
ಬೆಂಗಳೂರು, ಮಾರ್ಚ್ 07, 2025: ರಾಜ್ಯ ಸರ್ಕಾರದ 2025-26ನೇ ಸಾಲಿನ ಬಜೆಟ್‌ನಲ್ಲಿ ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರನ್ನು ಸಂಪೂರ್ಣವಾಗಿ ಕಡೆಗಣಿಸಿರುವುದಕ್ಕೆ ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದ ಸಾಮಾಜಿಕ ನ್ಯಾಯಕ್ಕೆ ಬದ್ದ ಎಂದು ಪರಿಗಣಿಸಲಾದ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈ ಸಮುದಾಯದ ಅಭಿವೃದ್ಧಿಗೆ ಸ್ಪಷ್ಟ ಯೋಜನೆ ನೀಡದೆ ನಿರ್ಲಕ್ಷ್ಯ ತೋರಿಸಿರುವುದನ್ನು ಮುಖಂಡರು ಖಂಡಿಸಿದ್ದಾರೆ.
ಚಳುವಳಿಯ ಸಹಾಧ್ಯಕ್ಷೆ ವೈಶಾಲಿ ಮಾತನಾಡಿ, “ನಾವು ಫೆಬ್ರವರಿ 28ರಿಂದ ಮಾರ್ಚ್ 5ರವರೆಗೆ ಹತ್ತು ಜಿಲ್ಲೆಗಳಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸಿ, ಬಜೆಟ್ ಕುರಿತು ನಮ್ಮ ಹಕ್ಕೊತ್ತಾಯಗಳನ್ನು ಸರ್ಕಾರಕ್ಕೆ ತಿಳಿಸಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅದನ್ನು ಪರಿಗಣಿಸದೆ ಬಜೆಟ್ ಮಂಡಿಸಿರುವುದು ಖಂಡನೀಯ” ಎಂದು ಹೇಳಿದರು.
ರಾಜ್ಯ ಸಮಿತಿಯ ಮತ್ತೊಬ್ಬ ಸದಸ್ಯ ಮನೋಹರ್ ಎಲವರ್ತಿ, “ರಾಜ್ಯ ಸರ್ಕಾರವು ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಮಾಡಿದ ಭರವಸೆಗಳನ್ನು ಬಜೆಟ್‌ನಲ್ಲಿ ಸ್ಪಷ್ಟವಾಗಿ ಗಮನಿಸಿಲ್ಲ. ಸಮುದಾಯದ ಪುನರ್ವಸತಿ ಗಾಗಿ ಕೇವಲ ರೂ. 3 ಕೋಟಿ ಮತ್ತು ಮೈತ್ರಿ ಯೋಜನೆಗೆ ರೂ. 2.54 ಕೋಟಿ ಮೀಸಲಿಡಲಾಗಿದೆ, ಇದು ಅತ್ಯಂತ ಅಪೂರ್ಣ. ಚುನಾವಣಾ ಪ್ರಣಾಳಿಕೆಯಲ್ಲಿ ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ರೂ. 2 ಲಕ್ಷ ಉದ್ಯಮಶೀಲತೆ ನಿಧಿ ಮತ್ತು ವಾರ್ಷಿಕ ರೂ. 200 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದರೂ, ಅದನ್ನು ಈ ಬಜೆಟ್‌ನಲ್ಲಿ ನುಡಿಯದೆ ಹೋಗಿದ್ದಾರೆ” ಎಂದು ಬೇಸರ ವ್ಯಕ್ತಪಡಿಸಿದರು.
