
ಬೆಂಗಳೂರು, ಮಾ. 28: ಕೆ.ಆರ್.ಪುರ ಐತಿಹಾಸಿಕ ಸಂತೆಯಲ್ಲಿ ಸುಂಕು ವಸೂಲಿಯಲ್ಲಿ ಪ್ರತಿ ತಿಂಗಳು ಸುಮಾರು 20 ಲಕ್ಷ ರೂ.ಗಳಷ್ಟು ಅವ್ಯವಹಾರ ನಡೆಯುತ್ತಿದೆ ಎಂದು ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟ (ರಿ) ಅಧ್ಯಕ್ಷ ಎಲ್. ಶ್ರೀನಿವಾಸ್ ಗಂಭೀರ ಆರೋಪ ಮಾಡಿದ್ದಾರೆ.
ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೆ.ಆರ್.ಪುರ ಸಂತೆಯಲ್ಲಿ 1.14 ಗುಂಟೆ ಪ್ರದೇಶಕ್ಕೆ ಸುಂಕು ವಸೂಲಾತಿ ಟೆಂಡರ್ ಕರೆಯಲಾಗಿದೆ. ಪ್ರತಿ ತಿಂಗಳು 9,81,700 ರೂ.ಗಳ ಟೆಂಡರ್ ಮೊತ್ತವನ್ನು ನಿಗದಿಪಡಿಸಲಾಗಿದೆ. ಆದರೆ, ಟೆಂಡರ್ 1.14 ಗುಂಟೆಗೆ ಸೀಮಿತವಾಗಿದ್ದರೂ, ಅದಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚುವರಿ ಪ್ರದೇಶದಲ್ಲಿ ಅಕ್ರಮವಾಗಿ ಸುಂಕು ವಸೂಲಿ ಮಾಡಲಾಗುತ್ತಿದೆ. ಈ ಅಕ್ರಮ ಹಣವನ್ನು ಪಟ್ಟಭದ್ರ ಹಿತಾಸಕ್ತಿಗಳು, ಅಧಿಕಾರಿಗಳು ಮತ್ತು ಟೆಂಡರ್ ದಾರರು ಹಂಚಿಕೊಳ್ಳುತ್ತಿದ್ದಾರೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ” ಎಂದು ಆರೋಪಿಸಿದರು.
ಈ ಅಕ್ರಮದ ವಿರುದ್ಧ ಸರಣಿ ಹೋರಾಟಗಳನ್ನು ನಡೆಸಲು ಸಂಘಟನೆ ಸಿದ್ಧವಾಗಿದೆ. ಕೆ.ಆರ್.ಪುರ ಸಂತೆಯಿಂದ ಗೋಣಿ ಚೀಲ ಧರಿಸಿ ಕಾಲ್ನಡಿಗೆ ಮೂಲಕ (ನಾಲ್ಕು ಜನ ಮಾತ್ರ) ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಶ್ರೀನಿವಾಸ್ ತಿಳಿಸಿದರು.
ಪಾದಯಾತ್ರೆ ವಿವರ:
* ದಿನಾಂಕ: 20-03-2025 ಗುರುವಾರದಂದು ವಲಯ ಆಯುಕ್ತರು, ಬಿಬಿಎಂಪಿ, ಮಹದೇವಪುರ ಕಚೇರಿಗೆ ಪಾದಯಾತ್ರೆ
* ದಿನಾಂಕ: 21-03-2025 ಶುಕ್ರವಾರದಂದು ಆಯುಕ್ತರು, ಬಿಬಿಎಂಪಿ ಪ್ರಧಾನ ಕಚೇರಿಗೆ ಪಾದಯಾತ್ರೆ
* ದಿನಾಂಕ: 24-03-2025 ಸೋಮವಾರದಂದು ಪೊಲೀಸ್ ಆಯುಕ್ತರು, ಬೆಂಗಳೂರು ಮಹಾನಗರ ಕಚೇರಿಗೆ ಪಾದಯಾತ್ರೆ
* ದಿನಾಂಕ: 25-03-2025 ಮಂಗಳವಾರದಂದು ಗೃಹ ಕಚೇರಿ, ಡಿ.ಕೆ. ಶಿವಕುಮಾರ್, ಉಪ ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ಉಸ್ತುವಾರಿ ಸಚಿವರ ಕಚೇರಿಗೆ ಪಾದಯಾತ್ರೆ
* ದಿನಾಂಕ: 26-03-2025 ಬುಧವಾರದಂದು ಗೃಹ ಕಚೇರಿ, ಡಾ. ಜಿ. ಪರಮೇಶ್ವರ್, ಗೃಹ ಸಚಿವರ ಕಚೇರಿಗೆ ಪಾದಯಾತ್ರೆ
* ದಿನಾಂಕ: 27-03-2025 ಗುರುವಾರದಂದು ಗೃಹ ಕಚೇರಿ, ಸಿದ್ದರಾಮಯ್ಯ, ಮುಖ್ಯಮಂತ್ರಿಗಳ ಕಚೇರಿಗೆ ಪಾದಯಾತ್ರೆ
ಪ್ರತಿದಿನ ಬೆಳಿಗ್ಗೆ 8 ಗಂಟೆಯಿಂದ ಪಾದಯಾತ್ರೆ ಆರಂಭವಾಗಲಿದೆ. ಈ ಅಕ್ರಮವನ್ನು ತಡೆಗಟ್ಟಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಶ್ರೀನಿವಾಸ್ ಒತ್ತಾಯಿಸಿದರು.
City Today News 9341997936
