ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ಲೋಕಾಯುಕ್ತ ತನಿಖೆ ಮುಕ್ತಾಯವಾಗುವವರೆಗೆ ತಡೆಹಿಡಿಯಬೇಕೆಂದು ಕೆ.ಜಿ. ಶ್ರೀನಿವಾಸ್ ಆಗ್ರಹ

ಬೆಂಗಳೂರು, ಏಪ್ರಿಲ್ 28:
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿ.ಬಿ.ಎಂ.ಪಿ) 2005 ರಿಂದ 2017ರ ಅವಧಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸಿದ ಪೌರಕಾರ್ಮಿಕರ ಇ.ಎಸ್.ಐ. ಮತ್ತು ಪಿ.ಎಫ್. ನಿಧಿಗಳ ಬಗ್ಗೆ ಉಂಟಾಗಿರುವ ಭಾರಿ ಅವ್ಯವಹಾರ ಕುರಿತು ಭ್ರಷ್ಟಾಚಾರ ನಿರ್ಮೂಲನೆ ಕಾಯಿದೆಯಡಿ ಪ್ರಕರಣ ದಾಖಲಾಗಿದ್ದು (ACB/ಬೆಂ.ನರಾ/ಮೊ.ಸಂಖ್ಯೆ 40/2017), ಪ್ರಸ್ತುತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಸುಮಾರು ₹384 ಕೋಟಿ ಮೌಲ್ಯದ ಇ.ಎಸ್.ಐ. ಮತ್ತು ಪಿ.ಎಫ್. ನಿಧಿ, ಹಾಗೂ 6,600 ನಕಲಿ ಪೌರಕಾರ್ಮಿಕರ ವೇತನದ ರೂಪದಲ್ಲಿ ₹550 ಕೋಟಿ ಮೊತ್ತದ ವಂಚನೆಯ ಆರೋಪ ಕೇಳಿಬಂದಿದೆ.

ಈ ಸಂಬಂಧ ಈಗಾಗಲೇ ಬಿ.ಬಿ.ಎಂ.ಪಿಯಿಂದ ತಾತ್ಕಾಲಿಕ ತನಿಖಾ ತಂಡ ರಚನೆಗೊಂಡಿದ್ದು, ತನಿಖೆಗೆ ಸಹಕಾರ ನೀಡಲಾಗುತ್ತಿದೆ. ಆದರೆ, ನಕಲಿ ಪೌರಕಾರ್ಮಿಕರ ಪಟ್ಟಿ ಇನ್ನೂ ಅಧಿಕೃತವಾಗಿ ಪ್ರಕಟವಾಗಿಲ್ಲ. ಈ ಸಂದರ್ಭದಲ್ಲಿ ಪೌರಕಾರ್ಮಿಕರ ಖಾಯಂಗೊಳಿಸುವ ಪ್ರಕ್ರಿಯೆ ಆರಂಭಿಸಿದ್ದರೆ, ನೈಜವಾಗಿ ದುಡಿದ ಕಾರ್ಮಿಕರು ವಂಚಿತರಾಗುವ ಭೀತಿ ಇದೆ ಎಂದು ಕೆ.ಜಿ. ಶ್ರೀನಿವಾಸ್ ಅವರು ತಿಳಿಸಿದರು.

ಅವರು ಬೆಂಗ್ಳೂರಿನ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡುತ್ತಾ, “ಅನಧಿಕೃತವಾಗಿ ಗೈರುಹಾಜರಿರುವವರು ಮತ್ತು ಒಂದುವರ್ಷದೊಳಗಿನ ನೇರ ಪಾವತಿ ಪೌರಕಾರ್ಮಿಕರನ್ನೂ ಖಾಯಂಗೊಳಿಸುವ ಪ್ರಕ್ರಿಯೆಯಲ್ಲಿ ಪರಿಗಣಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದು ನ್ಯಾಯೋಚಿತವಲ್ಲ. ಪ್ರಕರಣದ ತನಿಖೆ ಮುಕ್ತಾಯವಾಗಿ, ನಕಲಿ ಪೌರಕಾರ್ಮಿಕರ ಪಟ್ಟಿ ಅಧಿಕೃತವಾಗಿ ಪ್ರಕಟವಾಗುವವರೆಗೆ ಪೌರಕಾರ್ಮಿಕರ ಖಾಯಂ ಪ್ರಕ್ರಿಯೆಯನ್ನು ತಕ್ಷಣ ತಡೆಹಿಡಿಯಬೇಕು,” ಎಂದು ಆಗ್ರಹಿಸಿದರು.

ಇದಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ತನಿಖಾ ತಂಡ ಹಾಗೂ ಬಿ.ಬಿ.ಎಂ.ಪಿಯ ಕಾನೂನು ವಿಭಾಗದ ಮುಖ್ಯಸ್ಥರೊಂದಿಗೆ ತಕ್ಷಣ ಜಂಟಿ ಸಭೆ ಕರೆಯಬೇಕು ಮತ್ತು ಖಾಯಂಗೊಳಿಸುವ ಪ್ರಕ್ರಿಯೆಯ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಬೇಕೆಂದು ಅವರು ಮನವಿ ಸಲ್ಲಿಸಿದರು.

City Today News 9341997936

Leave a comment

This site uses Akismet to reduce spam. Learn how your comment data is processed.