
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘವು 2025ರ ಏಪ್ರಿಲ್ 4ರಂದು ಅರಮನೆ ಮೈದಾನದ ಪ್ರಿನ್ಸಸ್ ಪ್ರೈನ್ (ಗೇಟ್ ನಂ. 9) ನಲ್ಲಿ ರಾಜ್ಯ ಮಟ್ಟದ ಕಾರ್ಯಾಗಾರ ಹಾಗೂ ಬೃಹತ್ ಸಮಾವೇಶವನ್ನು ಆಯೋಜಿಸುತ್ತಿದೆ. ಈ ಸಮಾವೇಶದಲ್ಲಿ ಸುಮಾರು 30,000ಕ್ಕೂ ಹೆಚ್ಚು ನಿವೃತ್ತ ನೌಕರರು ಮತ್ತು ಕುಟುಂಬ ಪಿಂಚಣಿದಾರರು ಭಾಗವಹಿಸಲಿದ್ದಾರೆ ಎಂದು ಸಂಘದ ಅಧ್ಯಕ್ಷ ಡಾ. ಎಲ್. ಬೈರಪ್ಪ ತಿಳಿಸಿದ್ದಾರೆ.

ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ. ಬೈರಪ್ಪ, ನಿವೃತ್ತ ನೌಕರರ ದೀರ್ಘಕಾಲದ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಲು ಈ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾವೇಶವನ್ನು ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಮತ್ತು ಇತರ ಸಚಿವರು ಭಾಗವಹಿಸಲಿದ್ದಾರೆ.
ಪ್ರಮುಖ ಬೇಡಿಕೆಗಳು:
* 7ನೇ ವೇತನ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಬೇಕು.
* “ಸಂಧ್ಯಾ ಕಿರಣ” ಹೆಸರಿನ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆ ಜಾರಿಗೊಳಿಸಬೇಕು.
* 70-80 ವರ್ಷ ವಯೋಮಿತಿಯ ನಿವೃತ್ತ ನೌಕರರು ಮತ್ತು ಪಿಂಚಣಿದಾರರಿಗೆ ಮೂಲ ಪಿಂಚಣಿಯ 10% ಆರ್ಥಿಕ ನೆರವು ನೀಡಬೇಕು.
* ಜುಲೈ 1, 2022 ರಿಂದ ಜುಲೈ 31, 2024 ರವರೆಗೆ ನಿವೃತ್ತರಾದವರಿಗೆ ಗಳಿಕೆ ರಜೆ ನಗದೀಕರಣ, DCRG ಮತ್ತು ಕಮ್ಯುಟೇಶನ್ ಸೌಲಭ್ಯಗಳನ್ನು ಮಂಜೂರು ಮಾಡಬೇಕು.
“ಸರ್ಕಾರವು ನಿವೃತ್ತ ನೌಕರರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದೆ. ಎರಡು ವರ್ಷಗಳಿಂದ ನಗದು ರಹಿತ ಆರೋಗ್ಯ ಭಾಗ್ಯ ಯೋಜನೆಗೆ ಒತ್ತಾಯಿಸುತ್ತಿದ್ದರೂ ಪ್ರಯೋಜನವಾಗಿಲ್ಲ. 7ನೇ ವೇತನ ಆಯೋಗವು ‘ಸಂಧ್ಯಾ ಕಿರಣ’ ಎಂಬ ಹೊಸ ಯೋಜನೆಯನ್ನು ಶಿಫಾರಸು ಮಾಡಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು” ಎಂದು ಡಾ. ಬೈರಪ್ಪ ಆಗ್ರಹಿಸಿದರು.
ಈ ಸಮಾವೇಶವು ನಿವೃತ್ತ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲು ಒಂದು ವೇದಿಕೆಯಾಗಲಿದೆ. ಈ ಮೂಲಕ ನಿವೃತ್ತ ನೌಕರರ ಹಕ್ಕುಗಳನ್ನು ರಕ್ಷಿಸಲು ಸಂಘವು ಬದ್ಧವಾಗಿದೆ ಎಂದು ಅವರು ಹೇಳಿದರು.
