ಸಿ.ಇ.ಟಿ. ಪರೀಕ್ಷೆಯಲ್ಲಿ ಬ್ರಾಹ್ಮಣ ವಿದ್ಯಾರ್ಥಿಗಳ ಯಜ್ಞೋಪವೀತ ಕತ್ತರಿಸಿದ ಘಟನೆ ಖಂಡನೀಯಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯಿಂದ ತೀವ್ರ ಆಕ್ರೋಶ – ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಬೆಂಗಳೂರು: ಶಿವಮೊಗ್ಗ, ತೀರ್ಥಹಳ್ಳಿ ಹಾಗೂ ಬೀದರ್ ನಗರಗಳಲ್ಲಿ ನಡೆದ ಸಿ.ಇ.ಟಿ. ಪರೀಕ್ಷೆಯಲ್ಲಿ ಭಾಗವಹಿಸಿದ್ದ ಬ್ರಾಹ್ಮಣ ಸಮುದಾಯದ ಕೆಲವು ವಿದ್ಯಾರ್ಥಿಗಳಿಂದ ಧಾರ್ಮಿಕ ಚಿಹ್ನೆಯಾದ ಯಜ್ಞೋಪವೀತ (ಜನಿವಾರ) ಅನ್ನು ಪರೀಕ್ಷಾಧಿಕಾರಿಗಳು ಬಲವಂತವಾಗಿ ತೆಗೆದು ಹಾಕಿದ ಘಟನೆಗೆ ಸಂಬಂಧಿಸಿದಂತೆ ಆಕ್ರೋಶ ವ್ಯಕ್ತವಾಗಿದೆ.

ಪ್ರಕರಣ ಸಂಬಂಧ ಶಿವಮೊಗ್ಗ ಮತ್ತು ಬೀದರ್‌ನಲ್ಲಿನ ಬ್ರಾಹ್ಮಣ ಮುಖಂಡರು ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ಈ ಸಂಬಂಧ ಇಂದು ಬೆಂಗಳೂರಿನ ಪತ್ರಿಕಾಗೋಷ್ಠಿಯಲ್ಲಿ ಮಹಾಸಭಾಧ್ಯಕ್ಷ ಎಸ್. ರಘುನಾಥ್ ಮಾತನಾಡಿದರು.

“ಇದು ನಮ್ಮ ಧರ್ಮ, ಸಂಸ್ಕೃತಿಯ ಮೇಲೆ ನಡೆದ ನಿರ್ದಯವಾದ ದಾಳಿ. ಇದನ್ನು ನಾವು ಸುಲಭವಾಗಿ ಮನ್ನಣೆ ನೀಡುವುದಿಲ್ಲ. ತಪ್ಪಿತಸ್ಥರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಹಾಗೂ ಸರ್ಕಾರ ಕ್ಷಮೆ ಕೇಳಬೇಕು,” ಎಂದು ಅವರು ಹೇಳಿದರು.

ಮಹಾಸಭೆ ಮುಕ್ತಾಯವಾಗಿ ಈ ಬೇಡಿಕೆಗಳನ್ನು ಮುಂದಿಟ್ಟಿದೆ:

ಸಿ.ಇ.ಟಿ. ಪರೀಕ್ಷಾಧಿಕಾರಿಗಳನ್ನು ತಕ್ಷಣವೇ ಸೇವೆಯಿಂದ ಅಮಾನತು ಮಾಡಬೇಕು.

ದೌರ್ಜನ್ಯಕ್ಕೊಳಗಾದ ವಿದ್ಯಾರ್ಥಿಗಳೆದುರು ಬೇಷರತ್ ಕ್ಷಮೆ ಕೇಳಬೇಕು.

ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಮಾರ್ಗಸೂಚಿ ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು.

ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಬೇಕು.

ತನಿಖೆ ನಡೆಸಿದ ನಂತರ ಮಾಹಿತಿ ಮಹಾಸಭೆಗೆ ನೀಡಬೇಕು.


ಜಾತಿ ಜನಗಣತಿಯಲ್ಲೂ ಬ್ರಾಹ್ಮಣ ಸಮುದಾಯದ ವಿರುದ್ಧ ಅಸಮಾನತೆ?
ಕಾಂತರಾಜ ಆಯೋಗ ನೀಡಿರುವ ವರದಿಯಲ್ಲಿ ಬ್ರಾಹ್ಮಣರ ಸಂಖ್ಯೆಯನ್ನು ಕೇವಲ 2.98% ಎಂದು ತೋರಿಸಲಾಗಿದೆ. ಆದರೆ ಈ ಜನಗಣತಿ ವೈಜ್ಞಾನಿಕವಾಗಿ ನಡೆದಿಲ್ಲ ಎಂಬ ಶಂಕೆ ಮಹಾಸಭೆಯವರಿಗೆ ವ್ಯಕ್ತವಾಗಿದೆ. “ಬಹುತೇಕ ಮನೆಗಳನ್ನು ಸಂಪರ್ಕಿಸಲಿಲ್ಲ, ಸರಿಯಾದ ಪದ್ದತಿಯಲ್ಲಿ ಸಮೀಕ್ಷೆ ನಡೆದಿಲ್ಲ. ಈ ವರದಿ ನಮ್ಮ ಸಮುದಾಯದ ಪರಿಗೆ ಅಪಮಾನವಾಗಿದ್ದು, ತಿರಸ್ಕರಿಸಲಾಗಬೇಕು,” ಎಂದು ರಘುನಾಥ್ ಹೇಳಿದರು.

ಈ ಹಿನ್ನೆಲೆಯಲ್ಲಿ ಬ್ರಾಹ್ಮಣರ ಜನಗಣತಿಯನ್ನು ವೈಜ್ಞಾನಿಕವಾಗಿ ಮತ್ತೊಮ್ಮೆ ನಡೆಸಬೇಕೆಂದು ಮಹಾಸಭೆ ಸರ್ಕಾರವನ್ನು ಒತ್ತಾಯಿಸಿದೆ.

City Today News 9341997936

Leave a comment

This site uses Akismet to reduce spam. Learn how your comment data is processed.