ಚಳುವಳಿಯ ಮತ್ತೊಬ್ಬ ಸಹಾಧ್ಯಕ್ಷೆ ಕಾಂತಾದೇವಿ, “ಈ ಬಜೆಟ್ ಸರ್ಕಾರದ ಲಿಂಗತ್ವ ಅಲ್ಪಸಂಖ್ಯಾತರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ತೋರಿಸುತ್ತದೆ. ಸರ್ಕಾರ ನಮಗೆ ಬೇರೇನು ಕೆಲಸ ಸಾಧ್ಯವಿಲ್ಲ, ಭಿಕ್ಷಾಟನೆ ಮತ್ತು ಲೈಂಗಿಕ ದುಡಿಮೆಯಲ್ಲೇ ಜೀವನ ಸಾಗಿಸಬೇಕು ಎಂದು ಹೇಳಿದಂತೆ ಆಗುತ್ತಿದೆ. ಇದು ಗೌರವಾನ್ವಿತ ಬದುಕಿನ ಹಕ್ಕಿನ ಮೇಲಿನ ದಾಳಿಯಾಗಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್‌ನಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಕುರಿತು ನಿರ್ಲಕ್ಷ್ಯ:
ಲಿಂಗ ಪರಿವರ್ತನೆ ಮಾಡಿರುವ ಪುರುಷ ಸೈಯದ್, “ರೂ. 4 ಲಕ್ಷ ಕೋಟಿ ಮೊತ್ತದ 148 ಪುಟದ ಬಜೆಟ್‌ನಲ್ಲಿ ನಮ್ಮ ಸಮುದಾಯಕ್ಕೆ ಯಾವುದೇ ಪ್ರಸ್ತಾಪವೂ ಇಲ್ಲ. ನಮ್ಮ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆಗಳಿಗೆ, ಉದ್ಯಮಶೀಲತೆಗೆ ಸರ್ಕಾರವೇನೂ ಅನುದಾನ ನೀಡಿಲ್ಲ. ಈ ನಿರ್ಲಕ್ಷ್ಯ ನಮ್ಮನ್ನು ತೀವ್ರ ನಿರಾಸೆಗೆ ದೂಡಿದೆ” ಎಂದು ಹೇಳಿದರು.
ಲಿಂಗತ್ವ ಅಲ್ಪಸಂಖ್ಯಾತ ಮಹಿಳೆ ಜಾನು, “ನಾವು ಹಾಸನ, ಕೋಲಾರ, ಗದಗ, ಬೆಂಗಳೂರು, ಬೀದರ್, ಬೆಳಗಾವಿ, ಕಲಬುರಗಿ, ಚಿಕ್ಕಮಗಳೂರು, ಬಳ್ಳಾರಿ, ಹೊಸಪೇಟೆಗಳಲ್ಲಿ ಬಜೆಟ್ ಗೋಷ್ಠಿಗಳನ್ನು ನಡೆಸಿದ್ದರೂ ಸರ್ಕಾರ ನಮ್ಮ ಬಗ್ಗೆ ಗಮನ ಹರಿಸಿಲ್ಲ. ನಮ್ಮ ಹೋರಾಟವನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ದುರದೃಷ್ಟಕರ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚಳುವಳಿಯ ಮುಖ್ಯ ಹಕ್ಕೊತ್ತಾಯಗಳು:
1. ಲಿಂಗತ್ವ ಅಲ್ಪಸಂಖ್ಯಾತರಿಗೆ ಪ್ರತ್ಯೇಕ ವಸತಿ ಯೋಜನೆ ರೂಪಿಸಬೇಕು.
2. ಉದ್ಯಮಶೀಲತೆಗೆ ಪ್ರತಿ ಲಿಂಗತ್ವ ಅಲ್ಪಸಂಖ್ಯಾತ ವ್ಯಕ್ತಿಗೆ ರೂ. 2,00,000 ಆರ್ಥಿಕ ನೆರವು ನೀಡಬೇಕು.
3. ಉಚಿತ ಲಿಂಗ ಪರಿವರ್ತನೆ ಶಸ್ತ್ರಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಯ ನಂತರ ಆರೈಕೆಗೆ ಬಜೆಟ್ ಮೀಸಲಿಡಬೇಕು.
4. 1% ಮೀಸಲಾತಿ ಉದ್ಯೋಗಗಳಿಗಾಗಿ ತರಬೇತಿ ಮತ್ತು ಕೋಚಿಂಗ್ ನೀಡಲು ಸರ್ಕಾರ ಬಜೆಟ್‌ನಲ್ಲಿ ನಿದಿ ಮೀಸಲಿಡಬೇಕು.
5. ಲಿಂಗತ್ವ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ವಾರ್ಷಿಕ ರೂ. 200 ಕೋಟಿ ಮೀಸಲಿಟ್ಟು, ಪ್ರತ್ಯೇಕ ಸಮಿತಿಯನ್ನು ರಚಿಸಬೇಕು.
ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರ ತ್ವರಿತವಾಗಿ ಪರಿಗಣಿಸಬೇಕು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳುವಳಿ ಮುಖಂಡರು ಒತ್ತಾಯಿಸಿದರು.
City Today News 9341997936
