
ಬೆಂಗಳೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಹೆಚ್ಚುತ್ತಿರುವ ತೆರಿಗೆ ಮತ್ತು ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ತತ್ತರಿಸುತ್ತಿರುವ ದುರವಸ್ಥೆಯ ವಿರುದ್ಧ ಆಮ್ ಆದ್ಮಿ ಪಕ್ಷವು ರಾಜ್ಯಾದ್ಯಂತ ಬೃಹತ್ ಜಾಗೃತಿ ಅಭಿಯಾನ ನಡೆಸಲು ನಿರ್ಧರಿಸಿದೆ. ಈ ಅಭಿಯಾನವನ್ನು ಇದೇ ತಿಂಗಳ 5ರಿಂದ ಬೆಂಗಳೂರಿನಿಂದ ಪ್ರಾರಂಭಿಸಲಾಗುವುದು ಎಂದು ರಾಜ್ಯ ಕಾರ್ಯಧ್ಯಕ್ಷ ಸೀತಾರಾಮ್ ಗುಂಡಪ್ಪ ಅವರು ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು.
ರಾಜ್ಯ ಸರ್ಕಾರದ ನಿರ್ಧಾರಗಳ ವಿರುದ್ಧ ಆಕ್ರೋಶ
ಮುದ್ರಾಂಕ ಶುಲ್ಕ, ಆಸ್ತಿ ದರ, ವಾಹನ ನೋಂದಣಿ ಶುಲ್ಕ, ನಂದಿನಿ ಹಾಲಿನ ಬೆಲೆ, ದೇಶಿಯ ಮಧ್ಯದ ದರ, ಪೆಟ್ರೋಲ್-ಡೀಸೆಲ್ ತೆರಿಗೆ, ಎಲೆಕ್ಟ್ರಿಕ್ ವಾಹನಗಳ ತೆರಿಗೆ ವಿನಾಯಿತಿ ರದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳ ವ್ಯಾಸಂಗ ಶುಲ್ಕ, ಕುಡಿಯುವ ನೀರಿನ ದರ, ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸಾ ವೆಚ್ಚ, ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ಕೆಪಿಟಿಸಿಎಲ್ ನೌಕರರ ಪಿಂಚಣಿ, ನೂತನ ವಿದ್ಯುತ್ ಮೀಟರ್ ದರ, ರೈತರ ಪಂಪ್‌ಸೆಟ್ ವೆಚ್ಚ, ವಿದ್ಯುತ್ ದರ ಹಾಗೂ ಮೆಟ್ರೋ ಟಿಕೆಟ್ ದರ ಇತ್ಯಾದಿಗಳಲ್ಲಿ ರಾಜ್ಯ ಸರ್ಕಾರ ಭಾರೀ ಏರಿಕೆ ಮಾಡಿರುವುದರಿಂದ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೇಂದ್ರ ಸರ್ಕಾರದ ನಿರ್ಧಾರಗಳ ವಿರುದ್ಧ ಹೋರಾಟ
ಕೇಂದ್ರ ಸರ್ಕಾರವೂ ಸಹ ಟೋಲ್, ಔಷಧ, ಕಾರು, ವಿದೇಶಿ ಶಿಕ್ಷಣ, ವೀಸಾ ಶುಲ್ಕ, ಸಿಎನ್‌ಜಿ ಮೇಲಿನ ತೆರಿಗೆ ಹೆಚ್ಚಳ ಮಾಡಿದ್ದು, ಇದರಿಂದ ಜನಸಾಮಾನ್ಯರು ಜೀವನ ಸಾಗಿಸಲು ಹಿಂಸೆಯಾಗುತ್ತಿದೆ ಎಂದು ಗುಂಡಪ್ಪ ಆರೋಪಿಸಿದರು.
ಮನೆಮನೆ ಜಾಗೃತಿ ಅಭಿಯಾನ
ಈ ನಿರ್ಧಾರಗಳ ವಿರುದ್ಧವಾಗಿ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಮನೆಮನೆಗೆ ತೆರಳಿ ಜನರಲ್ಲಿ ಜಾಗೃತಿ ಮೂಡಿಸುವ ಬೃಹತ್ ಅಭಿಯಾನವನ್ನು ರಾಜ್ಯದಾದ್ಯಂತ ಕೈಗೊಳ್ಳಲಿದ್ದಾರೆ. ಇದೇ ತಿಂಗಳ 5ರಿಂದ ಬೆಂಗಳೂರು ನಗರದಿಂದ ಈ ಅಭಿಯಾನಕ್ಕೆ ಕಿಕ್‌ಸ್ಟಾರ್ಟ್ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಎಸ್, ಬೆಂಗಳೂರು ನಗರ ಅಧ್ಯಕ್ಷ ಸತೀಶ್ ಕುಮಾರ್, ಉಷಾ ಮೋಹನ್, ಜಗದೀಶ್ ಚಂದ್ರ, ಅನಿಲ್ ನಾಚಪ್ಪ ಸೇರಿದಂತೆ ಹಲವಾರು ನಾಯಕರು ಭಾಗವಹಿಸಿದ್ದರು.
City Today News 9341997936
