
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ರಾಜ್ಯ ಬಜೆಟ್ ಕುರಿತು ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಜೆಟ್ ಯಥಾಸ್ಥಿತಿವಾದಕ್ಕೆ ಶರಣಾದ, ಜನಪ್ರಿಯತೆ ಗಳಿಸುವ ಉದ್ದೇಶದ ಬಜೆಟ್ ಆಗಿದ್ದು, ರಾಜ್ಯದ ಅಭಿವೃದ್ಧಿಗೆ ಯಾವುದೇ ದಾರಿದೀಪವಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
“ಮೂಲಭೂತ ಸೌಕರ್ಯಗಳಿಗೆ ಹಣವಿಲ್ಲ, ಕರ್ನಾಟಕದ ಆಧುನಿಕೀಕರಣದ ದೃಷ್ಟಿಕೋಣವಿಲ್ಲ” ಎಂದು ಟೀಕಿಸಿರುವ ಶರವಣ, ಬಜೆಟ್‌ನಲ್ಲಿ ರಾಜ್ಯದ ಮೂಲಭೂತ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಸೂಕ್ತ ಹಣಕಾಸಿನ ವಿತರಣೆಯಿಲ್ಲ ಎಂದು ಹೇಳಿದ್ದಾರೆ. “ರಾಜ್ಯ ಸರ್ಕಾರ ಕೇಂದ್ರದ ಮೇಲೆ ಅಪವಾದ ಹಾಕುವುದರ ಮೂಲಕ ತನ್ನ ವೈಫಲ್ಯ ಮುಚ್ಚಿ ಹೊಡೆಯಲು ಯತ್ನಿಸುತ್ತಿದೆ,” ಎಂದು ಅವರು ಆಕ್ಷೇಪಿಸಿದರು.

8000 ಕೋಟಿ ಅನುದಾನ: ರಾಜಕೀಯ ಲೆಕ್ಕಾಚಾರ?
“ಪಕ್ಷದ ಶಾಸಕರ ಒತ್ತಡಕ್ಕೆ ತುತ್ತಾಗಿ ಅವರನ್ನು ಹಿಡಿತದಲ್ಲಿ ಇಡುವ ಉದ್ದೇಶದಿಂದಲೇ ರಸ್ತೆ ಮತ್ತು ಮೂಲಭೂತ ಸೌಕರ್ಯಗಳಿಗೆ 8000 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ,” ಎಂದು ಆರೋಪಿಸಿದ ಶರವಣ, ಈ ಬಜೆಟ್ ಸಂಪನ್ಮೂಲ ಕ್ರೋಢೀಕರಣವಿಲ್ಲದ ‘ಅಡ್ಜಸ್ಟ್‌ಮೆಂಟ್ ಬಜೆಟ್’ ಆಗಿದೆ ಎಂದು ಕಿಡಿಕಾರಿದರು.
“ರಾಜ್ಯ ಆರ್ಥಿಕ ಸ್ಥಿತಿ ದುರ್ಬಲ, ಸರಕಾರ ದಿವಾಳಿಯತ್ತ!”
ರಾಜ್ಯ ಬಜೆಟ್‌ನ ಗಾತ್ರ 4 ಲಕ್ಷ ಕೋಟಿಯೇ ಆಗಿದ್ದರೂ, ಹಣ ಎಲ್ಲಿಂದ ಬರುತ್ತದೆ ಎಂಬುದರ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಎಂದು ಅವರು ಎತ್ತಿ ಹೇಳಿದರು. “ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಒದಗಿಸುವ ಹುಚ್ಚು ಕಾರ್ಯದಲ್ಲಿ ಮುಳುಗಿರುವ ಸರ್ಕಾರ, ರಾಜ್ಯದ ಭವಿಷ್ಯದ ಬಗ್ಗೆ ಯಾವುದೇ ಮುನ್ನೋಟವಿಲ್ಲ,” ಎಂದು ಟೀಕಿಸಿದರು.
ಬೆಂಗಳೂರು ಟನಲ್ ಯೋಜನೆ ‘ಅವೈಜ್ಞಾನಿಕ’
ಸರ್ಕಾರ ಘೋಷಿಸಿದ 40,000 ಕೋಟಿ ರೂಪಾಯಿ ವೆಚ್ಚದ ಬೆಂಗಳೂರು ಟನಲ್ ಯೋಜನೆ ಅವೈಜ್ಞಾನಿಕ ಎಂದು ಶರವಣ ವ್ಯಾಖ್ಯಾನಿಸಿದರು. “ಈ ಯೋಜನೆ ಕೇವಲ ಜನಮನ ಸೆಳೆಯಲು ಕೈಗೊಂಡ ತಂತ್ರ. ಇದು ಆರ್ಥಿಕ ಲೆಕ್ಕಾಚಾರವಿಲ್ಲದ ಗಾಳಿಯಲ್ಲಿ ಕಟ್ಟಿದ ಕೋಟೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೇಕೆದಾಟು, ಎತ್ತಿನಹೊಳೆ ಯೋಜನೆಗಳ ಪರಿಗಣನೆ ಇಲ್ಲ
“ನೀರು ಮತ್ತು ನೀರಾವರಿ ಯೋಜನೆಗಳಿಗೆ ಯಾವುದೇ ಹೊಸ ಅನುದಾನ ಘೋಷಣೆ ಮಾಡಲಾಗಿಲ್ಲ. ಮೇಕೆದಾಟು, ಎತ್ತಿನಹೊಳೆ ಯೋಜನೆಗಳಿಗಾಗಿ ಬಜೆಟ್‌ನಲ್ಲಿ ಯಾವುದೇ ಗಮನವಿಲ್ಲ” ಎಂದು ಅವರು ವಿಷಾದ ವ್ಯಕ್ತಪಡಿಸಿದರು.
“ಬುರುಡೆ ಬಜೆಟ್”
“ಈ ಬಜೆಟ್ ನಿರಾಶಾದಾಯಕ, ಮುನ್ನೋಟವಿಲ್ಲದ, ಆರ್ಥಿಕ ದಿವಾಳಿತನದತ್ತ ಸಾಗುತ್ತಿರುವ ಸರ್ಕಾರದ ಸ್ಪಷ್ಟ ಸಂಕೇತ” ಎಂದು ಟಿ.ಎ. ಶರವಣ ಕಿಡಿಕಾರಿದರು.
City Today News 9341997936
