
ಬೆಂಗಳೂರು: ಇತ್ತೀಚೆಗಷ್ಟೇ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ನೇತೃತ್ವದಲ್ಲಿ ತಯಾರಾದ ಜಾತಿಗಣತಿ ವರದಿಯನ್ನು ನಾಥಪಂಥ ಜೋಗಿ ಮಹಾಸಭಾ ತಿರಸ್ಕರಿಸಿದ್ದು, ರಾಜ್ಯದ ನಿಜವಾದ ಜೋಗಿ ಜನಸಂಖ್ಯೆಯನ್ನು ತೋರಿಸದೆ ತಪ್ಪು ಅಂಕಿ ಅಂಶಗಳನ್ನು ಒಳಗೊಂಡಿದೆ ಎಂದು ಆರೋಪಿಸಿದೆ.
ಮಹಾಸಭೆಯ ಅಧ್ಯಕ್ಷ ಹೆಚ್.ಎಸ್. ಕುಮಾರಸ್ವಾಮಿ, ಗೌರವಾಧ್ಯಕ್ಷ ವಿಜಯಕುಮಾರ್ ಕುಲಶೇಖರ್, ಮಾಜಿ ಅಧ್ಯಕ್ಷ ಕೆ.ಎನ್.ರಾಜಶೇಖರ ಜೋಗಿ ಹಾಗೂ ಪ್ರಧಾನ ಕಾರ್ಯದರ್ಶಿ ಗಣೇಶ ಪ್ರಸಾದ್ ಅವರು ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
“ಕರ್ನಾಟಕದಲ್ಲಿ ಸುಮಾರು 3 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಜೋಗಿ ಜನಾಂಗವನ್ನು ಕೇವಲ 25,546 ಎಂದು ವರದಿಯಲ್ಲಿ ಸೂಚಿಸಿರುವುದು ಹಾಸ್ಯಾಸ್ಪದವಾಗಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲು ಸಾಧ್ಯವಿಲ್ಲ. 1931ರ ಮೈಸೂರು ರಾಜ್ಯದ ಜಾತಿಗಣತಿಯಲ್ಲಿ 14,909 ಜೋಗಿ ಜನಸಂಖ್ಯೆ ದಾಖಲಾಗಿತ್ತು. ಆದರೆ 94 ವರ್ಷಗಳ ನಂತರವೂ ಅಂಕಿ ಅಂಶಗಳು ವೈಜ್ಞಾನಿಕತೆ ಇಲ್ಲದ ರೀತಿಯಲ್ಲಿ ನೀಡಲಾಗಿದೆ” ಎಂದು ಅವರು ಹೇಳಿದರು.
ಅತಿಹಿಂದುಳಿದ ವರ್ಗ-1ರ ಅಂತರ್ಗತ ಜೋಗಿ ಜನಾಂಗವು 46 ಅಲೆಮಾರಿ ಮತ್ತು ಅರೆಅಲೆಮಾರಿ ಜಾತಿಗಳಲ್ಲಿ ಒಂದು. ಈ ಜನಾಂಗಕ್ಕೆ ಸರ್ಕಾರದಿಂದ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ಸಹಾಯ ಅಗತ್ಯವಿರುವ ಈ ಸಂದರ್ಭದಲ್ಲಿ ಈ ರೀತಿಯ ತಪ್ಪು ಅಂಕಿ ಅಂಶಗಳು ಮಾರಕವಾಗಲಿವೆ ಎಂದು ಮಹಾಸಭೆಯವರು ಎಚ್ಚರಿಸಿದ್ದಾರೆ.
“ಜಾತಿಗಣತಿ ವರದಿ ತಯಾರಿಸುವಾಗ ಜೋಗಿ ಸಮಾಜದ ಯಾವುದೇ ಹಿರಿಯ ಮುಖಂಡರನ್ನೂ ಸಂಪರ್ಕಿಸದೆ, ಅವರಿಂದ ಮಾಹಿತಿ ಪಡೆಯದೆ ಸಲ್ಲಿಸಲಾಗಿರುವ ಈ ವರದಿ ಸಂಪೂರ್ಣ ತಪ್ಪು ಹಾಗೂ ದ್ರೋಹಾತ್ಮಕವಾಗಿದೆ” ಎಂಬ ಆರೋಪವನ್ನು ಅವರು ಮುಂದಿಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ವರದಿಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸದೆ, ಜೋಗಿ ಸಮಾಜದ ಹಿರಿಯ ಮುಖಂಡರ ಸಲಹೆ-ಸಹಕಾರದೊಂದಿಗೆ ಮತ್ತೊಮ್ಮೆ ನಿಖರ ಜಾತಿಗಣತಿ ನಡೆಸುವಂತೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಮನವಿಮಾಡಲಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ಅಧಿಕೃತವಾಗಿ ಮನವಿ ಸಲ್ಲಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
City Today News 9341997936
