
ಬೆಂಗಳೂರು, ಮಾರ್ಚ್ 10, 2025: ಉತ್ತಮ ಆರೋಗಭ್ಯಾಸಗಳಿಂದ ಮಾತ್ರ ದೀರ್ಘಾಯುಷ್ಯ ಮತ್ತು ಆರೋಗ್ಯವಂತ ಜೀವನ ಸಾಧ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಆಯೋಜಿಸಿದ್ದ “ಲಾಂಗಿವಿಟಿ ಇಂಡಿಯಾ ಕಾನ್ಫರೆನ್ಸ್” (ದೀರ್ಘಾಯುಷ್ಯ ಭಾರತ ಸಮ್ಮೇಳನ) ಉದ್ಘಾಟಿಸಿ ಮಾತನಾಡಿದರು.
ಸಮಾರಂಭದಲ್ಲಿ ಮಾತನಾಡಿದ ಅವರು, “ಇಂದಿನ ಆಹಾರ ಮತ್ತು ಜೀವನಶೈಲಿ ನಮಗೆ ಅನಾರೋಗ್ಯ ತರುತ್ತಿದೆ. ಎಷ್ಟು ವರ್ಷ ಬದುಕಿದ್ದೇವೆ ಎಂಬುದಕ್ಕಿಂತ, ಎಷ್ಟು ವರ್ಷ ಆರೋಗ್ಯದಿಂದ ಬದುಕುತ್ತಿದ್ದೇವೆ ಎಂಬುದೇ ಮುಖ್ಯ. ಇದಕ್ಕಾಗಿ ಪ್ರತಿಯೊಬ್ಬರೂ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳಬೇಕು. ದೀರ್ಘಾಯುಷ್ಯಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಸಂಶೋಧನೆ ಅಗತ್ಯ” ಎಂದು ಹೇಳಿದರು.
ವಿಜ್ಞಾನ ಮತ್ತು ಆರೋಗ್ಯಕರ ವಯಸ್ಸಾಗುವಿಕೆ
ಸಮ್ಮೇಳನದಲ್ಲಿ ಎನ್‌ಯುಎಸ್‌ನ ಆರೋಗ್ಯಕರ ದೀರ್ಘಾಯುಷ್ಯ ಕೇಂದ್ರದ ನಿರ್ದೇಶಕ ಬ್ರಿಯಾನ್ ಕೆನಡಿ ಮಾತನಾಡಿ, “ಭಾರತದ ಜನಸಂಖ್ಯೆ ದೊಡ್ಡದಾದರೂ, ಜನರು ಆರೋಗ್ಯಕರವಾಗಿ ವಯಸ್ಸಾಗಲು ಸಾಕಷ್ಟು ಸಂಶೋಧನೆ ಮತ್ತು ಜಾಗೃತಿಯ ಅಗತ್ಯವಿದೆ. ಪ್ರತಿಯೊಬ್ಬರೂ ವಯಸ್ಸಾಗುತ್ತಾರೆ, ಆದರೆ ಅವರು ಆ ಸಮಯದಲ್ಲಿ ಆರೋಗ್ಯವಾಗಿರಬೇಕಾಗಿದೆ. ಇದಕ್ಕಾಗಿ ವಿಜ್ಞಾನದ ಅಭಿವೃದ್ಧಿ ಮತ್ತು ಸಾರ್ವಜನಿಕ ಜಾಗೃತಿ ಬಹಳ ಮುಖ್ಯ” ಎಂದು ಅಭಿಪ್ರಾಯಪಟ್ಟರು.
ಐಐಎಸ್‌ಸಿ ಇಂಟರ್‌ಡಿಸಿಪ್ಲಿನರಿ ಸೈನ್ಸಸ್ ವಿಭಾಗದ ಡೀನ್ ನವಕಂತ್ ಭಟ್ ಮಾತನಾಡಿ, “ಭಾರತದಲ್ಲಿ ಮುಂದಿನ ದಿನಗಳಲ್ಲಿ ವಯಸ್ಸಾಗುವ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ. ಆದರೆ, ಪ್ರಸ್ತುತ ಆಹಾರ ಮತ್ತು ಜೀವನಶೈಲಿಯು ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತದೆ. ಅನುವಂಶಿಕ ಕಾಯಿಲೆಗಳು, ಪರಿಸರದ ಪರಿಣಾಮ, ವಯಸ್ಸಿನ ಆರೋಗ್ಯ ಸಮಸ್ಯೆಗಳನ್ನು ಹತೋಟಿಗೆ ತರಲು ತಜ್ಞರು ಈಗಿನಿಂದಲೇ ತೀರ್ಮಾನ ಕೈಗೊಳ್ಳಬೇಕು” ಎಂದು ಅಭಿಪ್ರಾಯಪಟ್ಟರು.
ಆರೋಗ್ಯಕರ ವಯಸ್ಸಾಗಲು ತಜ್ಞರಿಂದ ಚರ್ಚೆ
ಸಮ್ಮೇಳನದಲ್ಲಿ ಆರೋಗ್ಯಕರ ವಯಸ್ಸಾಗುವಿಕೆಗೆ ಅಗತ್ಯ ಕ್ರಮಗಳು, ಆರೋಗ್ಯ ಸಮಸ್ಯೆಗಳ ನಿರ್ವಹಣೆ ಮತ್ತು ಸವಾಲುಗಳ ಬಗ್ಗೆ ತಜ್ಞರು ಸಮಾಲೋಚಿಸಿದರು. ಸಭೆಯಲ್ಲಿ ಎಂಎಲ್‌ಸಿ ಮಂಜುನಾಥ ಭಂಡಾರಿ, ಐಐಎಸ್‌ಸಿ ನಿರ್ದೇಶಕ ಗೋವಿಂದನ್ ರಂಗರಾಜನ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
City Today News 9341997936
