ಅನುದಾನಿತ ಶಾಲಾ/ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಹಳೆಯ ಪಿಂಚಣಿ ನೀಡಲು ಒತ್ತಾಯ

ಬೆಂಗಳೂರು, ಮಾರ್ಚ್ 2025: ರಾಜ್ಯ ಸರ್ಕಾರವು 13,500 ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ನೀಡಲು ಸಚಿವ ಸಂಪುಟದಲ್ಲಿ ತೀರ್ಮಾನಿಸಿರುವುದು ಸ್ವಾಗತಾರ್ಹವಾದುದು. ಆದರೆ, 2006ರ ಏಪ್ರಿಲ್ 1ರ ಪೂರ್ವದಲ್ಲಿ ನೇಮಕಗೊಂಡು ನಂತರ ಅನುದಾನಕ್ಕೆ ಒಳಗೊಂಡ ಅನುದಾನಿತ ಶಾಲಾ-ಕಾಲೇಜುಗಳ ನೌಕರರು ಪಿಂಚಣಿಯಿಂದ ವಂಚಿತರಾಗಿದ್ದಾರೆ. ಸರ್ಕಾರವು ಈ ನೌಕರರಿಗೂ ಕೂಡ ಹಳೆಯ ಪಿಂಚಣಿ ನೀಡುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.

ಅನುದಾನಿತ ಶಾಲಾ/ಕಾಲೇಜುಗಳ ನೌಕರರು ಸರ್ಕಾರಿ ನೌಕರರಂತೆ ಅಧಿಸೂಚನೆ ಮೂಲಕ ನೇಮಕಗೊಂಡಿದ್ದರೂ, ದೀರ್ಘಕಾಲ ಯಾವುದೇ ಸಂಭಾವನೆ ಇಲ್ಲದೆ ಸೇವೆ ಸಲ್ಲಿಸಿದ್ದರು. ಅಂತೆಯೇ, ಪಿಂಚಣಿ ಸೌಲಭ್ಯವಿಲ್ಲದೇ ಅವರ ಸೇವೆ ಮುಕ್ತಾಯಗೊಂಡಿದೆ. ಕೆಲವರು ವಯೋನಿವೃತ್ತರಾಗಿದ್ದಾರೆ, ಕೆಲವರು ಸೇವೆಯಲ್ಲಿರುವಾಗಲೇ ಮರಣ ಹೊಂದಿದ್ದಾರೆ, ಇನ್ನೂ ಕೆಲವರು ಈಗಲೂ ಸೇವೆಯಲ್ಲಿ ಇದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಸುಮಾರು 4,000 ಪಿಂಚಣಿ ವಂಚಿತ ನೌಕರರು ಇದ್ದುದರಿಂದ, ಸರ್ಕಾರವು ಮಾನವೀಯತೆಯ ಆಧಾರದ ಮೇಲೆ, ಸರ್ಕಾರಿ ನೌಕರರಿಗೆ ನೀಡಿದಂತೆ ಇವರಿಗೂ ಪಿಂಚಣಿ ವಿಸ್ತರಿಸಬೇಕು ಎಂದು ಒತ್ತಾಯಿಸಲಾಗಿದೆ.

ಈ ಕುರಿತಂತೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಎಂ.ಪಿ. ಕರಬಸಪ್ಪ (ಒಕ್ಕೂಟ ಅಧ್ಯಕ್ಷರು), ಡಾ. ಜಿ.ಆರ್. ಹೆಬ್ಬೂರ (ನಿಕಟಪೂರ್ವ ಅಧ್ಯಕ್ಷರು), ಡಾ. ಪಿ.ಎಸ್. ಕೊಕಟನೂರ (ವೇದಿಕೆ ಅಧ್ಯಕ್ಷರು), ಶ್ರೀಕಂಠಯ್ಯ (ಒಕ್ಕೂಟ ಕಾರ್ಯಾಧ್ಯಕ್ಷರು), ದಯಾನಂದ ಸ್ವಾಮಿ (ವೇದಿಕೆ ಕಾರ್ಯಾಧ್ಯಕ್ಷರು) ಮತ್ತು ಡಾ. ಜಿ.ಪಿ. ನಾಗರಾಜ್ (ಪ್ರಧಾನ ಕಾರ್ಯದರ್ಶಿ) ಅವರು ಸರ್ಕಾರ ತಕ್ಷಣ ಈ ಬಗ್ಗೆ ಸ್ಪಷ್ಟ ನಿಲುವು ತೆಗೆದು ಅನುದಾನಿತ ಶಾಲಾ-ಕಾಲೇಜುಗಳ ಪಿಂಚಣಿ ವಂಚಿತ ನೌಕರರಿಗೆ ಹಳೆಯ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.