕ್ಕೆ ಅಡಗೂರು ವಿಶ್ವನಾಥ್ ಟೀಕೆ

ಬೆಂಗಳೂರು, ಫೆಬ್ರವರಿ 28: ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನವೇ, ಸರ್ಕಾರ ತನ್ನ ಆರ್ಥಿಕ ಸ್ಥಿತಿ, ಆದಾಯ ಮತ್ತು ವೆಚ್ಚದ ಸಮಗ್ರ ವರದಿ ನೀಡಬೇಕು ಎಂಬ ಒತ್ತಾಯ ಉಲ್ಬಣಗೊಂಡಿದೆ. ಹಿರಿಯ ರಾಜಕೀಯ ಮುಖಂಡ ಅಡಗೂರು ಎಚ್. ವಿಶ್ವನಾಥ್ ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಸಭೆಯಲ್ಲಿ ಮಾತನಾಡಿ, ಸರ್ಕಾರದ ಖರ್ಚು ಮತ್ತು ನಿರ್ಧಾರಗಳ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದ್ದಾರೆ.

ಶಾಸಕರಿಗೆ ಪೂರ್ವಸಿದ್ಧತೆ ಅಗತ್ಯ
ಮಾರ್ಚ್ 3, 2025 ರಿಂದ ಆರಂಭವಾಗುವ ಅಧಿವೇಶನದಲ್ಲಿ ಶಾಸಕರು ಸೂಕ್ತ ಸಿದ್ಧತೆಯೊಂದಿಗೆ ಪಾಲ್ಗೊಳ್ಳಬೇಕೆಂದು ವಿಶ್ವನಾಥ್ ಒತ್ತಾಯಿಸಿದರು. “ಆರ್ಥಿಕ ತಜ್ಞರುಗಳ ಸಲಹೆಯೊಂದಿಗೆ ಶಾಸಕರಿಗೆ ಪೂರ್ವಭಾವಿ ಚರ್ಚೆಯನ್ನು ಆಯೋಜಿಸಬೇಕು. 2024-25ನೇ ಸಾಲಿನ ಬಜೆಟ್ ಅನುಷ್ಠಾನ ಸಮೀಕ್ಷೆ ನಡೆಸಿ, ಹೊಸ ಬಜೆಟ್ ಹೇಗಿರಬೇಕು ಎಂಬ ಬಗ್ಗೆ ಚರ್ಚೆ ನಡೆಸಬೇಕಾಗಿದೆ,” ಎಂದು ಅವರು ಹೇಳಿದರು.

ಅನಾವಶ್ಯಕ ವೆಚ್ಚದ ಬಗ್ಗೆ ಗಂಭೀರ ಆರೋಪ
ವಿಶ್ವನಾಥ್ ಅವರು ಸರ್ಕಾರದ ಅನಾವಶ್ಯಕ ವೆಚ್ಚಗಳ ಬಗ್ಗೆ ಕಿಡಿಕಾರುತ್ತಾ, “ಕ್ಯಾಬಿನೆಟ್ ರ್ಯಾಂಕ್‌ಗಳು ಭಾರಿಯಾಗಿ ಹೆಚ್ಚಳಗೊಂಡಿವೆ. ಉಪಮುಖ್ಯಮಂತ್ರಿ ಹುದ್ದೆ ಸಂವಿಧಾನದಲ್ಲಿ ಇಲ್ಲ. ಆದರೂ ಡಿ.ಸಿ.ಎಂ. ಹಾಗೂ ಮಂತ್ರಿಗಳ ಕಚೇರಿಗಳಲ್ಲಿ ನೂರಾರು ಸಿಬ್ಬಂದಿ ನೇಮಕವಾಗಿದ್ದಾರೆ. ಸದನದ ಅನುಮೋದನೆಯಿಲ್ಲದೆ ಈ ಖರ್ಚು ನಡೆಯುತ್ತಿದೆ,” ಎಂದು ಟೀಕಿಸಿದರು.

ಶಾಸಕಾಂಗದ ಮಹತ್ವ ಮತ್ತು ಸರ್ಕಾರದ ನಿರ್ಧಾರಗಳು
ಸಂವಿಧಾನದ ಪ್ರಕಾರ ವಿಧಾನಸಭಾಧ್ಯಕ್ಷರು ಮತ್ತು ವಿಧಾನ ಪರಿಷತ್ತಿನ ಸಭಾಪತಿಗಳಿಗಿರುವ ಅಧಿಕಾರವನ್ನು ಉಲ್ಲೇಖಿಸಿ, ಅವರು “ಆರ್ಥಿಕ ತಜ್ಞರುಗಳೊಂದಿಗೆ ಚರ್ಚೆ ನಡೆಸಿ, ಸದನದ ಒಪ್ಪಿಗೆಯಿಲ್ಲದ ನಿರ್ಧಾರಗಳನ್ನು ತಡೆಹಿಡಿಯಬೇಕು,” ಎಂದರು.

“ಜನತಾಂತ್ರಿಕತೆಯಿಂದ ಸರ್ಕಾರ ದೂರ ಸಾಗುತ್ತಿದೆ”
“ಸಾಮಾನ್ಯ ಜನರ ಮೇಲಿನ ಆರ್ಥಿಕ ಒತ್ತಡ ಹೆಚ್ಚಾಗಿದ್ದು, ಸರ್ಕಾರ ಜನಪರ ಆಡಳಿತ ನಡೆಸಬೇಕಾದ ಅಗತ್ಯವಿದೆ. ರಾಜ್ಯ ಸರ್ಕಾರ ಈ ಕುರಿತು ಸಮರ್ಪಕ ನಿರ್ಧಾರ ಕೈಗೊಳ್ಳಬೇಕು,” ಎಂದು ವಿಶ್ವನಾಥ್ ವಾಗ್ದಾಳಿ ನಡೆಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.