ಅತಿಥಿ ಶಿಕ್ಷಕರ ವೇತನ ಹೆಚ್ಚಳಕ್ಕೆ ಆಗ್ರಹ – ಮಾರ್ಚ್ 10ರಿಂದ ರಾಜ್ಯವ್ಯಾಪಿ ಪ್ರತಿಭಟನೆ ಘೋಷಣೆ

ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರು ತಮ್ಮ ವೇತನ ಹೆಚ್ಚಳ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯವ್ಯಾಪಿ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘ (ರಿ.) ಕರ್ನಾಟಕ ರಾಜ್ಯ ಸಮಿತಿ, ಬೆಂಗಳೂರು ನೇತೃತ್ವದಲ್ಲಿ, ಮುಖ್ಯಮಂತ್ರಿಗಳು 2025-26ನೇ ಸಾಲಿನ ಬಜೆಟ್‌ನಲ್ಲಿ ಅತಿಥಿ ಶಿಕ್ಷಕರ ವೇತನ ಹೆಚ್ಚಳ ಮತ್ತು ಸೇವಾ ಭದ್ರತೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಈ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಮಾರ್ಚ್ 10ರಿಂದ ರಾಜ್ಯದ ಎಲ್ಲಾ ಅತಿಥಿ ಶಿಕ್ಷಕರು ಶಾಲೆಯನ್ನು ಬಹಿಷ್ಕರಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಅನಿರ್ದಿಷ್ಟ ಮುಕ್ತಾಯದ ಹೋರಾಟ ಕೈಗೊಳ್ಳುವುದಾಗಿ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.

ಪ್ರಧಾನ ಬೇಡಿಕೆಗಳು:

1. ನಿರಂತರ ಸೇವೆಯ ಖಾತರಿಗಾಗಿ ಕ್ರಮ: ಪ್ರತಿ ಶೈಕ್ಷಣಿಕ ವರ್ಷ ಪ್ರಾರಂಭದಲ್ಲಿ ಪುನಃ ನೇಮಕಾತಿಯ ಪ್ರಕ್ರಿಯೆ ಮುಗಿಸಿ, ಈಗಾಗಲೇ ಸೇವೆ ಸಲ್ಲಿಸುತ್ತಿರುವ ಅತಿಥಿ ಶಿಕ್ಷಕರನ್ನು ಮುಂದುವರಿಸಲು ಸರ್ಕಾರ ಕ್ರಮ ವಹಿಸಬೇಕು. ಅನುಭವ ಹೊಂದಿರುವ ಶಿಕ್ಷಕರಿಗೆ ಆದ್ಯತೆ ನೀಡಬೇಕು.


2. ವೇತನ ಹೆಚ್ಚಳ: ಅತಿಥಿ ಶಿಕ್ಷಕರ ಕನಿಷ್ಠ ಮಾಸಿಕ ವೇತನವನ್ನು ₹20,000ಕ್ಕೆ ಹೆಚ್ಚಿಸಬೇಕು. ಬೇಸಿಗೆ ರಜೆ ಸೇರಿದಂತೆ 12 ತಿಂಗಳ ವೇತನ ನೀಡಬೇಕು. ಸುಪ್ರೀಂ ಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ಅನುಸರಿಸಬೇಕು. ಪ್ರತಿ ತಿಂಗಳ ಮೊದಲ ವಾರವೇ ವೇತನ ನೇರವಾಗಿ ಖಾತೆಗೆ ಜಮಾ ಮಾಡಬೇಕು.


3. ಶಿಕ್ಷಕರ ನೇಮಕಾತಿಯಲ್ಲಿ ಪ್ರಾಥಮ್ಯ: ಅತಿಥಿ ಶಿಕ್ಷಕರ ಸೇವಾ ಅವಧಿಗೆ ಪ್ರತಿ ವರ್ಷಕ್ಕೆ 5% ಕೃಪಾಂಕವನ್ನು ನಿಯೋಜನಾ ಪ್ರಕ್ರಿಯೆಯಲ್ಲಿ ನೀಡಬೇಕು.


4. ಖಾಯಂ ಸೇವೆಗೆ ಪರಿಗಣನೆ: ದೆಹಲಿ, ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶ ಸರ್ಕಾರಗಳ ಮಾದರಿಯಲ್ಲಿ ಅತಿಥಿ ಶಿಕ್ಷಕರ ಸೇವೆಯನ್ನು ಖಾಯಂಗೊಳಿಸಬೇಕು.


5. ಸೇವಾ ಪ್ರಮಾಣಪತ್ರ ಮತ್ತು ಗೌರವ: ಅತಿಥಿ ಶಿಕ್ಷಕರಿಗೆ ಸೇವಾ ಪ್ರಮಾಣಪತ್ರ ನೀಡಬೇಕು. ಇತರ ಸರಕಾರಿ ಶಿಕ್ಷಕರಿಗೆ ದೊರೆಯುವ ಸೌಲಭ್ಯಗಳು, ತರಬೇತಿ ಮತ್ತು ಗೌರವಪೂರ್ಣ ವ್ಯವಸ್ಥೆಗಳನ್ನು ಅತಿಥಿ ಶಿಕ್ಷಕರಿಗೂ ವಿಸ್ತರಿಸಬೇಕು.


6. ಹಾಜರಾತಿ ಮತ್ತು ಪದಬದಲಾವಣೆ: ಶಾಲಾ ಹಾಜರಾತಿ ಪುಸ್ತಕದಲ್ಲಿ ಅತಿಥಿ ಶಿಕ್ಷಕರ ಹಾಜರಾತಿ ದಾಖಲಿಸಬೇಕು. “ಅತಿಥಿ ಶಿಕ್ಷಕ” ಎಂಬ ಪದವನ್ನು ತೆಗೆದುಹಾಕಿ “ಗೌರವ ಶಿಕ್ಷಕ” ಅಥವಾ “ಅರೆಕಾಲಿಕ ಶಿಕ್ಷಕ” ಎಂದು ಪರಿವರ್ತಿಸಬೇಕು.


7. ವಿಮೆ ಮತ್ತು ಭದ್ರತೆ: ಅತಿಥಿ ಶಿಕ್ಷಕರಿಗೆ ಗುಂಪು ಜೀವನ ವಿಮೆ ಸೌಲಭ್ಯ ಒದಗಿಸಬೇಕು.



ಸರ್ಕಾರ ಈ ಬೇಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಂಡು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಹನುಮಂತ ಎಚ್.ಎಸ್. ಪತ್ರಿಕಾ ಪ್ರಕಟಣೆಯಲ್ಲಿ ಸಂಘದ ಮುಖಂಡರುಗಳ ಸಮ್ಮುಖದಲ್ಲಿ ತಿಳಿಸಿದರು. ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದರೆ, ರಾಜ್ಯದ ಎಲ್ಲಾ ಅತಿಥಿ ಶಿಕ್ಷಕರು ಶಿಕ್ಷಣ ಕಾರ್ಯವನ್ನು ಸ್ಥಗಿತಗೊಳಿಸಿ ಅನಿರ್ದಿಷ್ಟ ಮುಕ್ತಾಯದ ಹೋರಾಟ ನಡೆಸಲು ನಿರ್ಧರಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.