ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯಗಳ ಸಮಗ್ರ ಅಭಿವೃದ್ಧಿಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕು: ಒಕ್ಕೂಟದ ಆಗ್ರಹ

ಬೆಂಗಳೂರು: ರಾಜ್ಯದ ಹಿಂದುಳಿದ ವರ್ಗದ ಪ್ರವರ್ಗ-1ಕ್ಕೆ ಸೇರಿದ ಅಲೆಮಾರಿ ಹಾಗೂ ಅರೆ ಅಲೆಮಾರಿ ಜನಾಂಗದ ಸಮುದಾಯಗಳು ಹಲವು ವರ್ಷಗಳಿಂದ ಬೀದಿಬದಿಗಳು ಹಾಗೂ ಖಾಲಿ ಸರ್ಕಾರಿ ಜಾಗಗಳಲ್ಲಿ ಗುಡಿಸಲು-ಡೇರೆಗಳಲ್ಲಿ ವಾಸವಿದ್ದು, ಸೂಜಿ-ದಾರ, ಪಿನ್ನು, ಬೀಗ ರಿಪೇರಿ, ಬಾಂಡೆ ವ್ಯಾಪಾರ, ಧಾರ್ಮಿಕ ಭಿಕ್ಷಾಟನೆ, ಭವಿಷ್ಯವಾಣಿ, ಗಿಣಿ ಭವಿಷ್ಯ, ಮೀನುಗಾರಿಕೆ, ಬಲೆ ಹೆಣೆದು ಮಾರಾಟ, ದನ-ಮೇಕೆ ಸಾಕಾಣಿಕೆ ಇತ್ಯಾದಿ ಮೂಲಕ ತಮ್ಮ ಜೀವನ ನಿರ್ವಹಿಸುತ್ತಿದ್ದಾರೆ. ಇವರು ಅತ್ಯಂತ ಕಷ್ಟಕರ ಹಾಗೂ ಶೋಚನೀಯ ಪರಿಸ್ಥಿತಿಯಲ್ಲಿ ಬದುಕು ಸಾಗಿಸುತ್ತಿರುವ ಹಿನ್ನೆಲೆಯಲ್ಲಿ, ಈ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ತ್ವರಿತ ಕ್ರಮ ಕೈಗೊಳ್ಳಬೇಕೆಂದು ಅಲೆಮಾರಿ ಹಾಗೂ ಅರೆ ಅಲೆಮಾರಿ ಸಮುದಾಯ ಒಕ್ಕೂಟ ಒತ್ತಾಯಿಸಿದೆ.

ಈ ಕುರಿತಂತೆ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಮಂಗಳೂರು ಮೂಲದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ರಾಜ್ಯಾಧ್ಯಕ್ಷ ಪ್ರಕಾಶ್ ಎಂ. (ಬೆಂಗಳೂರು), ಪ್ರಧಾನ ಕಾರ್ಯದರ್ಶಿ ಪ್ರತಾಪ್ ಕುಮಾರ್ ಓ. (ಚಿತ್ರದುರ್ಗ), ಪ್ರಧಾನ ಸಂಚಾಲಕ ಶ್ರೀನಿವಾಸ ಕಟ್ಟಿಮನಿ (ಕೊಪ್ಪಳ), ಗೌರವ ಸಲಹೆಗಾರ ಬಿ.ಎನ್. ನಾರಾಯಣಸ್ವಾಮಿ (ಬೆಂಗಳೂರು) ಹಾಗೂ ಜಿಲ್ಲಾ ಘಟಕ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಒಕ್ಕೂಟದಿಂದ ಪ್ರಸ್ತಾಪಿಸಲಾದ ಪ್ರಮುಖ ಬೇಡಿಕೆಗಳು ಹೀಗಿವೆ:

1. ನೆಲಮಾಲಿಕೆ ಹಕ್ಕು:

ಕಳೆದ 10 ವರ್ಷಗಳಿಂದ ಸರ್ಕಾರಿ ಜಾಗಗಳಲ್ಲಿ ವಾಸಿಸುತ್ತಿರುವ ಅಲೆಮಾರಿ ಕುಟುಂಬಗಳಿಗೆ ಆ ಜಾಗಗಳನ್ನು ಪಹಣಿ ಪತ್ರದ ಆಧಾರದ ಮೇಲೆ ಹಕ್ಕು ನೀಡಬೇಕು.

