
ಬೆಂಗಳೂರು: ಸುಮಾರು ₹2,000 ಕೋಟಿ ಮೌಲ್ಯದ 44 ಎಕರೆ 33 ಗುಂಟೆ ಭೂಮಿಗೆ ಸಂಬಂಧಿಸಿದಂತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಸಲ್ಲಿಸಿರುವ ವರದಿಯನ್ನು ಸರ್ಕಾರ ತಕ್ಷಣ ಜಾರಿಗೆ ತರಬೇಕು ಎಂದು ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ಮತ್ತು ಸಮುದಾಯ ಮುಖಂಡರು ಒತ್ತಾಯಿಸಿದ್ದಾರೆ.
ಸಜ್ಜೆಪಾಳ್ಯ ಗ್ರಾಮದ ಸರ್ವೆ ನಂ. 15-ರ ಈ ಭೂಮಿಗೆ ಸಂಬಂಧಿಸಿದಂತೆ ಪ್ರಾದೇಶಿಕ ಆಯುಕ್ತರು ಸಮಗ್ರ ಪರಿಶೀಲನೆ ನಡೆಸಿ ನ್ಯಾಯಾಲಯದ ಆದೇಶಗಳ ಅನುಗುಣವಾಗಿ ವರದಿ ನೀಡಿದ್ದಾರೆ. ಹೈಕೋರ್ಟ್ ವಿಭಾಗೀಯ ಪೀಠ 2010ರಲ್ಲಿ ನೀಡಿದ ಆದೇಶದ ಪ್ರಕಾರ, ಶ್ರೀಮತಿ ರಂಗಮ್ಮ ಅವರ ಹೆಸರನ್ನು ಕಂದಾಯ ದಾಖಲೆಗಳಲ್ಲಿ ಪುನಃಸ್ಥಾಪಿಸಬೇಕು ಮತ್ತು ತಹಶೀಲ್ದಾರ್ ಜಾರಿಗೊಳಿಸಿರುವ ಎಂ.ಆರ್. 1/17-18 ಅನ್ನು ರದ್ದು ಮಾಡಬೇಕು ಎಂಬುದು ವರದಿಯ ಶಿಫಾರಸು.
ಪ್ರಸ್ತುತ, ಭೂಮಿಯ ಮಾಲೀಕತ್ವ ಸಂಬಂಧಿಸಿದ ದಾವೆ (O.S. 3479/2011) ನ್ಯಾಯಾಲಯದಲ್ಲಿ ಪ್ರಗತಿಯಲ್ಲಿರುವುದರಿಂದ, ಅಂತಿಮ ತೀರ್ಪು ಬರೆಯುವವರೆಗೆ ಯಾವುದೇ ಸ್ವಾಮ್ಯ ಹಕ್ಕು ಒಪ್ಪಿಸುವುದು ತಪ್ಪಾಗಿದೆ ಎಂದು ವರದಿ ಸ್ಪಷ್ಟಪಡಿಸಿದೆ. ಇದಲ್ಲದೆ, ಕಂದಾಯ ದಾಖಲೆಗಳಲ್ಲಿ ಭೂ ಹಸ್ತಾಂತರದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂಬ ಸೂಚನೆಯನ್ನು ಪ್ರಾದೇಶಿಕ ಆಯುಕ್ತರು ನೀಡಿದ್ದಾರೆ.
ಸಮುದಾಯದ ಆಕ್ರೋಶ: ಸರ್ಕಾರ ತಕ್ಷಣ ಕ್ರಮಕೈಗೊಳ್ಳಲಿ
ಈ ಭೂಮಿ ಶಿಕ್ಷಣ ಉದ್ದೇಶಕ್ಕಾಗಿ ಮೀಸಲಾಗಿದ್ದರೂ, ಭೂಪರಿವರ್ತನೆ ಮತ್ತು ಬಡಾವಣೆ ಅನುಮೋದನೆಗೆ ಶೂಲ್ಕ ಪಾವತಿಸಿರುವ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಬಿಡಿಎ (BDA) ಹಾಗೂ ಕಂದಾಯ ಇಲಾಖೆ ಯಾವುದೇ ಅನುಮೋದನೆ ನೀಡಬಾರದು ಎಂದು ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಈ ಭೂಮಿಯನ್ನು ವೈಯಕ್ತಿಕ ಸ್ವಾರ್ಥಕ್ಕಾಗಿ ಬಳಸಲು ಅವಕಾಶ ಮಾಡಿಕೊಡಬಾರದು ಎಂಬ ಎಚ್ಚರಿಕೆಯನ್ನು ಅವರು ನೀಡಿದ್ದಾರೆ.
ಈ ಕುರಿತು ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿದ್ದು, ಸಚಿವ ಕೃಷ್ಣಬೈರೇಗೌಡ ಅವರು ಕಾನೂನು ಸಲಹೆ ಪಡೆದು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು. ಆದರೆ ಈ ಬಗ್ಗೆ ಸರ್ಕಾರದ ನಿರ್ಲಕ್ಷ್ಯವು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಟ್ರಸ್ಟ್ ಮುಖಂಡರು, ಸಮುದಾಯ ಪ್ರತಿನಿಧಿಗಳು ಮತ್ತು ಹಿತಾಸಕ್ತಿಯವರು ವಾಗ್ದಾಳಿ ನಡೆಸಿದ್ದಾರೆ.
“ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿಧಾನಸಭಾ ಚುನಾವಣೆ ಮೊದಲು ನಮ್ಮ ಸಮುದಾಯದವರನ್ನು ಪೆನ್ನು, ಪೇಪರ್ ಕೊಡಿ ಎಂದು ಕೇಳಿದ್ದರು. ಈಗ ಸಮುದಾಯವು ಅದನ್ನು ನೀಡಿದ ನಂತರ, ಅವರು ಈ ಭೂಮಿಯನ್ನು ಹೀಗೇ ಕೈಬಿಟ್ಟರೆ, ನಮ್ಮ ಹಿತಕ್ಕೆ ಮಾಡಿದ ದ್ರೋಹವೇ ಆಗುತ್ತದೆ” ಎಂದು ಟ್ರಸ್ಟ್ ಅಧ್ಯಕ್ಷ ಕೆಂಚಪ್ಪ ಗೌಡ ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಹೇಳಿಕೆ ನೀಡಿದರು.
ಸಮುದಾಯದ ಮುಖಂಡರು ಈ ಭೂಮಿಯನ್ನು ಕಾನೂನುಬದ್ಧವಾಗಿ ಶಿಕ್ಷಣ ಉದ್ದೇಶಕ್ಕಾಗಿ ಉಳಿಸಲು ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ನಾಯಕರು ಮೌನ ವಹಿಸಿದರೆ, ಭೂಮಿಯನ್ನು ಭೂಗಂಧೆಗಳ ದಬ್ಬಾಳಿಕೆಯಿಂದ ಉಳಿಸಲು ಸಮುದಾಯವೇ ಹೋರಾಟ ಮುಂದುವರಿಸುತ್ತದೆ ಎಂಬ ಎಚ್ಚರಿಕೆಯನ್ನು ಸಹ ನೀಡಲಾಗಿದೆ.
City Today News 9341997936
