
ಬೆಂಗಳೂರು, ಮಾರ್ಚ್ 7: ಶುಶ್ರೂಷಾಧಿಕಾರಿಗಳಿಗೆ (ನರ್ಸಿಂಗ್ ಆಫೀಸರ್) ಮೂಲ ವೇತನ ನೀಡದಿದ್ದರೆ, ಗಾಂಧಿ ದಂಡಿಯ ಸತ್ಯಾಗ್ರಹ ದಿನವಾದ ಮಾರ್ಚ್ 12ರಂದು ಸಾಮೂಹಿಕ ರಾಜೀನಾಮೆ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ರಾಧಾ ಸುರೇಶ್ P.N. ಎಚ್ಚರಿಸಿದ್ದಾರೆ.
ಶುಕ್ರವಾರ ಪ್ರಕಟಣೆ ನೀಡಿದ ಅವರು, ಸಂಘದ ಸದಸ್ಯರು ಬೆಂಗಳೂರು ಫ್ರೀಡಂ ಪಾರ್ಕ್‌ನಲ್ಲಿ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿ, ಶುಶ್ರೂಷಾಧಿಕಾರಿಗಳ ಬೇಡಿಕೆಗಳನ್ನು ಇತ್ಯರ್ಥಗೊಳಿಸಲು ಮಾರ್ಚ್ 10 ರಂದು ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದ್ದಾಗಿ ತಿಳಿಸಿದರು. ಸಚಿವರ ಈ ಭರವಸೆಯನ್ನು ಗೌರವಿಸಿ, ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ ಎಂದು ಅವರು ಹೇಳಿದರು.
ಆದರೆ, ಮಾರ್ಚ್ 10ರಂದು ನಡೆಯುವ ಮಹತ್ವದ ಸಭೆಯಲ್ಲಿ ಮೂಲ ವೇತನ ಸೇರಿದಂತೆ ಬೇಡಿಕೆಗಳಿಗೆ ಸರಕಾರ ಸ್ಪಷ್ಟ ಪರಿಹಾರ ನೀಡದಿದ್ದರೆ, ಮಾರ್ಚ್ 12ರಂದು ಮುಖ್ಯಮಂತ್ರಿಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಲಾಗುವುದು. ಅಲ್ಲದೆ, ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ರಾಧಾ ಸುರೇಶ್ ಎಚ್ಚರಿಸಿದ್ದಾರೆ.
ಈ ಬೆಳವಣಿಗೆ ರಾಜ್ಯದ ಆರೋಗ್ಯ ಸೇವೆಗಳ ಮೇಲಾದ ಪರಿಣಾಮದ ಬಗ್ಗೆ ಸಾರ್ವಜನಿಕರು ಹಾಗೂ ಸರ್ಕಾರ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ನರ್ಸಿಂಗ್ ಆಫೀಸರ್‌ಗಳ ಹೋರಾಟದ ಮುಂದಿನ ನಡೆಯು ರಾಜ್ಯದ ಆರೋಗ್ಯ ವ್ಯವಸ್ಥೆಯಲ್ಲಿ ಹೊಸ ತಿರುವು ತರಬಹುದೆಂದು ನಿರೀಕ್ಷಿಸಲಾಗಿದೆ.
City Today News 9341997936