ಈ ಸಮುದಾಯದವರಿಗಾಗಿ ರುದ್ರಭೂಮಿಗಾಗಿ ಸರ್ಕಾರಿ ಜಾಗವನ್ನು ಮೀಸಲಿಡಬೇಕು.



2. ಸಮುದಾಯ ಸೌಕರ್ಯಗಳು ಹಾಗೂ ಶಿಕ್ಷಣ:

ಅಲೆಮಾರಿ ಜನಾಂಗವಾಸವಿರುವ ಜಿಲ್ಲೆಗಳಲ್ಲಿ ಸಮುದಾಯ ಭವನಗಳನ್ನು ನಿರ್ಮಿಸಬೇಕು.

ಮಕ್ಕಳಿಗಾಗಿ ವಸತಿ ಶಾಲೆಗಳನ್ನು ಪ್ರಾರಂಭಿಸಬೇಕು.

ಖಾಸಗಿ ಹಾಗೂ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಈ ಮಕ್ಕಳಿಗೆ ನೇರ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು.



3. ದಾಖಲೆಗಳು ಹಾಗೂ ಪ್ರಮಾಣಪತ್ರಗಳು:

ವಿದ್ಯಾರ್ಥಿಗಳ ವರ್ಗಾವಣೆ ಪತ್ರ, ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಲ್ಲಿ ಜಾತಿ ಮತ್ತು ಪ್ರವರ್ಗದ ಸ್ಪಷ್ಟ ಉಲ್ಲೇಖ ಇರಬೇಕು.

ಪಡಿತರ ಚೀಟಿ ಸೇರಿದಂತೆ ಎಲ್ಲ ಸರ್ಕಾರಿ ದಾಖಲೆಗಳಿಗಾಗಿ ವಿಶೇಷ ಕೋಶ ಸ್ಥಾಪಿಸಬೇಕು.



4. ಶೈಕ್ಷಣಿಕ ಮೀಸಲಾತಿ ಮತ್ತು ಅವಕಾಶಗಳು:

NEET ಮತ್ತು CET ಪರೀಕ್ಷೆಗಳಲ್ಲಿ ಈ ಸಮುದಾಯದವರಿಗೆ SC/ST ವಿದ್ಯಾರ್ಥಿಗಳಿಗೆ ಇರುವ ಅವಕಾಶಗಳನ್ನು ನೀಡಬೇಕು.



5. ನಿಗಮ ಹಾಗೂ ಆಯೋಗ ರಚನೆ:

ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನು ಕೂಡಲೇ ನೇಮಿಸಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕು.

ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಸ್ಥಿತಿಗತಿ ಅಧ್ಯಯನ ಮತ್ತು ಅಭಿವೃದ್ಧಿಗಾಗಿ ಅಲೆಮಾರಿ ಆಯೋಗವನ್ನು ಶೀಘ್ರದಲ್ಲೇ ಪರಿಣಾಮಕಾರಿಯಾಗಿ ರಚಿಸಬೇಕು.



6. ಆಯವ್ಯಯದ ಅಂಶಗಳ ಅನುಷ್ಠಾನ:

2024-25ನೇ ಸಾಲಿನ ರಾಜ್ಯ ಬಜೆಟ್‌ನ ಪುಟ ಸಂಖ್ಯೆ 14 ರಲ್ಲಿನ ಚುಕ್ಕೆ ಗುರುತು 2 ಮತ್ತು 5ರಲ್ಲಿ ಅಲೆಮಾರಿ ಸಮುದಾಯದ ಅಭಿವೃದ್ಧಿಗೆ ಸೂಚಿಸಿದ ಕ್ರಮಗಳನ್ನು ತಕ್ಷಣವೇ ಜಾರಿಗೆ ತರಬೇಕು.




“ಈ ಎಲ್ಲ ಬೇಡಿಕೆಗಳು ಹಲವಾರು ವರ್ಷಗಳಿಂದ ಅನುದಿಗೊಂಡಿರುವ ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ನ್ಯಾಯಬದ್ಧ ಹಕ್ಕುಗಳನ್ನು ಪರಿಹರಿಸಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ಒಕ್ಕೂಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.