
ಬೆಂಗಳೂರು: ಕರ್ನಾಟಕ ಸರ್ಕಾರದ ನೋಂದಣಿ ಇಲಾಖೆಯಲ್ಲಿ ಕಾವೇರಿ-2.0 ತಂತ್ರಾಂಶ ಜಾರಿಗೊಳಿಸಿದ ನಂತರ ಸಾರ್ವಜನಿಕರಿಗೆ Citizen Login ನೀಡಲಾಗಿದೆ. ಆದರೆ, ಇದರ ದುರುಪಯೋಗದಿಂದಾಗಿ ನೋಂದಣಿ ಪ್ರಕ್ರಿಯೆಯಲ್ಲಿ ಅನಧಿಕೃತ ವ್ಯಕ್ತಿಗಳು ತೊಂದರೆ ಉಂಟುಮಾಡುತ್ತಿದ್ದಾರೆ ಎಂದು ಅಧಿಕೃತ ಪತ್ರ ಬರಹಗಾರರ ಒಕ್ಕೂಟದ ಅಧ್ಯಕ್ಷ ಡಿ.ಕೆ. ಸಂಗಮೇಶ್ ಎಲಿಗಾರ್ ಆಕ್ಷೇಪ ವ್ಯಕ್ತಪಡಿಸಿದರು.
Citizen Login ಮೂಲಕ ಯಾವುದೇ ವ್ಯಕ್ತಿಯೂ ನೋಂದಣಿ ದಸ್ತಾವೇಜುಗಳನ್ನು ಅಪ್ಲೋಡ್ ಮಾಡಬಹುದಾಗಿದ್ದು, ಇದರ ಪರಿಣಾಮವಾಗಿ ಸೈಬರ್/ಡಿ.ಟಿ.ಪಿ. ಸೆಂಟರ್ಗಳ ಮೂಲಕ ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ತಪ್ಪು ರೀತಿಯಲ್ಲಿ ಅಪ್ಲೋಡ್ ಮಾಡಿ, ಆಸ್ತಿಗಳನ್ನು ಬೇರೆ ಇಂಡೆಕ್ಸ್ನಲ್ಲಿ ನೋಂದಾಯಿಸುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಇದರಿಂದ ಸರ್ಕಾರದ ಮುದ್ರಾಂಕ ಮತ್ತು ನೋಂದಣಿ ಶುಲ್ಕದ ಆದಾಯಕ್ಕೂ ಹಾನಿಯಾಗುತ್ತಿದೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮೀಣ ಭಾಗದ ರೈತರು ಮತ್ತು ಸಾಮಾನ್ಯ ಜನರು ಇ-ಮೇಲ್ ಅಥವಾ ಕಂಪ್ಯೂಟರ್ ಬಳಸುವ ಅನುಭವವಿಲ್ಲದೆCitizen Login ಬಳಸಲು ಪರದಾಡುತ್ತಿದ್ದಾರೆ. ಇದರಿಂದಾಗಿ ಅಧಿಕೃತ ಪತ್ರ ಬರಹಗಾರರ ಅವಶ್ಯಕತೆ ಇನ್ನಷ್ಟು ಹೆಚ್ಚಾಗಿದೆ.
ನೋಂದಣಿ ಕಾಯ್ದೆ, 1908ರ ಕಲಂ 80ಬಿ ಪ್ರಕಾರ, ಅನಧಿಕೃತ ವ್ಯಕ್ತಿಗಳು ದಸ್ತಾವೇಜುಗಳನ್ನು ತಯಾರಿಸುವುದು ಕಾನೂನುಬಾಹಿರ. ಆದರೂ, Citizen Login ಸೌಲಭ್ಯದಿಂದ ಅನಧಿಕೃತ ವ್ಯಕ್ತಿಗಳು ನೋಂದಣಿ ಪ್ರಕ್ರಿಯೆಗೆ ತೊಂದರೆ ಉಂಟುಮಾಡುತ್ತಿದ್ದಾರೆ.
ರಾಜ್ಯದಲ್ಲಿ ಸುಮಾರು 24,000 ಅಧಿಕೃತ ಪರವಾನಿಗೆ ಪಡೆದ ಪತ್ರ ಬರಹಗಾರರು ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಕುಟುಂಬ ಸದಸ್ಯರನ್ನು ಸೇರಿಸಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನರು ಈ ಉದ್ಯೋಗದ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, Citizen Login ವ್ಯವಸ್ಥೆಯಿಂದ ಪತ್ರ ಬರಹಗಾರರ ಉದ್ಯೋಗಕ್ಕೂ ಭದ್ರತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.
ಆಂಧ್ರಪ್ರದೇಶ ಮತ್ತು ತೆಲಂಗಾಣ ಮಾದರಿ ಅನುಸರಿಸಿ, ಪತ್ರ ಬರಹಗಾರರಿಗೆ ಪ್ರತ್ಯೇಕ “Deed Writer Login” ನೀಡಬೇಕು ಎಂದು ಒಕ್ಕೂಟದ ಮುಖಂಡರು ಸರ್ಕಾರವನ್ನು ಆಗ್ರಹಿಸಿದರು. ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ, ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ನೀಡಿರುವ “Vendor Login” ಪಧ್ಧತಿ ಮಾದರಿಯನ್ನು ಸಹ ಸರ್ಕಾರಕ್ಕೆ ಸಲ್ಲಿಸಲಾಗಿದೆ.
ಸರ್ಕಾರ Citizen Login ದುರುಪಯೋಗವನ್ನು ತಕ್ಷಣ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಮತ್ತು ನೋಂದಣಿ ಪ್ರಕ್ರಿಯೆಯಲ್ಲಿ ಅಧಿಕೃತ ಪತ್ರ ಬರಹಗಾರರ ಪಾತ್ರವನ್ನು ಬಲಪಡಿಸಬೇಕು ಎಂದು ಅಧ್ಯಕ್ಷರು, ಡಿ.ಕೆ. ಸಂಗಮೇಶ್ ಎಲಿಗಾರ್, ಎನ್ ನವೀನ್ ಕುಮಾರ್ – ಉಪಾಧ್ಯಕ್ಷರು, ಧರ್ಮರಾಜ್,ಕರಿಬಸಪ್ಪ,ಬಸವರಾಜ ಹಾಗೂ ಶಾಂತರಾಜ್ ಹಾಗೂ ಒಕ್ಕೂಟದ ಮುಖಂಡರು ಒತ್ತಾಯಿಸಿದರು.
City Today News 9341997936
