
ಬೆಂಗಳೂರು: ಹಿರಿಯ ವಕೀಲ ಹಾಗೂ ಭಾರತೀಯ ವಕೀಲರ ಪರಿಷತ್ತಿನ ಮಾಜಿ ಅಧ್ಯಕ್ಷರಾಗಿರುವ ಶ್ರೀ ಸದಾಶಿವ ರೆಡ್ಡಿಯವರ ಮೇಲೆ ದಿನಾಂಕ 16 ಏಪ್ರಿಲ್ 2025ರಂದು ಅವರ ಕಚೇರಿಯಲ್ಲಿ ನಡೆದ ಭೀಕರ ಹಲ್ಲೆ ಮತ್ತು ದಾಳಿಗೆ ಖಂಡನೆ ವ್ಯಕ್ತಪಡಿಸಲು, ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಬೆಂಗಳೂರು ವಕೀಲರ ಸಂಘದ ಸಹಯೋಗದೊಂದಿಗೆ ದಿನಾಂಕ 21 ಏಪ್ರಿಲ್ 2025ರಂದು ಮೌನ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಂಡಿತು.
ಈ ಮೆರವಣಿಗೆ ಬೆಳಿಗ್ಗೆ 11.00 ಗಂಟೆಗೆ ರಾಜ್ಯ ವಕೀಲರ ಪರಿಷತ್ತಿನ ಕಚೇರಿಯಿಂದ ಪ್ರಾರಂಭಗೊಂಡು ಸಿಟಿ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಅಂತ್ಯವಾಯಿತು. ಮೆರವಣಿಗೆಯಲ್ಲಿ ಭಾಗವಹಿಸಿದ ನೂರಾರು ವಕೀಲರು ತಮ್ಮ ಬಲಗೈ ತೋಳಿಗೆ ಕೆಂಪು ಪಟ್ಟಿಯನ್ನು ಧರಿಸಿ, ಶಾಂತಿಯುತವಾಗಿ ಈ ಅಮಾನವೀಯ ದಾಳಿಯ ವಿರುದ್ಧ ತೀವ್ರ ಖಂಡನೆ ವ್ಯಕ್ತಪಡಿಸಿದರು.

ಈ ಮೌನ ಪ್ರತಿಭಟನೆಯಲ್ಲಿ ಪರಿಷತ್ತಿನ ಅಧ್ಯಕ್ಷ ಶ್ರೀ ಮಿಟ್ಟಲಕೋಡ ಎಸ್.ಎಸ್., ಉಪಾಧ್ಯಕ್ಷ ಶ್ರೀ ವಿನಯ್ ಬಿ. ಮಂಗಳೇಕರ್ ಮತ್ತು ಸದಸ್ಯರಾದ ಮುನಿಯಪ್ಪ, ಕೆ.ಬಿ. ನಾಯ್ಡು, ಜಿ.ಎಂ. ಅನಿಲ್ ಕುಮಾರ್, ಎಲ್. ಶ್ರೀನಿವಾಸ ಬಾಬು, ಎಚ್.ಎಲ್. ವಿಶಾಲ ರಘು, ಆರ್. ರಾಜಣ್ಣ, ಬಿ.ವಿ. ಶ್ರೀನಿವಾಸ್, ಗೌತಮ್ ಚಂದ್ ಎಸ್.ಎಫ್., ಆಸಿಫ್ ಅಲಿ ಎಸ್.ಎಚ್., ಎನ್. ಶಿವಕುಮಾರ್, ಎನ್. ಮಧುಸೂದನ್ ಸೇರಿ ಹಲವಾರು ಪ್ರಮುಖರು ಭಾಗವಹಿಸಿದರು.
ಅದೇ ರೀತಿ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಶ್ರೀ ವಿವೇಕ್ ಎಸ್. ರೆಡ್ಡಿ, ಕಾರ್ಯದರ್ಶಿ ಶ್ರೀ ಪ್ರವೀಣ್ ಗೌಡ, ಉಪಾಧ್ಯಕ್ಷ ಶ್ರೀ ಗಿರೀಶ್ ಕುಮಾರ್ ಮತ್ತು ಸಂಘದ ಇತರ ಪದಾಧಿಕಾರಿಗಳೂ ಈ ಮೌನ ಮೆರವಣಿಗೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

ಈ ಸಂದರ್ಭದಲ್ಲಿ ರಾಜ್ಯ ವಕೀಲರ ಪರಿಷತ್ತಿನ ಪರವಾಗಿ ಅಧ್ಯಕ್ಷರಾದ ಶ್ರೀ ಮಿಟ್ಟಲಕೋಡ ಎಸ್.ಎಸ್. ಅವರು ಮಾತನಾಡಿ, “ಶ್ರೀ ಸದಾಶಿವ ರೆಡ್ಡಿಯವರ ಮೇಲೆ ನಡೆದ ಹಲ್ಲೆ ಅತ್ಯಂತ ಖಂಡನೀಯ. ಈ ಅಮಾನವೀಯ ಘಟನೆಯನ್ನು ಪರಿಷತ್ತು ತೀವ್ರವಾಗಿ ಖಂಡಿಸುತ್ತಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಗೃಹ ಸಚಿವರಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ನ್ಯಾಯಾಂಗ ತನಿಖೆ ಮೂಲಕ ನ್ಯಾಯ ಲಭಿಸಬೇಕು ಮತ್ತು ಇಂಥ ಘಟನೆಗಳು ಪುನರಾವೃತಿಯಾಗದಂತೆ ಕ್ರಮ ಕೈಗೊಳ್ಳಬೇಕು” ಎಂದು ಹೇಳಿದರು.
ಈ ಕರೆಗೆ ಸ್ಪಂದಿಸಿ ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ ರಾಜ್ಯದ ಎಲ್ಲಾ ವಕೀಲರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳಿಗೆ ಪರಿಷತ್ತು ಹೃತ್ಪೂರ್ವಕ ಅಭಿನಂದನೆ ಸಲ್ಲಿಸಿದೆ.
City Today News 9341997936
