ಹಿಂದುಳಿದ ವರ್ಗಗಳ ಮೀಸಲಾತಿ ಮರುವರ್ಗೀಕರಣ ಶಿಫಾರಸ್ಸು: ಪ್ರವರ್ಗ–1ರ ಜಾತಿಗಳಿಗೆ ಅನ್ಯಾಯ ಎಂದು ಒಕ್ಕೂಟದ ಆಕ್ಷೇಪ

ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗದ ಶಿಫಾರಸ್ಸಿನಂತೆ ಮೀಸಲಾತಿಯನ್ನು ಶೇಕಡಾ 32 ರಿಂದ ಶೇಕಡಾ 51ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವ ಬಗ್ಗೆ ಗಂಭೀರ ಆಕ್ಷೇಪ ವ್ಯಕ್ತವಾಗಿದೆ. ಮಾಜಿ ನ್ಯಾಯಮೂರ್ತಿ ಜಯಪ್ರಕಾಶ್ ಹೆಗಡೆ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ಸಿದ್ಧಪಡಿಸಿರುವ ವರದಿಯಲ್ಲಿ ಹಿಂದುಳಿದ ಸಮುದಾಯಗಳನ್ನು ಆರು ಪ್ರವರ್ಗಗಳಾಗಿ ಮರುವರ್ಗೀಕರಿಸಿದ್ದು, ಇದರಲ್ಲಿ ಹೊಸದಾಗಿ ‘ಪ್ರವರ್ಗ–1ಬಿ’ಯನ್ನು ಸೇರಿಸಲಾಗಿದೆ.

ಈ ಹಿಂದಿನ ಆಯೋಗಗಳಾದ ಎಲ್.ಜಿ. ಹಾವನೂರು, ವೆಂಕಟಸ್ವಾಮಿ, ಓ. ಚಿನ್ನಪ್ಪರೆಡ್ಡಿ, ರವಿವರ್ಮಕುಮಾರ್, ದ್ವಾರಕಾನಾಥ್ ಮತ್ತು ಶಂಕರಪ್ಪ ನೇತೃತ್ವದ ಆಯೋಗಗಳು ಮರುವರ್ಗೀಕರಣದಲ್ಲಿ ಇಂತಹ ಶಿಫಾರಸ್ಸುಗಳನ್ನು ನೀಡಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಆಯೋಗವು ‘ಕೆನೆಪದರ ನೀತಿ’ ಹಾಗೂ ಆದಾಯ ಮಿತಿ ಅಳವಡಿಸುವುದನ್ನು ಶಿಫಾರಸ್ಸು ಮಾಡಿರುವುದು, ಪ್ರವರ್ಗ–1ರ ಅತ್ಯಂತ ಹಿಂದುಳಿದ ಸಮುದಾಯಗಳಿಗೆ ಅನ್ಯಾಯವಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಮತ್ತು ಪ್ರಧಾನ ಕಾರ್ಯದರ್ಶಿ ಎ.ವಿ. ಲೋಕೇಶಪ್ಪ ಹೇಳಿದರು.

ಪ್ರಸ್ತುತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇಕಡಾ 24.1ರಷ್ಟು ಮೀಸಲಾತಿಯನ್ನು ಯಥಾ ಸ್ಥಿತಿಯಲ್ಲಿ ಮುಂದುವರೆಸಲಾಗಿದೆ. ಆದರೆ ಪ್ರವರ್ಗ–1ರ ಜಾತಿಗಳ ಪೈಕಿ ಅತೀ ಹಿಂದುಳಿದ 147 ಜಾತಿಗಳಿಗೆ ಕೆನೆಪದರ ನೀತಿಯನ್ನು ಅನ್ವಯಿಸಲು ಹಾಗೂ ಆದಾಯ ಮಿತಿಯನ್ನು ವಿಧಿಸಲು ಶಿಫಾರಸ್ಸು ಮಾಡಲಾಗಿದೆ. ಈ ಕ್ರಮ ಅತೀ ಹಿಂದುಳಿದ ಸಮುದಾಯಗಳ ಹಕ್ಕುಗಳಿಗೆ ಧಕ್ಕೆಯಾಗಲಿದೆ ಎಂಬುದಾಗಿ ಅವರು ಅಭಿಪ್ರಾಯಪಟ್ಟರು.

ಅಲ್ಲದೆ, ಮುಸ್ಲಿಂ ಜಾತಿಗಳು ಹಾಗೂ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ಪರಿಶಿಷ್ಟ ಜಾತಿಯವರನ್ನು ಪ್ರವರ್ಗ–1ರಲ್ಲಿ ಇರಿಸಿರುವುದೂ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ. ಈ ಕುರಿತು ನೀಡಲಾದ ಮನವಿಗೆ ಆಯೋಗ ಯಾವುದೇ ಪ್ರತಿಕ್ರಿಯೆ ನೀಡದೆ ಅವರನ್ನೇ ಪ್ರವರ್ಗ–1ರಲ್ಲಿ ಉಳಿಸಿರುವುದು ವಿವಾದಾತ್ಮಕವಾಗಿದೆ.

ಇದರ ವಿರುದ್ಧವಾಗಿ, ಮಾಧ್ಯಮದ ಮುಖಾಂತರ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿ ಅವರಲ್ಲಿ ಹಳೆಯ ನೀತಿಯನ್ನೇ ಮುಂದುವರೆಸಬೇಕು, ಯಾವುದೆ ಆದಾಯ ಮಿತಿ ಅಥವಾ ಕೆನೆಪದರ ನೀತಿಯನ್ನೂ ಅಳವಡಿಸಬಾರದು ಎಂದು ಒಕ್ಕೂಟ ಮನವಿ ಸಲ್ಲಿಸಿದೆ. ಜೊತೆಗೆ, ಅತೀ ಹಿಂದುಳಿದ ಸಮುದಾಯಗಳಿಗೆ ಶೇಕಡಾ 8 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿ, ಅವರ ಹಕ್ಕುಗಳನ್ನು ಕಾಯ್ದುಕೊಳ್ಳಬೇಕು ಎಂಬುದಾಗಿ ಒತ್ತಾಯಿಸಿದೆ.

ಈ ಕುರಿತು ಪ್ರೆಸ್ ಕ್ಲಬ್ ಆಫ್ ಬೆಂಗಳೂರುನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಒಕ್ಕೂಟದ ಮುಖಂಡರು ಪತ್ರಕರ್ತರೊಂದಿಗೆ ಮಾತನಾಡಿದರು.

City Today News 9341997936

Leave a comment

This site uses Akismet to reduce spam. Learn how your comment data is processed.