
ಬೆಂಗಳೂರು, 10/03/2025 :
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಾದ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಲ್ಲಿ ವಿವಿಧ ಹುದ್ದೆಗಳ ಭರ್ತಿ ಹಾಗೂ ನೇಮಕಾತಿ ತಿದ್ದುಪಡಿ ಸಂಬಂಧ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ ಪೌರ ಸೇವಾ ನೌಕರರ ಸಂಘದ ರಾಜ್ಯಾಧ್ಯಕ್ಷ ಪ್ರಭಾಕರ್ ಅವರ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಪ್ರಮುಖ ಘೋಷಣೆ ಮಾಡಲಾಯಿತು.
ಪೌರಕಾರ್ಮಿಕರ 100% ಖಾಯಂಗೊಳಿಸುವಿಕೆ:
ರಾಜ್ಯದ ನೇರ ಪಾವತಿ, ದಿನಗೂಲಿ, ಗುತ್ತಿಗೆ ಮತ್ತು ಹೊರಗುತ್ತಿಗೆ ಪೌರಕಾರ್ಮಿಕರನ್ನು ಶೇ.100% ನೇರ ನೇಮಕಾತಿ ಮೂಲಕ ಖಾಯಂಗೊಳಿಸಲು ತಿದ್ದುಪಡಿ ಪ್ರಸ್ತಾವನೆ ಮಾಡಲಾಗಿದೆ. ಇದರಿಂದ ಗ್ರಾಮೀಣ/ಕನ್ನಡ ಮೀಸಲಾತಿ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗುವುದು.
ನೀರು ಸರಬರಾಜು ಸಹಾಯಕರ ನೇಮಕಾತಿ:
25-30 ವರ್ಷಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೀರು ಸರಬರಾಜು ಸಹಾಯಕರನ್ನು ಪೌರಕಾರ್ಮಿಕರ ವಿಶೇಷ ನೇಮಕಾತಿ ನಿಯಮದಡಿ ಖಾಯಂಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ಘನ ತ್ಯಾಜ್ಯ ನಿರ್ವಹಣೆಗೆ ಶಾಶ್ವತ ಚಾಲಕರ ನೇಮಕಾತಿ:
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಹೊಸ ವಾಹನಗಳ ಖರೀದಿಯೊಂದಿಗೆ ಶಾಶ್ವತ ವಾಹನ ಚಾಲಕರ ಹುದ್ದೆಗಳನ್ನು ಸೃಜಿಸಿ ನೇಮಕಾತಿ ಪ್ರಕ್ರಿಯೆ ಕೈಗೊಳ್ಳಲು ಒತ್ತಾಯಿಸಲಾಗಿದೆ.
ಅಕೌಂಟೆಂಟ್, ಪ್ರೋಗ್ರಾಮರ್ ಹುದ್ದೆಗಳ ಖಾಯಂಗೊಳಿಸುವಿಕೆ:
ಪಟ್ಟಣ ಪಂಚಾಯಿತಿಗಳಲ್ಲಿ ಖಾಯಂ ಅಕೌಂಟೆಂಟ್ ಹುದ್ದೆಗಳ ಕೊರತೆಯು ಬಗೆಹರಿಯದ ಕಾರಣ, ಈ ಹುದ್ದೆಗಳನ್ನು ಭರ್ತಿ ಮಾಡುವಂತೆ ಒತ್ತಾಯಿಸಲಾಗಿದೆ. ಜೂನಿಯರ್ ಮತ್ತು ಸೀನಿಯರ್ ಪ್ರೋಗ್ರಾಮರ್ ಹುದ್ದೆಗಳಲ್ಲಿ ಈಗಾಗಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ನೌಕರರನ್ನು ಖಾಯಂಗೊಳಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ವೃಂದ ಮತ್ತು ನೇಮಕಾತಿ ನಿಯಮಾವಳಿ ತಿದ್ದುಪಡಿ:
ಬಿಇ ಪದವೀಧರ ಸಹಾಯಕ ಕಾರ್ಯಪಾಲಕ ಅಭಿಯಂತರರಿಗೆ ಮುಂಬಡ್ತಿ ನೀಡುವಂತೆ ಹಾಗೂ ಮಹಾನಗರಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮದಲ್ಲಿ ಅಧೀಕ್ಷ ಅಭಿಯಂತರರ ಹುದ್ದೆಯವರೆಗೂ ಮುಂಬಡ್ತಿ ಅವಕಾಶ ಕಲ್ಪಿಸುವಂತೆ ಆಗ್ರಹಿಸಲಾಗಿದೆ.
ಸಾಮಾನ್ಯ ಸೇವಾ ಸೌಲಭ್ಯ ವಿಸ್ತರಣೆ:
ಕರ್ನಾಟಕ ಪೌರ ಸೇವಾ ನೌಕರರಿಗೆ ಕರ್ನಾಟಕ ನಾಗರೀಕ ಸೇವಾ ಅಧಿನಿಯಮ 1978 ಅನ್ವಯಿಸಿ, ಜಿಪಿಎಫ್, ಕೆ.ಜಿ.ಐಡಿ, ಆರೋಗ್ಯ ಸೇವಾ ಸೌಲಭ್ಯ ಮತ್ತು ಇತರ ಸೌಲಭ್ಯಗಳನ್ನು ವಿಸ್ತರಿಸಲು ಸರ್ಕಾರಕ್ಕೆ ಒತ್ತಾಯಿಸಲಾಗಿದೆ.
ಈ ಎಲ್ಲಾ ಪ್ರಸ್ತಾಪಗಳು ಪೌರ ಸೇವಾ ನೌಕರರ ಕಲ್ಯಾಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಮಾಡಲಾಗಿದ್ದು, ಸರ್ಕಾರ ಶೀಘ್ರವೇ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕೆಂದು ಸಂಘದ ಮುಖಂಡರು ಆಗ್ರಹಿಸಿದರು.
City Today News 9341997936
